ADVERTISEMENT

ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾದ ಸರ್ಕಾರ: ಕುಲಪತಿ ಓಟಕ್ಕೆ ತಡೆ ಒಡ್ಡಿತೇ ಸರ್ಕಾರ?

ಹೊಸ ಕುಲಪತಿ ಆಯ್ಕೆ ಪ್ರಕ್ರಿಯೆ ಆರಂಭ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 3 ಡಿಸೆಂಬರ್ 2021, 20:15 IST
Last Updated 3 ಡಿಸೆಂಬರ್ 2021, 20:15 IST
ಹಂಪಿ ಕನ್ನಡ ವಿಶ್ವವಿದ್ಯಾಲಯ
ಹಂಪಿ ಕನ್ನಡ ವಿಶ್ವವಿದ್ಯಾಲಯ   

ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಹೊಸ ಕುಲಪತಿ ಆಯ್ಕೆ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ.

ಹಾಲಿ ಕುಲಪತಿ ಪ್ರೊ. ಸ.ಚಿ. ರಮೇಶ ಅವರ ಅವಧಿ 2022ರ ಫೆಬ್ರುವರಿ 21ಕ್ಕೆ ಕೊನೆಗೊಳ್ಳಲಿದೆ. ಆದರೆ, ಇನ್ನೂ ಸಾಕಷ್ಟು ಕಾಲಾವಕಾಶ ಇರುವಾಗಲೇ ಹೊಸ ಕುಲಪತಿ ಆಯ್ಕೆಗೆ ಸರ್ಕಾರ ಮುಂದಾಗಿದೆ.

ಕನಿಷ್ಠ 6 ತಿಂಗಳಿಂದ 1 ವರ್ಷದ ಅವಧಿಗೆ ಕಾಲಾವಕಾಶ ವಿಸ್ತರಿಸಿಕೊಳ್ಳಲು ಹಾಲಿ ಕುಲಪತಿ ತೀವ್ರ ಕಸರತ್ತು ನಡೆಸಿದ್ದರು ಎಂದು ‘ಪ್ರಜಾವಾಣಿ’ಗೆ ಉನ್ನತ ಮೂಲಗಳಿಂದ ಗೊತ್ತಾಗಿದೆ. ಆದರೆ, ಕುಲಪತಿ ರಮೇಶ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿವೆ. ವಿಶ್ವವಿದ್ಯಾಲಯದ ಆಡಳಿತದ ವಿರುದ್ಧ ಬೋಧಕ ಹಾಗೂ ಬೋಧಕೇತರ ನೌಕರರು ಗಂಭೀರ ಸ್ವರೂಪದ ಆರೋಪಗಳನ್ನು ಮಾಡಿದ್ದಾರೆ. ಹಲವು ದಿನಗಳಿಂದ ವಿಶ್ವವಿದ್ಯಾಲಯದಲ್ಲಿ ಜಟಾಪಟಿ ಮುಂದುವರೆದಿದೆ. 17 ಬೋಧಕ ಹುದ್ದೆಗಳ ನೇಮಕಾತಿಗೂ ಅಪಸ್ವರ ಕೇಳಿ ಬಂದಿದೆ. ಈ ಕುರಿತು ‘ಪ್ರಜಾವಾಣಿ’ ಸರಣಿ ವರದಿಗಳನ್ನು ಪ್ರಕಟಿಸಿತ್ತು.

ADVERTISEMENT

ಈ ಕುರಿತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು, ತನಿಖೆಗೆ ಒತ್ತಾಯಿಸಿದ್ದರು. ಚಳಿಗಾಲದ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಲು ಸಿದ್ದರಾಮಯ್ಯ ಮುಂದಾಗಿದ್ದರು. ಸತತವಾಗಿ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗುತ್ತಿತ್ತು.

ಇಷ್ಟೆಲ್ಲ ನಡೆಯುತ್ತಿರುವಾಗ ಕುಲಪತಿ ರಮೇಶ ಅವರ ಅವಧಿ ವಿಸ್ತರಿಸಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರಬಹುದು ಎಂದರಿತು ‘ಡ್ಯಾಮೇಜ್‌ ಕಂಟ್ರೋಲ್‌’ಗೆ ಸರ್ಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿಯೇ ಶೋಧನಾ ಸಮಿತಿ ರಚಿಸಿ, ಹೊಸ ಕುಲಪತಿ ಆಯ್ಕೆಗೆ ಪ್ರಕ್ರಿಯೆ ಆರಂಭಿಸಿದೆ. 6ರಿಂದ 12 ತಿಂಗಳ ಅಧಿಕಾರಾವಧಿ ವಿಸ್ತರಣೆಗೆ ಕಸರತ್ತು ನಡೆಸುತ್ತಿದ್ದ ರಮೇಶ ಅವರ ಪ್ರಯತ್ನ ವ್ಯರ್ಥಗೊಂಡಿದೆ.

ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಿಗೆ ಪತ್ರ ಬರೆದು, ‘ಶೋಧನಾ ಸಮಿತಿಗೆ ಸೂಕ್ತರಾದವರ ಹೆಸರು ಕಳಿಸಿಕೊಡಬೇಕು’ ಎಂದು ತಿಳಿಸಿದ್ದಾರೆ. ಆ ಪತ್ರ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಡಿಸೆಂಬರ್‌ 6ರಂದು ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಈ ಕುರಿತು ಚರ್ಚಿಸಿ, ಹೆಸರು ಕಳಿಸುವ ಸಾಧ್ಯತೆ ಇದೆ.

‘ಕೊನೆಗೂ ಸರ್ಕಾರ ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ನೌಕರರ ಮಾತಿಗೆ ಕಿವಿಗೊಟ್ಟಂತಾಗಿದೆ. ವಿಶ್ವವಿದ್ಯಾಲಯ ಸ್ಥಾಪನೆಗೊಂಡ ನಂತರ ಅತಿ ಹೆಚ್ಚಿನ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವವರು ಹಾಲಿ ಕುಲಪತಿ. ಅಷ್ಟೇ ಅಲ್ಲ, ಮೊದಲ ಬಾರಿಗೆ ವಿಶ್ವವಿದ್ಯಾಲಯದ ಎಲ್ಲ ನೌಕರರು, ಕುಲಪತಿ ಸೇರಿದಂತೆ ಆಡಳಿತದ ವಿರುದ್ಧ ತಿರುಗಿ ಬಿದ್ದು, ಧರಣಿ ನಡೆಸಿದ್ದರು. ಹೊಸ ಕುಲಪತಿ ಆಯ್ಕೆಗೆ ಸರ್ಕಾರ ಮುಂದಾಗಿರುವ ಕ್ರಮ ಸ್ವಾಗತಾರ್ಹವಾದುದು. ಇದರ ಜೊತೆಗೆ ವಿಶ್ವವಿದ್ಯಾಲಯದ ಸಿಬ್ಬಂದಿ ಮಾಡಿರುವ ಗಂಭೀರ ಆರೋಪಗಳ ಕುರಿತು ಉನ್ನತಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಆಗ ಸರ್ಕಾರದ ಬಗ್ಗೆ ಸಾರ್ವಜನಿಕರಿಗೆ ಉತ್ತಮ ಅಭಿಪ್ರಾಯ ಮೂಡುತ್ತದೆ’ ಎಂದು ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರು ಪ್ರತಿಕ್ರಿಯಿಸಿದ್ದಾರೆ.

ಈ ಸಂಬಂಧ ಕುಲಪತಿ ಪ್ರೊ.ಸ.ಚಿ.ರಮೇಶ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ನೇಮಕಾತಿಗೂ ಹಿನ್ನಡೆ

17 ಬೋಧಕ ಹುದ್ದೆಗಳ ನೇಮಕಾತಿಗೆ ಮುಂದಾಗಿದ್ದ ಕನ್ನಡ ವಿಶ್ವವಿದ್ಯಾಲಯಕ್ಕೆ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚಿದೆ.
ಮೀಸಲಾತಿ ಕುರಿತು ಇತ್ತೀಚೆಗೆ ‘ಪ್ರಜಾವಾಣಿ’ ಪ್ರಕಟಿಸಿದ್ದ ವರದಿ ಹಾಗೂ ವಿವಿಧ ಸಂಘಟನೆಗಳಿಂದ ದೂರುಗಳು ಬಂದದ್ದರಿಂದ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ವಿಶ್ವವಿದ್ಯಾಲಯದ ಕುಲಸಚಿವರಿಗೆ ಪತ್ರ ಬರೆದು ಮಾಹಿತಿ ಕೇಳಿದ್ದಾರೆ.

ವಿಶ್ವವಿದ್ಯಾಲಯದ ವೃಂದ ಮತ್ತು ನೇಮಕಾತಿ ನಿಯಮಗಳು (ತಿದ್ದುಪಡಿಗಳು), ಬೋಧಕ ವೃಂದದ ಹುದ್ದೆ ದಾಖಲಾತಿ ಪುಸ್ತಕ, ಬೋಧಕ ವೃಂದದ ರೋಸ್ಟರ್‌ ದಾಖಲಾತಿ ಪುಸ್ತಕ, ಬೋಧಕ ವೃಂದದ ಮಂಜೂರಾದ ಆದೇಶ ಪ್ರತಿಗಳು, ಹುದ್ದೆ ಭರ್ತಿಯ ಅಧಿಸೂಚನೆಗೆ ಸಂಬಂಧಿಸಿದ ದಾಖಲೆಗಳನ್ನು ಕಳಿಸಿಕೊಡಬೇಕೆಂದು ಸೂಚಿಸಿದ್ದಾರೆ. ಈ ದಾಖಲೆಗಳನ್ನು ಪರಿಶೀಲಿಸಿದ ನಂತರ ಸಮಾಜ ಕಲ್ಯಾಣ ಇಲಾಖೆಯು ಅದರ ಅಭಿಪ್ರಾಯ ತಿಳಿಸಲಿದೆ. ಒಂದುವೇಳೆ ಈಗಿರುವ ಅಧಿಸೂಚನೆಯಲ್ಲಿ ಮೀಸಲಾತಿ ನಿಯಮ ಪಾಲಿಸಿಲ್ಲ. ಅದನ್ನು ಪರಿಷ್ಕರಿಸಬೇಕೆಂದು ತಿಳಿಸಿದರೆ, ಇಡೀ ಪಟ್ಟಿ ಪರಿಷ್ಕರಿಸಿ ಹೊಸ ಅಧಿಸೂಚನೆ ಹೊರಡಿಸಬೇಕಾಗುತ್ತದೆ. ಈಗಾಗಲೇ ಹೊಸ ಕುಲಪತಿ ಆಯ್ಕೆ ಪ್ರಕ್ರಿಯೆ ಆರಂಭಗೊಂಡಿರುವುದರಿಂದ ಆ ಕೆಲಸ ಮಾಡಲು ಬರುವುದಿಲ್ಲ ಎನ್ನುತ್ತವೆ ಉನ್ನತ ಶಿಕ್ಷಣ ಇಲಾಖೆಯ ಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.