
ಹೊಸಪೇಟೆ (ವಿಜಯನಗರ): ಕನ್ನಡ ಭಾಷೆ, ನೆಲ, ಸಂಸ್ಕೃತಿ, ಜಾನಪದ, ಇತಿಹಾಸಗಳ ಸಂಶೋಧನೆಗೆಂದೇ ಸ್ಥಾಪಿತ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸ್ವತಃ ಪ್ರೊಫೆಸರ್‌ಗಳು ಸಂಶೋಧನಾ ಯೋಜನೆಗಳಲ್ಲಿ ತೊಡಗಿಸಿಕೊಳ್ಳುತ್ತಿಲ್ಲ. ‘ಸರ್ಕಾರದಿಂದ ಅನುದಾನ ಸಿಗುತ್ತಿಲ್ಲ’ ಎಂದು ಹೇಳುತ್ತಲೇ ಈ ಮೂಲ ವಿಷಯವೇ ಮರೆಯಾಗುವ ಆತಂಕ ಎದುರಾಗಿದೆ.
ವಿಶ್ವವಿದ್ಯಾಲಯದಲ್ಲಿ 73 ಪೈಕಿ 37 ಪ್ರಾಧ್ಯಾಪಕರು ಮಾತ್ರ ಇದ್ದಾರೆ. ಈ ಪೈಕಿ ಅರ್ಧದಷ್ಟು ಮಂದಿ ವೈಯಕ್ತಿಕ ಯೋಜನೆ, ಸಾಂಸ್ಥಿಕ ಯೋಜನೆಗಳ ಪ್ರಸ್ತಾವಗಳನ್ನು ಸಲ್ಲಿಸಿಲ್ಲ. ವರ್ಷಕ್ಕೆ ಎರಡು ಯೋಜನೆಗಳನ್ನು ಪ್ರೊಫೆಸರ್‌ಗಳು ಮಾಡಬೇಕು, ಯೋಜನೆ ದೊಡ್ಡದಿದ್ದರೆ ಎರಡು ವರ್ಷಕ್ಕೆ ಒಂದಾದರೂ ಯೋಜನೆ ಮಾಡಬೇಕು ಎಂಬ ನಿಯಮ ಇದೆ. ಆದರೆ, ಇದು ಕಾರ್ಯರೂಪಕ್ಕೆ ಬರುತ್ತಿಲ್ಲ.
1996ರಿಂದ ಈಚೆಗೆ ಕೇವಲ ಎರಡು ಯೋಜನೆ ಪೂರ್ಣಗೊಳಿಸಿದ ಪ್ರೊಫೆಸರ್‌ಗಳು ಇಲ್ಲಿದ್ದಾರೆ, ಕಳೆದ ಹತ್ತು ವರ್ಷಗಳಲ್ಲಿ ಕೇವಲ ಒಂದು ಯೋಜನೆ ಪೂರ್ಣಗೊಳಿಸಿದವರೂ ಇದ್ದಾರೆ. ಇವರನ್ನು ಬಿಟ್ಟು ಹೇಳುವುದಾದರೆ ಸುಮಾರು 15ರಷ್ಟು ಮಂದಿ ಸಂಶೋಧನಾ ಯೋಜನೆಗಳ ಪ್ರಸ್ತಾಪವನ್ನೇ ಸಲ್ಲಿಸಿಲ್ಲ. ಕೆಲವರು ಪಿಎಚ್.ಡಿ ಮಾಡದೆಯೂ ಇಲ್ಲಿ ಬಡ್ತಿ ಪಡೆದಿದ್ದಾರೆ.
15ರಿಂದ 18 ಮಂದಿ ಪ್ರೊಫೆಸರ್‌ಗಳು ಮಾತ್ರ ನಿಷ್ಠೆಯಿಂದ ತಮ್ಮ ಪಾಲಿನ ಸಂಶೋಧನೆಗಳನ್ನು ಮಾಡುತ್ತ, ಕೃತಿಗಳನ್ನು ಹೊರತರುತ್ತ ಇದ್ದಾರೆ. ಸದ್ಯ ವಿಶ್ವವಿದ್ಯಾಲಯ ಇವರ ಹೆಸರನ್ನಷ್ಟೇ ಇಟ್ಟುಕೊಂಡು ತನ್ನ ಸಾಧನೆಯನ್ನು ಹೇಳಿಕೊಳ್ಳುತ್ತಿದೆ. ಹೀಗಿದ್ದರೂ ನೆಲ, ಭಾಷೆ, ಮಾಧ್ಯಮ, ಶಿಕ್ಷಣ ನೀತಿ ಮೊದಲಾದ ವಿಚಾರಗಳಲ್ಲಿ ವಿಶ್ವವಿದ್ಯಾಲಯದಲ್ಲಿ ಗಂಭೀರ ಚರ್ಚೆ, ಗೋಷ್ಠಿಗಳು ಬಹುತೇಕ ನಡೆದೇ ಇಲ್ಲ. ಸಂಶೋಧನೆ ಮಾಡುತ್ತಿರುವವರಿಂದಲೂ ಇಡೀ ರಾಜ್ಯವೇ ಬೊಟ್ಟುಮಾಡಿ ತೋರಿಸುವಂತಹ ಸಂಶೋಧನೆಗಳು ಆಗಿಲ್ಲ ಎಂಬುದನ್ನು ವಿಶ್ವವಿದ್ಯಾಲಯದ ಕಡತಗಳೇ ಹೇಳುತ್ತಿವೆ.
ಮೈಸೂರು ವಿಶ್ವವಿದ್ಯಾಲಯ ಬಿಟ್ಟರೆ ಇಡೀ ರಾಜ್ಯದಲ್ಲೇ ಅತ್ಯಧಿಕ ಪುಸ್ತಕಗಳನ್ನು (1,600ರಷ್ಟು) ಪ್ರಕಟಿಸಿದ ಹಿರಿಮೆ ನಮ್ಮ ಪ್ರಸಾರಾಂಗದ್ದು ಎಂದು ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಆಗಾಗ ಹೇಳುತ್ತಲೇ ಇರುತ್ತಾರೆ. ಆದರೆ ಇಂತಹ ಕೃತಿಗಳಲ್ಲಿ ಎಷ್ಟು ಗಟ್ಟಿತನದ, ಸಂಶೋಧನಾತ್ಮಕ, ಭಾಷಾ ಬೆಳವಣಿಗೆಗೆ ಅಗತ್ಯವಾದ ಕೃತಿಗಳು ಎಂಬುದನ್ನು ಜರಡಿ ಹಾಕಿದರೆ ಗಟ್ಟಿ ಕಾಳು ಕಡಿಮೆಯೇ.
ವಿಶ್ವವಿದ್ಯಾಲಯದಲ್ಲಿ ಬೋಧಕೇತರ 243 ಸಿಬ್ಬಂದಿಯ ಪೈಕಿ 148 ಮಂದಿ ಮಾತ್ರ ಈಗ ಇದ್ದು, 85 ಹುದ್ದೆಗಳು ಖಾಲಿ ಇವೆ. ಇರುವ ಸಿಬ್ಬಂದಿ ಆಧುನಿಕ ಕೆಲಸ ಶೈಲಿಗೆ ತಕ್ಕಂತೆ ತಮ್ಮ ಕೌಶಲ ಹೆಚ್ಚಿಸಿಕೊಂಡಿಲ್ಲ. ಇದು ಕೆಲವೇ ಕೆಲವು ಸಿಬ್ಬಂದಿ ಮತ್ತು ಅತಿಥಿ ಉಪನ್ಯಾಸಕರ ಮೇಲೆ ಭಾರಿ ಒತ್ತಡ ಬೀಳುವಂತೆ ಮಾಡುತ್ತಿದೆ.
ಕುಲಪತಿ ಪ್ರತಿಕ್ರಿಯೆ:
‘ಈ ಹಿಂದೆ ಒಂದೊಂದು ಸಂಶೋಧನಾ ಯೋಜನೆಗೆ ₹20 ಲಕ್ಷದವರೆಗೆ ಅನುದಾನ ನೀಡಿದ್ದೂ ಇದೆ, ಈಗ ಕನಿಷ್ಠ ₹5 ಲಕ್ಷ ಕೊಡಿ ಎಂದು ಕೇಳಿದರೂ ಸಿಗುತ್ತಿಲ್ಲ. ಕೋವಿಡ್ ಸಮಯದಲ್ಲಿ ಹಲವು ಯೋಜನೆಗಳು ಇದೇ ಕಾರಣಕ್ಕೆ ಅರ್ಧಕ್ಕೇ ಸ್ಥಗಿತಗೊಂಡವು. ಹೀಗಿದ್ದರೂ ನನ್ನ ಅವಧಿಯಲ್ಲಿ ಮೂರ್ನಾಲ್ಕು ಪ್ರಮುಖ ಯೋಜನೆಗಳು ಪೂರ್ಣಗೊಂಡಿವೆ, ಹೊಸ ಪ್ರಾಧ್ಯಾಪಕರನ್ನು ನೇಮಿಸಿಕೊಂಡರೆ ಮುಂದಿನ 25 ವರ್ಷಗಳ ಕಾಲ ಸಂಶೋಧನಾ ಕಾರ್ಯಗಳು ನಿರಂತರವಾಗಿ ನಡೆಯುವುದು ಸಾಧ್ಯ’ ಎಂದು ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
ನಿಯಮ ಪಾಲನೆಯೇ ಇಲ್ಲ
ಕನ್ನಡ ವಿಶ್ವವಿದ್ಯಾಲಯ ಸ್ಥಾಪಿಸುವಾಗ ಕೆಲವೊಂದು ನಿಯಮ ರೂಪಿಸಲಾಗಿತ್ತು. ಭಾಷೆ ಸಾಹಿತ್ಯ ಜನಪದ ಕಲೆ ಸಂಸ್ಕೃತಿ ಇತಿಹಾಸ ಧರ್ಮ ತತ್ವಶಾಸ್ತ್ರ ಎಂಜಿನಿಯರಿಂಗ್ ವಿಜ್ಞಾನ ಸಿದ್ಧವೈದ್ಯ ತಾಳೆಗರಿ ಹಸ್ತಪ್ರತಿ ಕನ್ನಡಿಗರ ಇತಿಹಾಸ ನೃತ್ಯ ಸಂಗೀತ ಗುಡ್ಡಗಾಡಿನವರ ಕಲೆ ಸಾಮಾಜಿಕ ಆಂದೋಲನ ಜನಪದರ ಕಲೆ ತೌಲನಿಕ ಸಾಹಿತ್ಯ ದ್ರಾವಿಡ ಸಂಸ್ಕೃತಿ ಮೊದಲಾದ ವಿಷಯಗಳಲ್ಲಿ ಸಂಶೋಧನೆ ಅಧ್ಯಯನ ನಡೆಸುವ ಸ್ಪಷ್ಟ ಸೂಚನೆ ಇದೆ. ಆದರೆ ಕೆಲವು ಸಂಶೋಧಕರು ಈ ವಿಷಯ ಪಟ್ಟಿಯಲ್ಲಿ ಇಲ್ಲದ ತಮಗೆ ಸುಲಭವಾದ ಇಷ್ಟಬಂದ ವಿಷಯಗಳಲ್ಲಷ್ಟೇ ಸಂಶೋಧನೆ ನಡೆಸಿರುವುದು ದಾಖಲೆಗಳಿಂದ ತಿಳಿದುಬಂದಿದೆ.
ಕುಲಪತಿ ಆಯ್ಕೆಯಲ್ಲೇ ಸಮಸ್ಯೆ
ಚಂದ್ರಶೇಖರ ಕಂಬಾರ ಅವರು ಕಟ್ಟಿ ಬೆಳೆಸಿದ ಕನ್ನಡ ವಿಶ್ವವಿದ್ಯಾಲಯ ತನ್ನ 35 ವರ್ಷಗಳ ಇತಿಹಾಸದಲ್ಲಿ ಸಂಶೋಧಕರೂ ಆಗಿರುವ ಕುಲಪತಿಗಳನ್ನು ಕಂಡಿದ್ದು ವಿರಳ ಎನ್ನಬೇಕು. ನಿವೃತ್ತ ಕುಲಪತಿ ಪ್ರೊ.ಲಕ್ಕಪ್ಪ ಗೌಡ ನಿವೃತ್ತ ಕುಲಸಚಿವ ಪ್ರೊ.ಕೆ.ವಿ.ನಾರಾಯಣ ಅವರಂತಹ ಕೆಲವೇ ಮಂದಿ ಇಲ್ಲಿ ಸಂಶೋಧನೆಗೆ ಒಂದು ಘನತೆ ಗಾಂಭೀರ್ಯ ತಂದುಕೊಟ್ಟಿದ್ದಾರೆ. ಕೆಲವು ಕುಲಪತಿಗಳು ಒಂದೇ ಒಂದು ಸಂಶೋಧನಾ ಯೋಜನೆ ಮಾಡದೆ ಬಂದವರೂ ಇದ್ದರು. ಹೀಗಾಗಿ ಹಿರಿಯಕ್ಕನ ಚಾಳಿ ಇಡೀ ವಿಶ್ವವಿದ್ಯಾಲಯವನ್ನು ವ್ಯಾಪಿಸಿದೆ.
ಅನುದಾನ ಕೊರತೆಯಿಂದ ಸಂಶೋಧನಾ ಕಾರ್ಯ ಕುಂಠಿತವಾಗಿರುವುದು ನಿಜ ನಿವೃತ್ತಿಯ ಸನಿಹಕ್ಕೆ ಬಂದಿರುವವರಿಂದ ಸಂಶೋಧನೆ ಮಾಡಿಸುವುದು ಸಹ ಕಷ್ಟ. ಹೊಸ ಪ್ರಾಧ್ಯಾಪಕರ ನೇಮಕವಾಗಬೇಕು ಎಂದು ನಾವು ಒತ್ತಾಯಿಸುತ್ತಿರುವುದು ಇದಕ್ಕೇಪ್ರೊ.ಡಿ.ವಿ.ಪರಮಶಿವಮೂರ್ತಿ, ಕುಲಪತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.