ADVERTISEMENT

ಹಂಪಿ ಏಕಗವಾಕ್ಷಿ ವ್ಯಾಪ್ತಿಗೆ ಬಂದರಷ್ಟೇ ಅಭಿವೃದ್ಧಿ

ಕೇಂದ್ರ ಪ್ರವಾಸೋದ್ಯಮ ಸಚಿವರ ಸ್ಪಷ್ಟ ನುಡಿ–ಕೊಂಡಿಯಾಗಿ ಕೆಲಸ ಮಾಡಲು ಶಾಸಕರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 3:14 IST
Last Updated 7 ಜನವರಿ 2026, 3:14 IST
ಕೇಂದ್ರದ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೆಖಾವತ್‌ ಅವರು ಮಂಗಳವಾರ ಹಂಪಿ ಹೆರಿಟೇಜ್‌ ರೆಸಾರ್ಟ್‌ನಲ್ಲಿ ಹೋಟೆಲ್ ಉದ್ಯಮಿಗಳ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು  –ಪ್ರಜಾವಾಣಿ ಚಿತ್ರ/ ಲವ ಕೆ.
ಕೇಂದ್ರದ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೆಖಾವತ್‌ ಅವರು ಮಂಗಳವಾರ ಹಂಪಿ ಹೆರಿಟೇಜ್‌ ರೆಸಾರ್ಟ್‌ನಲ್ಲಿ ಹೋಟೆಲ್ ಉದ್ಯಮಿಗಳ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು  –ಪ್ರಜಾವಾಣಿ ಚಿತ್ರ/ ಲವ ಕೆ.   

ಹೊಸಪೇಟೆ (ವಿಜಯನಗರ): ‘ಹಂಪಿಯಲ್ಲಿ ಹಲವು ಇಲಾಖೆಗಳ ನಡುವೆ ಸಮನ್ವಯ ಸಾಧಿಸದೆ ಅಭಿವೃದ್ಧಿ ಕೆಲಸ ಸಾಧ್ಯವಿಲ್ಲ, ಮೊದಲಾಗಿ ಅದನ್ನು ಮಾಡಬೇಕು. ಏಕಗವಾಕ್ಷಿ ವ್ಯಾಪ್ತಿಗೆ ತಂದು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿದರೆ ಅದನ್ನು ಕಾಲಮಿತಿಯೊಳಗೆ ಜಾರಿಗೆ ತರುವ ಹೊಣೆಗಾರಿಕೆ ನಾವು ಹೊತ್ತುಕೊಳ್ಳುತ್ತೇವೆ’ ಎಂಬ ಸ್ಪಷ್ಟ ಭರವಸೆಯನ್ನು ಕೇಂದ್ರದ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ನೀಡಿದ್ದಾರೆ.

ಹಂಪಿಯಲ್ಲಿ ಎರಡು ದಿನ ಪ್ರವಾಸ ಮಾಡಿದ ಸಚಿವರು ಮಂಗಳವಾರ ಹಂಪಿ ಹೆರಿಟೇಜ್ ರೆಸಾರ್ಟ್‌ನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಜತೆಗೆ ನಡೆಸಿದ ಸಭೆಯಲ್ಲಿ ಅವರು ಇದನ್ನು ತಿಳಿಸಿದರು. ಸೋಮವಾರ ಸಂಜೆ ಸ್ಥಳೀಯ ಶಾಸಕ ಎಚ್‌.ಆರ್‌.ಗವಿಯಪ್ಪ ಅವರೊಂದಿಗೆ ಸುದೀರ್ಘ ನಡೆಸಿದ್ದರು.

ಅಂತರರಾಷ್ಟ್ರೀಯ ಖ್ಯಾತಿಯ ವಾಸ್ತು ವಿನ್ಯಾಸಕಾರ ದಿವಾಕರ್ ಅವರು ಶಾಸಕರ ಸಮ್ಮುಖದಲ್ಲಿ ಸಚಿವರಿಗೆ ಹಂಪಿಯನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದನ್ನು ತ್ರಿಡಿ ವಿನ್ಯಾಸದ ಮೂಲಕ ತೋರಿಸಿಕೊಟ್ಟರು. ಇದರಿಂದ ಪ್ರಭಾವಿತರಾದ ಸಚಿವ ಶೆಖಾವತ್‌, ‘ಯೋಜನೆ ಚೆನ್ನಾಗಿದೆ, ಆದರೆ ಇಲ್ಲಿ ವಿವಿಧ ಇಲಾಖೆಗಳ ನಡುವೆ ಸಮನ್ವಯ ಕೊರತೆಯಿಂದ ಅಡ್ಡಿ ವಿಪರೀತವಾಗಿದೆ. ಹೀಗಾಗಿ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ಬರಬೇಕು. ಶಾಸಕರೇ ಇಲ್ಲಿ ವಿವಿಧ ಇಲಾಖೆಗಳ ನಡುವೆ ಹಾಗೂ ರಾಜ್ಯ, ಕೇಂದ್ರಗಳ ಜತೆಗೆ ಕೊಂಡಿಯಾಗಿ ನಿಂತು ಕೆಲಸ ಮಾಡಬೇಕು. ಜಿಲ್ಲಾಧಿಕಾರಿ ಅವರು ಏಕಗವಾಕ್ಷಿಗೆ ವ್ಯವಸ್ಥೆ ಮಾಡಬೇಕು’ ಎಂದು ಸೂಚಿಸಿದರು.

‘ಸಮರ್ಪಕ, ಸಮನ್ವಯದಿಂದ ಕೂಡಿದ ಯೋಜನೆಯನ್ನು ಕೇಂದ್ರದ ಮುಂದೆ ಒಂದು ತಿಂಗಳೊಳಗೆ ತಂದರೆ, ಎರಡು ವರ್ಷದ ಒಳಗೆ ಅದನ್ನು ಜಾರಿ ತರುತ್ತೇನೆ’ ಎಂದು ಭರವಸೆ ನೀಡಿದರು.

ಹೋಟೆಲ್‌ ಉದ್ಯಮಿಗಳ ಸಭೆ: ಸಚಿವ ಶೆಖಾವತ್ ಅವರು ಮಂಗಳವಾರ ನಗರದ ಹೋಟೆಲ್ ಉದ್ಯಮಿಗಳ ಜತೆಗೂ ಮಾತುಕತೆ ನಡೆಸಿದರು. ಹಂಪಿ ಪ್ರವಾಸೋದ್ಯಮ ಉತ್ತೇಜನಕ್ಕೆ ಪ್ರತ್ಯೇಕ ವಿಮಾನ ನಿಲ್ದಾಣ, ವಿಶ್ವದರ್ಜೆಯ ರೈಲು ನಿಲ್ದಾಣ, ಹೆರಿಟೇಜ್ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಹಲವು ವಿಶೇಷ ರೈಲುಗಳ ಓಡಾಟಗಳಂತಹ ಸಲಹೆಗಳನ್ನು ನೀಡಿದರು ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೆಖಾವತ್‌ ಅವರು ಸೋಮವಾರ ರಾತ್ರಿ ಶಾಸಕ ಎಚ್.ಆರ್‌.ಗವಿಯಪ್ಪ ಜತೆಗೆ ನಡೆಸಿ ಸಭೆಯ ದೃಶ್ಯ –ಪ್ರಜಾವಾಣಿ ಚಿತ್ರ

ಪಿಕ್‌ನಿಕ್ ಜಾಗ ಅಲ್ಲ

‘ಹಂಪಿ ಎಂಬುದು ಒಂದು ಚಾರಿತ್ರಿಕ ಧಾರ್ಮಿಕ ತಾಣ. ಇದು ಪಿಕ್‌ನಿಕ್ ಜಾಗ ಅಲ್ಲ. ಹೀಗಾಗಿ ಇಲ್ಲಿನ ಇತಿಹಾಸ ಧಾರ್ಮಿಕ ಮಹತ್ವಗಳನ್ನು ತಿಳಿದುಕೊಂಡು ಯಾವ ಒಂದು ಕ್ಷೇತ್ರಕ್ಕೂ ಧಕ್ಕೆ ಬರದ ರೀತಿಯಲ್ಲಿ ಸುಸ್ಥಿರ ಅಭಿವೃದ್ಧಿಯ ಯೋಜನೆ ರೂಪಿಸಿ ಒಂದು ತಿಂಗಳೊಳಗೆ ರಾಜ್ಯದ ಮೂಲಕ ಕೇಂದ್ರಕ್ಕೆ ಸಲ್ಲಿಸಿ’ ಎಂದು ಸಚಿವ ಶೆಖಾವತ್‌ ತಿಳಿಸಿದರು. ಹಂಪಿಯ ಹೃದಯ ಭಾಗದಲ್ಲಿ (ಕೋರ್‌) ಯಾವುದೇ ನಿರ್ಮಾಣ ಕಾರ್ಯ ಮಾಡುವಂತಿಲ್ಲ. ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸುವಾಗ ಸ್ಮಾರಕಗಳಿಗೆ ಧಕ್ಕೆ ಆಗದ ರೀತಿಯಲ್ಲೇ ಅದನ್ನು ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು. ಇಂತಹ ಸಮನ್ವಯ ಕಾರ್ಯದಲ್ಲಿ ಸಹಕರಿಸದ ಆಧಿಕಾರಿಗಳ ವಿರುದ್ಧ ಶಿಸ್ತುಕ್ರಮ ನಿಶ್ಚಿತ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.