ADVERTISEMENT

ಡೊಳ್ಳಿನ ಹಾಡುಗಳ ದಾಖಲೀಕರಣ ಅಗತ್ಯ: ಸಿದ್ದಣ್ಣ ಜಕಬಾಳ

ಹಾಲುಮತ ಸಂಸ್ಕೃತಿ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 10:55 IST
Last Updated 19 ಮಾರ್ಚ್ 2021, 10:55 IST
ಹಾಲುಮತ ಸಂಸ್ಕೃತಿ ಸಮ್ಮೇಳನದ ಸರ್ವಾಧ್ಯಕ್ಷ ಜಾನಪದ ವಿದ್ವಾಂಸ ಸಿದ್ದಣ್ಣ ಎಫ್‌.ಜಕಬಾಳ ಡೊಳ್ಳು ಬಾರಿಸಿ ಗಮನ ಸೆಳೆದರು
ಹಾಲುಮತ ಸಂಸ್ಕೃತಿ ಸಮ್ಮೇಳನದ ಸರ್ವಾಧ್ಯಕ್ಷ ಜಾನಪದ ವಿದ್ವಾಂಸ ಸಿದ್ದಣ್ಣ ಎಫ್‌.ಜಕಬಾಳ ಡೊಳ್ಳು ಬಾರಿಸಿ ಗಮನ ಸೆಳೆದರು   

ಹೊಸಪೇಟೆ (ವಿಜಯನಗರ): ‘ಡೊಳ್ಳಿನ ಹಾಡುಗಳು ಅವುಗಳ ಹಾಡುಗಾರರೊಂದಿಗೆ ಮಾಯವಾಗುತ್ತಿವೆ. ಅವುಗಳನ್ನು ಸಂಗ್ರಹಿಸಿ ಸಂಪುಟಗಳ ರೂಪದಲ್ಲಿ ಪ್ರಕಟಿಸಿ ದಾಖಲಿಸಬೇಕು’ ಎಂದು ಜಾನಪದ ವಿದ್ವಾಂಸ ಸಿದ್ದಣ್ಣ ಎಫ್‌. ಜಕಬಾಳ ತಿಳಿಸಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಾಲುಮತ ಅಧ್ಯಯನ ಪೀಠದಿಂದ ಶುಕ್ರವಾರ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಹಾಲುಮತ ಸಂಸ್ಕೃತಿ ಸಮ್ಮೇಳನ–8ರ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.

‘ಡೊಳ್ಳಿನ ಹಾಡುಗಳ ಶಾಸ್ತ್ರೀಯ ಅಧ್ಯಯನ ಕೈಗೊಂಡು ಅವುಗಳ ಸಾಂಸ್ಕೃತಿಕ ಹಿನ್ನೆಲೆಯೊಂದಿಗೆ ಕುರುಬ ಸಮುದಾಯದ ನಿಜವಾದ ಸಾಂಸ್ಕೃತಿಕ ಇತಿಹಾಸ ನಿರ್ಮಿಸಿಕೊಳ್ಳಬೇಕು. ಯಾಂತ್ರಿಕ ಯುಗದಲ್ಲಿ ಸಾಂಪ್ರದಾಯಿಕ ಹಾಡುಗಳಾದ ಕರಿಪದ, ಗಂಗಿಪೂಜಿ ಪದ, ಹರಕೆಯ ಪದ, ಸದರ ಕಲೆ, ಕುಣಿತ ಮುಂತಾದವುಗಳನ್ನು ಚಿತ್ರೀಕರಣ ಮಾಡಿ, ಜಾಲತಾಣ ಮೂಲಕ ಪ್ರಸಾರ ಮಾಡಬೇಕು’ ಎಂದು ಹೇಳಿದರು.

ADVERTISEMENT

‘ಮರಾಠಿ, ತೆಲುಗು ಸೇರಿದಂತೆ ಇತರೆ ಭಾಷೆಯ ಡೊಳ್ಳಿನ ಹಾಡುಗಳು ಹಾಗೂ ನಮ್ಮ ಡೊಳ್ಳಿನ ಹಾಡುಗಳ ತೌಲನಿಕ ಅಧ್ಯಯನ ನಡೆಯಬೇಕು. ಸಮಗ್ರ ಅಧ್ಯಯನವೂ ಮಾಡಬೇಕು. ಹೊಸ ತಲೆಮಾರಿಗೆ ಡೊಳ್ಳಿನ ಹಾಡುಗಳ ಕಮ್ಮಟ ಏರ್ಪಡಿಸಿ, ಈ ಮುಖೇನ ಉಳಿಸಿ ಬೆಳೆಸಬೇಕು’ ಎಂದು ತಿಳಿಸಿದರು.

‘ಬೀರದೇವರ, ಭರಮದೇವರ, ಮಾಯವ್ವ, ಮಾಳಿಂಗರಾಯ ಮುಂತಾದವರ ಹಾಡುಗಳಿಗೆ ರಂಗದ ಕಲ್ಪನೆ ಕೊಟ್ಟು ದೃಶ್ಯ ರೂಪಕವಾಗಿ ಮಾರ್ಪಡಿಸಿ, ದೃಶ್ಯಕಾವ್ಯದ ಸ್ವರೂಪ ಕೊಡಬೇಕು. ಆಗ ಪರಿಣಾಮಕಾರಿಯಾಗಿ ಮನದಟ್ಟು ಮಾಡಿಕೊಡಲು ಸಹಾಯಕವಾಗುತ್ತದೆ’ ಎಂದರು.

ಸಮ್ಮೇಳನ ಉದ್ಘಾಟಿಸಿದ ಹಿರಿಯ ವಿದ್ವಾಂಸ ವೀರಣ್ಣ ರಾಜೂರ, ‘ಹಾಲುಮತದ ಬಗ್ಗೆ ಅಧ್ಯಯನ ನಡೆದಿಲ್ಲ. ಕನ್ನಡದಲ್ಲಿ ಕನಿಷ್ಠ ಅಧ್ಯಯನವೂ ಮಾಡಿಲ್ಲ. ಶಂಭಾ ಜೋಶಿ ಬಿಟ್ಟರೆ ಬೇರೆಯವರಿಂದ ಯಾವುದೇ ಕೆಲಸ ಆಗಿಲ್ಲ. ಹಾಲುಮತದ ಸಂಸ್ಕೃತಿ ಬಗ್ಗೆ ಶಿಸ್ತುಬದ್ಧ ಅಧ್ಯಯನ ನಡೆಬೇಕಾಗಿದೆ’ ಎಂದು ಹೇಳಿದರು.

‘ಹಾಲುಮತ ಸಂಪ್ರದಾಯ ಬಹಳ ವಿಶಿಷ್ಟವಾದುದು. ಯಾರ ಜತೆಗೂ ಜಗಳ, ವಿರೋಧ ಕಟ್ಟಿಕೊಳ್ಳುವ ಜನ ಹಾಲುಮತದವರಲ್ಲ. ಗುಡ್ಡಗಾಡಿನಲ್ಲಿದ್ದ ಜನ ನಾಡಿಗೆ ಬಂದು ಎಲ್ಲರೊಂದಿಗೆ ಹೊಂದಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಈ ಸಮುದಾಯವು ಸಮಾಜಕ್ಕೆ ಹಾಲು, ಕಂಬಳಿ ಕೊಡುಗೆ ನೀಡಿದೆ. ಈ ಸಮುದಾಯದ ಮುಖ್ಯ ಆಕರ ಸಾಹಿತ್ಯ ಡೊಳ್ಳಿನ ಹಾಡುಗಳು. ಅದರ ಮೂಲಕವೇ ಅವರ ಸಂಸ್ಕೃತಿಯ ಪರಿಚಯ ಕಟ್ಟಿಕೊಡುವ ಕೆಲಸ ಮಾಡಬೇಕಿದೆ’ ಎಂದರು.

ಕುಲಪತಿ ಪ್ರೊ.ಸ.ಚಿ. ರಮೇಶ ಮಾತನಾಡಿ, ‘ಕಾಡುಪ್ರಾಣಿಗಳಿಂದ ರಕ್ಷಣೆ ಪಡೆಯಲು ಅರಣ್ಯದಂಚಿನ ಜನ ಹಾಡು ಹಾಡುತ್ತ ಓಡಾಡುತ್ತಾರೆ. ಈಗಲೂ ಮಲೆನಾಡಿನಲ್ಲಿ ಇದನ್ನು ಕಾಣಬಹುದಾಗಿದೆ. ಅಂತಹ ಹಿನ್ನೆಲೆಯೊಳಗೆ ಹುಟ್ಟಿಕೊಂಡಿದ್ದು ಡೊಳ್ಳಿನ ಹಾಡುಗಳು. ಕಾವ್ಯ, ಹಾಡು ಸೃಷ್ಟಿಯಾಗಿದ್ದೆ ಆಯಾ ಸಮುದಾಯಗಳ ಕಥೆ ಹೇಳುವುದಕ್ಕಾಗಿ’ ಎಂದು ಹೇಳಿದರು.

ಸಿದ್ದಣ್ಣ ಎಫ್‌. ಜಕಬಾಳ ಸಂಪಾದನೆಯ ‘ಡೊಳ್ಳಿನ ಹಾಡುಗಳು’, ಚನ್ನಪ್ಪ ಕಟ್ಟಿ ಸಂಪಾದನೆಯ ‘ಜನಪದ ಅಮೋಘಸಿದ್ಧ ಮಹಾಕಾವ್ಯ’ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಇದಕ್ಕೂ ಮುನ್ನ ಸಮ್ಮೇಳನದ ಸರ್ವಾಧ್ಯಕ್ಷರನ್ನು ಆಡಳಿತಾಂಗದಿಂದ ಮಂಟಪ ಸಭಾಂಗಣದ ವರೆಗೆ ಸಾಂಪ್ರದಾಯಿಕ ಶೈಲಿಯಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು. ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ, ಡೊಳ್ಳು ಕಲಾವಿದರಾದ ಸುಭದ್ರಮ್ಮ, ಕಾರಮಂಚಪ್ಪ, ಹಾಲುಮತ ಅಧ್ಯಯನ ಪೀಠದ ಸಂಚಾಲಕ ಪ್ರೊ.ಎಫ್‌.ಟಿ. ಹಳ್ಳಿಕೇರಿ, ಸಂಶೋಧನಾ ವಿದ್ಯಾರ್ಥಿ ಜಿ. ಸಂತೋಷಕುಮಾರ್‌ ಇದ್ದರು.

‘ಏಳುಕೋಟಿ, ಚಾಂಗಮಲೋ ಬೆಸೆಯುವ ಮಂತ್ರ’
‘ಹಾಲುಮತದವವರ ಏಳುಕೋಟಿ, ಚಾಂಗಮಲೋ ಶಬ್ದಗಳು ಸಮಾಜವನ್ನು ಬೆಸೆಯುವಂತಹವು. ಅದರಲ್ಲೂ ಕನ್ನಡಿಗರು, ಮರಾಠಿಗರನ್ನು ಬೆಸೆಯುವ ಮಂತ್ರಗಳು. ಆದರೆ, ಕೊಲ್ಲಾಪುರದಲ್ಲಿ ಕನ್ನಡಿಗರಿಗೆ ಕನ್ನಡ ಮಾತನಾಡಬಾರದು ಎಂದು ತಾಕೀತು ಮಾಡುತ್ತಿರುವುದು. ಕನ್ನಡ ಫಲಕಗಳಿಗೆ ಮಸಿ ಬಳಿಯುತ್ತಿರುವ ಘಟನೆಗಳು ಒಳ್ಳೆಯ ಬೆಳೆವಣಿಗೆಯಲ್ಲ. ನಮ್ಮ ಪೂರ್ವಜರು ಕೊಟ್ಟ ಮಂತ್ರಗಳ ಅರ್ಥ ಮರೆತು ಹೋಯಿತೇ’ ಎಂದು ವಿದ್ವಾಂಸ ಸಿದ್ದಣ್ಣ ಜಕಬಾಳ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.