
ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಘನತೆ ಕಾಯ್ದುಕೊಳ್ಳಲು ಹಾಗೂ ಯುಜಿಸಿ, ನ್ಯಾಕ್ ಪೀರ್ ಸಮಿತಿಗಳ ಕಟ್ಟುನಿಟ್ಟಿನ ಸೂಚನೆಗಳನ್ನು ಪಾಲಿಸುವ ಸಲುವಾಗಿ ಇತರೆ ಸಂಶೋಧನಾ ಕೇಂದ್ರಗಳಿಗೆ ಮಾನ್ಯತೆ ನೀಡುವುದನ್ನು ಶಾಶ್ವತವಾಗಿ ನಿಲ್ಲಿಸಬೇಕೆಂದು ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘ ನಿರ್ಣಯ ಕೈಗೊಂಡಿದೆ.
ಸಂಘದ ಅಧ್ಯಕ್ಷ ಪ್ರೊ. ವಾಸುದೇವ ಬಡಿಗೇರ್, ಕಾರ್ಯದರ್ಶಿ ಪ್ರೊ.ಇ. ಯರ್ರಿಸ್ವಾಮಿ ಅವರ ನೇತೃತ್ವದಲ್ಲಿ ನವೆಂಬರ್ 12ರಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಅದನ್ನು ಕುಲಪತಿ, ಕುಲಸಚಿವರು, ಎಲ್ಲಾ ವಿಭಾಗಗಳ ಮುಖ್ಯಸ್ಥರಿಗೆ ಕಳುಹಿಸಲಾಗಿದೆ. ನಿರ್ಣಯದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
‘ಮಾನ್ಯತಾ ಕೇಂದ್ರಗಳಲ್ಲಿನ ಪಿಎಚ್.ಡಿ ಪದವಿಗಳನ್ನು ಪರಿಗಣಿಸಲು ನಿಯಮದಲ್ಲಿ ಅವಕಾಶ ಇಲ್ಲವೆಂದು ನ್ಯಾಕ್ ಪೀರ್ ಸಮಿತಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದಾಗ ಹೇಳಿತ್ತು. ಅದಕ್ಕೆ ಸ್ಪಂದಿಸಿದ್ದ ವಿಶ್ವವಿದ್ಯಾಲಯ, ಇನ್ಮುಂದೆ ಸಂಶೋಧನಾ ಕೇಂದ್ರಗಳಿಗೆ ಮಾನ್ಯತೆ ನೀಡುವುದು ಮತ್ತು ಮಾರ್ಗದರ್ಶಕರನ್ನಾಗಿ ಆಯ್ಕೆ ಮಾಡುವುದನ್ನು ನಿಲ್ಲಿಸಲಾಗುವುದೆಂದು ಸ್ಪಷ್ಟೀಕರಣ ನೀಡಿತ್ತು’ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
‘ಯುಜಿಸಿ 2022ರಲ್ಲಿ ಪ್ರಕಟಿಸಿದ ಪಿಎಚ್.ಡಿ ನಿಯಮದಂತೆ ಕಾಯಂ ಅಧ್ಯಾಪಕರಲ್ಲದ ಉದ್ಯೋಗಿಗಳಿಗೆ ಮಾರ್ಗದರ್ಶನ ಮಾಡಲು ಅವಕಾಶ ಇರುವುದಿಲ್ಲ. ಹೊರಗಿನ ಸಂಶೋಧನಾ ಕೇಂದ್ರಗಳಲ್ಲಿ ಯುಜಿಸಿ ನಿಯಮಾನುಸಾರ ಸ್ನಾತಕೋತ್ತರ ಕಾರ್ಯಕ್ರಮಗಳು ಇರುವುದಿಲ್ಲ. ಈ ಕೇಂದ್ರಗಳು ಕಾಯಂ ಅಧ್ಯಾಪಕರನ್ನು ಸಹ ಹೊಂದಿಲ್ಲ. ಇದರಿಂದ ಸಂಶೋಧನಾ ಗುಣಮಟ್ಟ ಕುಸಿತವಾಗುವುದರ ಜತೆಗೆ ಹಣಕಾಸಿನ ಅವ್ಯವಹಾರದ ಆರೋಪಗಳೂ ಇವೆ. ಇದೆಲ್ಲ ಕಾರಣಕ್ಕೆ ವಿಶ್ವವಿದ್ಯಾಲಯದ ಘನತೆಗೆ ಧಕ್ಕೆ ಉಂಟಾಗುತ್ತಿದೆ’ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
ಮುಚ್ಚಲಾಗದು: ‘ನನ್ನ ಅವಧಿಯಲ್ಲಿ ಮಾನ್ಯತೆ ನೀಡಿದ್ದು ಕಡಿಮೆ. ಬಹಳಷ್ಟು ಅರ್ಜಿಗಳು ಬಂದಿದ್ದರೂ ಅಳೆದು ತೂಗಿ ಗುಣಮಟ್ಟದ ಸಂಸ್ಥೆಗಳಿಗೆ ಮಾತ್ರ ಮಾನ್ಯತೆ ನೀಡಲಾಗಿದೆ. ಏಕಾಏಕಿ ಬಂದ್ ಮಾಡಿದರೆ ಕಾನೂನು ಕ್ರಮ ಎದುರಿಸಬೇಕಾಗಬಹುದು. ವಿಶ್ವವಿದ್ಯಾಲಯದಲ್ಲಿ ಕಾಯಂ ಅಧ್ಯಾಪಕರ ಸಂಖ್ಯೆ ತೀರಾ ಕಡಿಮೆ ಇರುವ ಕಾರಣ ಸಂಶೋಧನಾ ಕೆಲಸಗಳು ಕಡಿಮೆಯಾಗುವ ಆತಂಕ ಇದೆ. ಹೀಗಾಗಿ, ತಕ್ಷಣಕ್ಕೆ ಸಂಶೋಧನಾ ಕೇಂದ್ರಗಳನ್ನು ಮುಚ್ಚುವ ನಿರ್ಧಾರಕ್ಕೆ ಬರಲಾಗದು’ ಎಂದು ಕುಲಪತಿ ಪ್ರೊ. ಡಿ.ವಿ.ಪರಮಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
ಯುಜಿಸಿ ನ್ಯಾಕ್ ಆಕ್ಷೇಪವಿದ್ದರೂ ಕನ್ನಡ ವಿ.ವಿ ಕಾಯ್ದೆಯಡಿ ಕೆಲವೊಂದು ನಿರ್ಧಾರ ಕೈಗೊಳ್ಳುವ ಅವಕಾಶ ಇದೆ ಅದರಂತೆ ಈ ಮಾನ್ಯತೆ ನೀಡಲಾಗಿತ್ತು. ಮುಂದೆ ಕಠಿಣ ನಿಯಮ ಜಾರಿಗೊಳಿಸುತ್ತೇವೆ
–ಪ್ರೊ.ಡಿ.ವಿ.ಪರಮಶಿವಮೂರ್ತಿ ಕುಲಪತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.