ಹಗರಿಬೊಮ್ಮನಹಳ್ಳಿ: ಬಿರು ಬೇಸಿಗೆಯಲ್ಲೂ ತಂಗಾಳಿ ಸೂಸುವ ಗೋಪುರ ಮಂಟಪ ತಾಲ್ಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿದೆ.
ಗ್ರಾಮದ ಹೊರ ವಲಯದ ಬೆಟ್ಟದ ತುದಿಯಲ್ಲಿರುವ ಬಂಡೆರಂಗನಾಥ ದೇವಸ್ಥಾನವನ್ನು 17ನೇ ಶತಮಾನದಲ್ಲಿ ಮೈಸೂರ ಅರಸರ ಕಾಲದಲ್ಲಿ ಹರಪನಹಳ್ಳಿ ಪಾಳೇಗಾರರಾಗಿದ್ದ ಸೋಮಶೇಖರ ನಾಯಕನ ಸಾಮಂತನಾಗಿದ್ದ ದಂಡನಾಯಕ ಓಬಳನಾಯಕ ನಿರ್ಮಿಸಿದ್ದನೆಂದು ಇತಿಹಾಸಕಾರರು ಹೇಳುತ್ತಾರೆ. ಇದೇ ಸಂದರ್ಭದಲ್ಲಿ ಕಡು ಬೇಸಿಗೆಯಲ್ಲೂ ತಂಗಾಳಿ ಸೂಸುವ ಮಂಟಪವನ್ನು ನಿರ್ಮಿಸಿದ್ದನೆಂದು ಹೊಂಡದ ಬಳಿ ಇರುವ ಶಾಸನಗಳು ಹೇಳುತ್ತವೆ. ಇದನ್ನು ವೀಕ್ಷಣಾ ಗೋಪುರ ಅಂತಲೂ ಕರೆಯಲಾಗುತ್ತಿದೆ.
ದೇವಸ್ಥಾನಕ್ಕೆ ಬರುವ ಭಕ್ತರು ಗೋಪುರದ ಕೆಳಗೆ ಕೆಲಕಾಲ ವಿಶ್ರಮಿಸಿಕೊಂಡು ತಂಗಾಳಿಯ ತಂಪನ್ನು ಅನುಭವಿಸಿಯೇ ಹೋಗುತ್ತಾರೆ. ನೈಸರ್ಗಿಕವಾಗಿ ತಂಗಾಳಿ ಹೊರ ಸೂಸುವುದನ್ನು ಇಲ್ಲಿಗೆ ಬರುವ ಪ್ರವಾಸಿಗರು ಬೆರಗುಗಣ್ಣಿನಿಂದ ಕಣ್ತುಂಬಿಕೊಳ್ಳುತ್ತಾರೆ.
ಇತಿಹಾಸ ಪ್ರಸಿದ್ಧ ಈ ತಂಗಾಳಿ ಗೋಪುರ ಶಿಥಿಲಗೊಂಡಿತ್ತು. ಇದೀಗ ಪುನರ್ ನಿರ್ಮಾಣ ಮಾಡಲಾಗಿದೆ. ತಮಿಳುನಾಡಿನ ಕಲಾವಿದರು ಮೂಲರೂಪಕ್ಕೆ ಚ್ಯುತಿ ಬರದಂತೆ ಗೋಪುರವನ್ನು ಮತ್ತೆ ಪುನರ್ ರೂಪಿಸಿದ್ದಾರೆ. ಇದರಿಂದಾಗಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದೆ. ಅನೇಕರು ಇಲ್ಲಿ ವಿರಮಿಸಿ ತಂಗಾಳಿಯ ತಂಪನ್ನು ಅನುಭವಿಸುವುದು ಸಾಮಾನ್ಯವಾಗಿದೆ.
ತುಂಗಭದ್ರಾ ಹಿನ್ನೀರು ಪ್ರದೇಶದ ಪಕ್ಕದ ಬಂಡೆಯಲ್ಲಿ ಒಡಮೂಡಿರುವ ತಾಲ್ಲೂಕಿನ ತಂಬ್ರಹಳ್ಳಿಯ ಬಂಡೆ ರಂಗನಾಥ ಸ್ವಾಮಿ, ಈ ದೇವಸ್ಥಾನದ ನಿರ್ಮಾಣಕ್ಕೆ ತನ್ನದೇ ಆದ ಇತಿಹಾಸವಿದೆ. ಬೆಟ್ಟದ ಕೆಳಗೆ ನಿರ್ಮಾಣಗೊಂಡಿರುವ ಬಾವಿಗೂ ಕೂಡ ಓಬಳನಾಯಕ ಬಾವಿ ಎಂದು ಹೇಳಲಾಗುತ್ತಿದೆ. ಈ ತಂಗಾಳಿ ಗೋಪುರದ ನಾಲ್ಕುದಿಕ್ಕಿಗೂ ಬಾಲಕೃಷ್ಣ, ಉಗ್ರನರಸಿಂಹ, ವರಾಹಸ್ವಾಮಿ ಮೂರ್ತಿಗಳನ್ನು ಕೆತ್ತಲ್ಪಟ್ಟಿವೆ. ಗೋಪುರದ ಕೆಳಗಿನ ಕಟ್ಟೆಯಲ್ಲಿ ಕಲ್ಲಿನಲ್ಲಿ ಕೆತ್ತಿರುವ ಬಟ್ಟಲುಗುಣಿ ಆಕರ್ಷಣೀಯವಾಗಿದೆ.
17ನೇ ಶತಮಾನದಲ್ಲಿ ಓಬಳನಾಯಕನಿಂದ ಗೋಪುರ ನಿರ್ಮಾಣ ಶಿಥಿಲಗೊಂಡ ಗೋಪುರ; ಮರುನಿರ್ಮಾಣ ಪ್ರವಾಸಿಗರ ನೆಚ್ಚಿನ ತಾಣವಾಗಿ ಮಾರ್ಪಾಡು
ತಂಪಾದ ಗಾಳಿ ಅನುಭವಿಸುವುದಕ್ಕಾಗಿ ರಂಗನಾಥಸ್ವಾಮಿ ಬೆಟ್ಟದಲ್ಲಿರುವ ತಂಗಾಳಿ ಗೋಪುರದಲ್ಲಿ ಕುಳಿತು ಗಂಟೆಗಟ್ಟಲೇ ವಿಶ್ರಮಿಸಿಕೊಳ್ಳುತ್ತೇವೆ. ಪ್ರತಿ ಬೇಸಿಗೆಯಲ್ಲೂ ಇಲ್ಲಿಗೆ ಭೇಟಿ ನೀಡುತ್ತೇವೆ
-ಆನಂದ್ ಹೊಸಪೇಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.