ಹೊಸಪೇಟೆ (ವಿಜಯನಗರ): ಸರ್ಕಾರದ ಮಹತ್ವಾಕಾಂಕ್ಷಿ ಪಂಚಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಸ್ಯೆಗಳನ್ನು ಆಲಿಸಿ, ಸಮರ್ಪಕವಾಗಿ ತಲುಪಿಸುವ ಕಾರ್ಯವನ್ನು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅನುಷ್ಠಾನ ಸಮಿತಿ ಮಾಡಬೇಕು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್.ಮೆಹರೋಜ್ ಖಾನ್ ಹೇಳಿದರು.
ಇಲ್ಲಿ ಸೋಮವಾರ ಸಮಿತಿಯ ಸಮಾಲೋಚನ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಕೆಲವು ಸಣ್ಣಪುಟ್ಟ ಸಮಸ್ಯೆಗಳಿಂದ ಅರ್ಹ ಫಲಾನುಭವಿಗಳು ಯೋಜನೆಗಳನ್ನು ಪಡೆಯುವಲ್ಲಿ ವಂಚಿತರಾಗಿದ್ದರೆ, ಅಂತಹ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡಲು ಸಮಿತಿ ಸದಸ್ಯರು ಕಾರ್ಯೋನ್ಮುಖರಾಗಬೇಕಿದೆ ಎಂದರು.
ಕೌಶಲ ತರಬೇತಿ: ‘ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಲ್ಲಿ 8,007 ಮಂದಿ ನೋಂದಾಯಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಮೊದಲ ಬಾರಿಗೆ ವಿಜಯನಗರ ಜಿಲ್ಲೆಯಿಂದಲೇ ಯುವನಿಧಿ ಫಲಾನುಭವಿಗಳಿಗೆ ಕೌಶಲಾಧಾರಿತ ತರಬೇತಿ ಕಾರ್ಯಾಗಾರವನ್ನು ನೀಡಲು ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಪೂರ್ವಸಿದ್ಧತೆಗಳನ್ನು ಕೈಗೊಳ್ಳಲಾಗುವುದು’ ಎಂದು ಅವರು ಮೆಹರೋಜ್ ಖಾನ್ ತಿಳಿಸಿದರು.
ಸಮಿತಿ ಸದಸ್ಯ ಪರಶುರಾಮ ಮಾತನಾಡಿ, ಹಗರಿಬೊಮ್ಮನಹಳ್ಳಿ ಡಿಪೋದಲ್ಲಿ ಸುಮಾರು 27 ಚಾಲಕ ಕಂ ನಿರ್ವಾಹಕರ ಕೊರತೆಯಿದೆ. 15 ಬಸ್‌ಗಳ ಅಗತ್ಯವಿದೆ ಎಂದು ತಿಳಿದುಬಂದಿದೆ. ವಿಭಾಗೀಯ ನಿಯಂತ್ರಣಾಧಿಕಾರಿಗಳು ವಿವಿಧ ಡಿಪೋಗಳಲ್ಲಿರುವ ಸಿಬ್ಬಂದಿ ಕೊರತೆ ನಿರ್ವಹಿಸಲು ಮುಂದಾಗಬೇಕು ಎಂದರು.
ಸದಸ್ಯೆ ಭಾಗ್ಯಲಕ್ಷ್ಮಿ ಭರಾಡ ಮಾತನಾಡಿ, ರಾಜ್ಯದಲ್ಲಿಯೇ ಎರಡನೇ ಅತಿ ಹೆಚ್ಚು ಪ್ರವಾಸಿಗರು ಆಗಮಿಸುವ ವಿಜಯನಗರ ಜಿಲ್ಲಾ ಕೇಂದ್ರದಲ್ಲಿ ನಿಲ್ದಾಣದಲ್ಲಿ ಸ್ವಚ್ಛತೆ, ಶುದ್ಧ ಕುಡಿಯುವ ನೀರು ಪೂರೈಕೆ, ಶೌಚಾಲಯಗಳ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ದೂರಿದರು. ಇದಕ್ಕೆ ಸ್ಪಂದಿಸಿದ ವಿಭಾಗೀಯ ಸಂಚಾರ ಅಧಿಕಾರಿ ರಾಜಶೇಖರ್.ಬಿ.ವಾಜಂತ್ರಿ ಪ್ರತಿಕ್ರಿಯಿಸಿ ಬಸ್ ನಿಲ್ದಾಣದಲ್ಲಿನ ದೋಷಗಳನ್ನು ಸರಿಪಡಿಸಲು ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಅಹಾರ ಇಲಾಖೆಯಲ್ಲಿ ಹೊಸ ಪಡಿತರ ಅರ್ಜಿಗೆ ಅವಕಾಶ ನೀಡಿಲ್ಲ. ಈಗಾಗಲೇ ಶೇ 90ರಷ್ಟು ಪಡಿತರ ನೋಂದಣಿ ಕಾರ್ಯವಾಗಿದೆ. ಅನಾರೋಗ್ಯ ಪೀಡಿತರಿಗೆ ಆರೋಗ್ಯ ಸೇವೆಗಳಿಗೆ ಆದ್ಯತೆ ನೀಡಿ ರೇಷನ್ ಕಾರ್ಡ್‌ಗಳಲ್ಲಿ ಸೇರಿಸುವ ಪ್ರಕ್ರಿಯೆ ನಿರಂತರವಾಗಿ ಅವಕಾಶ ನೀಡಲಾಗಿದೆ. ಸಮಿತಿ ಸದಸ್ಯರು ಅಂತಹ ಪ್ರಕರಣಗಳಿದ್ದಲ್ಲಿ ಮಾಹಿತಿ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಷಾ ಹೇಳಿದರು.
ಜಿಲ್ಲಾ ಮಟ್ಟದ ಪ್ರಾಧಿಕಾರದ ಉಪಾಧ್ಯಕ್ಷ ಕೆ.ಬದಾವಲಿ, ಕೆ.ಎಸ್.ಶಾಂತನಗೌಡ, ಎಚ್.ಜಂದಿಸಾಹೇಬ್, ಸದಸ್ಯರು, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಜೆ.ಎಂ.ಅನ್ನದಾನಸ್ವಾಮಿ, ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರಿಯಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ವೇತಾ, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಹಟ್ಟಪ್ಪ, ಹೊಸಪೇಟೆ ವಿಭಾಗದ ಕೆಕೆಆರ್‌ಟಿಸಿ ಅಧಿಕಾರಿ ರಾಜಶೇಖರ್, ಜೆಸ್ಕಾಂ ಇಇ ಸತೀಶ್ ಕುಮಾರ್ ಇದ್ದರು.
Highlights - ಜಿಲ್ಲೆಯಲ್ಲಿದೆ ಬಸ್‌ಗಳ ಕೊರತೆ ಬಸ್ ನಿಲ್ದಾಣದಲ್ಲಿ ಶುಚಿತ್ವ ಮಾಯ ಯುವಜನತೆಗೆ ಕೌಶಲ ತರಬೇತಿ ನಿರೀಕ್ಷೆ
Cut-off box - ‘ಗೃಹಲಕ್ಷ್ಮಿ: ನಾಮಿನಿಗೆ ಹಣ ನೀಡುತ್ತಿಲ್ಲ’ ‘ಗೃಹಲಕ್ಷ್ಮಿ ಯೋಜನೆಯಲ್ಲಿ ಮರಣ ಹೊಂದಿದ ಫಲಾನುಭವಿಗಳ ಖಾತೆಯಲ್ಲಿರುವ ಹಣವನ್ನು ನಾಮಿನಿಗಳಿಗೆ ನೀಡಲು ಬ್ಯಾಂಕ್‌ಗಳು ಸಮಸ್ಯೆ ಸೃಷ್ಟಿಸುತ್ತಿವೆ ಎಂದು ಅನುಷ್ಠಾನ ಸಮಿತಿ ಸದಸ್ಯ ಗಿರೀಶ್ ಗೌರಜ್ಜನವರ್ ದೂರಿದರು. ಈ ಸಮಸ್ಯೆ ಬಗೆಹರಿಸುವಂತೆ ಲೀಡ್ ಬ್ಯಾಂಕ್ ಮ್ಯಾನೇಜರ್ ಅವರಿಗೆ ಸೂಚಿಸುವುದಾಗಿ ಜಿಲ್ಲಾ ಪಂಚಾಯಿತಿ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಷಾ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.