ಹೊಸಪೇಟೆ: ಹಂಪಿ ಉತ್ಸವದ ಭಾಗವಾಗಿ ವಿಶ್ವ ಪಾರಂಪರಿಕ ತಾಣವನ್ನು ಹಾಗೂ ಸ್ಮಾರಕಗಳನ್ನು ಆಗಸದಿಂದ ನೋಡುವ ಸಲುವಾಗಿ ಆರಂಭಿಸಲಾಗಿರುವ ‘ಹಂಪಿ ಬೈ ಸ್ಕೈ‘ ಹೆಲಿಕಾಪ್ಟರ್ ಸೇವೆಗೆ ಗುರುವಾರ ಕಮಲಾಪುರದಲ್ಲಿ ಚಾಲನೆ ನೀಡಲಾಯಿತು.
ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಶಾಸಕ ಎಚ್.ಆರ್.ಗವಿಯಪ್ಪ ಅವರ ಪುತ್ರ ವಿರೂಪಾಕ್ಷ ಹಾಗೂ ಇತರ ಮೂವರು ಪ್ರಥಮವಾಗಿ ಹಾರಾಟ ನಡೆಸಿದರು.
‘ಹಂಪಿಯ ಸ್ಮಾರಕಗಳನ್ನು ನೋಡುವುದು ಕಣ್ಣಿಗೆ ಹಬ್ಬ. ಪ್ರವಾಸಿಗರು ಅದನ್ನು ನಡೆದುಕೊಂಡು ಹೋಗಿ ನೋಡುವುದು ಸಾಮಾನ್ಯ. ಆಗಸದಿಂದ ಈ ಸ್ಮಾರಕಗಳನ್ನು ನೋಡುವ ಅನುಭವವೇ ವಿಭಿನ್ನ. ಹೀಗಾಗಿ ಹಂಪಿ ಉತ್ಸವದ ಸಮಯದಲ್ಲಿ ಆಸಕ್ತ ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಹೆಲಿಕಾಪ್ಟರ್ ಸೇವೆ ಒದಗಿಸಲಾಗುತ್ತಿದೆ. ನಾಲ್ಕು ದಿನ ಈ ಸೇವೆ ಇರಲಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.
‘ಕಮಲಾಪುರ, ವಿಜಯ ವಿಠಲ, ವಿರೂಪಾಕ್ಷ, ಅಂಜನಾದ್ರಿ ಬೆಟ್ಟ ನೋಡಿ ತುಂಬ ಖುಷಿಯಾಯಿತು. ಇದೊಂದು ಅತ್ಯುತ್ತಮ ಅನುಭವ’ ಎಂದು ಹೆಲಿಕಾಪ್ಟರ್‌ನಲ್ಲಿ ಹೋಗಿ ಬಂದ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದರು.
ಜಿಲ್ಲಾಧಿಕಾರಿ ಅವರ ಬಳಿಕ ದುಡ್ಡು ಪಾವತಿಸಿ ನೋಂದಾಯಿಸಿಕೊಂಡ ಪ್ರವಾಸಿಗರನ್ನು ಹೆಲಿಕಾಪ್ಟರ್‌ನಲ್ಲಿ ಕರೆದೊಯ್ಯಲಾಯಿತು. ಬಳಿಕ ಕೆಲವು ಮಾಧ್ಯಮದವರಿಗೂ ಪ್ರಯಾಣದ ಅವಕಾಶ ನೀಡಲಾಯಿತು.
ಏಳು ನಿಮಿಷದ ಹಾರಾಟಕ್ಕೆ ₹3,800 ಹಾಗೂ ಎಂಟು ನಿಮಿಷದ ಹಾರಾಟಕ್ಕೆ ₹4,300 ಶುಲ್ಕ ನಿಗದಿಪಡಿಸಲಾಗಿದೆ.
ಚಿಪ್ಸನ್ ಏವಿಯೇಷನ್ ಪ್ರೈ.ಲಿ. ಮತ್ತು ತುಂಬೆ ಏವಿಯೇಷನ್ ಪ್ರೈ.ಲಿ.ಕಂಪನಿಗಳು ಈ ಹಂಪಿ ಬೈ ಸ್ಕೈ ಸೇವೆ ಒದಗಿಸುತ್ತಿದ್ದು, ಕಮಲಾಪುರದ ಹೋಟೆಲ್ ಮಯೂರ ಭವನೇಶ್ವರಿ ಆವರಣದಲ್ಲಿ ಎರಡು ತಾತ್ಕಾಲಿಕ ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.