ADVERTISEMENT

ಕನ್ನಡ ವಿ.ವಿಗೆ ₹100 ಕೋಟಿಗೆ ಬೇಡಿಕೆ

ಸಂಡೂರು ಪ್ರಭು ಸ್ವಾಮೀಜಿ ನೇತೃತ್ವದಲ್ಲಿ ಕಾಲ್ನಡಿಗೆ ಜಾಥಾ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 12:02 IST
Last Updated 25 ಫೆಬ್ರುವರಿ 2021, 12:02 IST
ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಸಂಡೂರಿನ ಪ್ರಭು ಸ್ವಾಮೀಜಿ ನೇತೃತ್ವದಲ್ಲಿ  ವಿದ್ಯಾರ್ಥಿಗಳು, ಸಿಬ್ಬಂದಿ ಗುರುವಾರ ಹೊಸಪೇಟೆಯಲ್ಲಿ ಪ್ರತಿಭಟನೆ ನಡೆಸಿದರು
ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಸಂಡೂರಿನ ಪ್ರಭು ಸ್ವಾಮೀಜಿ ನೇತೃತ್ವದಲ್ಲಿ  ವಿದ್ಯಾರ್ಥಿಗಳು, ಸಿಬ್ಬಂದಿ ಗುರುವಾರ ಹೊಸಪೇಟೆಯಲ್ಲಿ ಪ್ರತಿಭಟನೆ ನಡೆಸಿದರು   

ವಿಜಯನಗರ (ಹೊಸಪೇಟೆ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ₹100 ಕೋಟಿ ಅನುದಾನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಹೋರಾಟ ಸಮಿತಿಯವರು ಗುರುವಾರ ನಗರದಲ್ಲಿ ಕಾಲ್ನಡಿಗೆ ಜಾಥಾ ನಡೆಸಿದರು.

ಸಂಡೂರು ವಿರಕ್ತ ಮಠದ ಪ್ರಭು ಸ್ವಾಮೀಜಿಯವರ ನೇತೃತ್ವದಲ್ಲಿ ವಿಶ್ವವಿದ್ಯಾಲಯದ ಹೊರಗುತ್ತಿಗೆ ನೌಕರರು, ಸಂಶೋಧನಾ ವಿದ್ಯಾರ್ಥಿಗಳು ನಗರದ ಅನಂತಶಯನಗುಡಿಯಿಂದ ಪ್ರಮುಖ ಮಾರ್ಗಗಳ ಮೂಲಕ ತಾಲ್ಲೂಕು ಕಚೇರಿ ವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿದರು.

ಬಳಿಕ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪ್ರಭು ಸ್ವಾಮೀಜಿ, ‘ರಾಜ್ಯದ ಅನ್ಯ ವಿಶ್ವವಿದ್ಯಾಲಯಗಳಿಗೆ ಬೇರೆ ಬೇರೆ ಮೂಲಗಳಿಂದ ಆದಾಯ ಬರುತ್ತದೆ. ಆದರೆ, ಕನ್ನಡ ವಿಶ್ವವಿದ್ಯಾಲಯ ಸರ್ಕಾರದ ಅನುದಾನವನ್ನೇ ನೆಚ್ಚಿಕೊಂಡಿದೆ. ರಾಜ್ಯ ಬಜೆಟ್‌ನಲ್ಲಿ ₹100 ಕೋಟಿ ಮೀಸಲಿಡಬೇಕು. ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರು ಭರವಸೆ ಕೊಟ್ಟಂತೆ ಖನಿಜ ನಿಧಿಯಿಂದ ₹10 ಕೋಟಿ ಅನುದಾನ ಕೊಡಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಕನ್ನಡ ವಿಶ್ವವಿದ್ಯಾಲಯವು ಸತತವಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಭಾಷೆ ಹಾಗೂ ಸಂಸ್ಕೃತಿ ಉಳಿದರೆ ಕನ್ನಡವೂ ಉಳಿಯುತ್ತೆ. ಭಾಷಾ ಸಂಶೋಧನೆಯಲ್ಲಿ ಕನ್ನಡ ವಿಶ್ವವಿದ್ಯಾಲಯವು ತನ್ನದೇ ಹೆಸರನ್ನು ಉಳಿಸಿಕೊಂಡಿದೆ. ಅಂತಹ ವಿಶ್ವವಿದ್ಯಾಲಯಕ್ಕೆ ಅನುದಾನ ಇಲ್ಲ ಅಂದರೆ ತಲೆತಗ್ಗಿಸುವ ವಿಚಾರವಾಗಿದೆ‌’ ಎಂದು ಹೇಳಿದರು.

ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಅಧ್ಯಕ್ಷ ಮರಡಿ ಜಂಬಯ್ಯ ನಾಯಕ, ‘ಸಂಶೋಧನಾ ವಿದ್ಯಾರ್ಥಿಗಳಿಗೆ 25 ತಿಂಗಳಿಂದ ಫೆಲೋಶಿಪ್ ಸಿಕ್ಕಿಲ್ಲ. ವಿಶ್ವವಿದ್ಯಾಲಯದ 103 ಅರೆಕಾಲಿಕ ನೌಕರರಿಗೆ 9 ತಿಂಗಳಿಂದ ವೇತನ ಇಲ್ಲ. ಸರ್ಕಾರಕ್ಕೆ ನಾವು ಯಾವುದೇ ವೈಯಕ್ತಿಕ ಹಣ ಕೇಳುತ್ತಿಲ್ಲ. ಸಾರ್ವಜನಿಕರ ತೆರಿಗೆ ಹಣವನ್ನು ವಿಶ್ವವಿದ್ಯಾಲಯಕ್ಕೆ ನೀಡಬೇಕು. ನಮ್ಮ ಹೋರಾಟ ಇಂದಿಗೆ ಮುಗಿಯುವುದಿಲ್ಲ. ಬೆಂಗಳೂರು ಚಲೋ ಸಹ ಹಮ್ಮಿಕೊಂಡಿದ್ದು ಅನುದಾನ ಸಿಗುವವರೆಗೂ ಹೋರಾಟ ಮುಂದುವರೆಸಲಾಗುವುದು’ ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ಅರೆಕಾಲಿಕ ಸಿಬ್ಬಂದಿ ಶ್ರೀನಿವಾಸ್ ಮಾತನಾಡಿ, ‘ವೇತನಕ್ಕೆ ಮನವಿ ಮಾಡಿದರೆ ಕೊರೊನಾ ನೆಪವೊಡ್ಡಿ ಮುಂದೂಡುತ್ತಿದ್ದಾರೆ. ಹಲವು ಬಾರಿ ಕುಲಪತಿಗಳ ಮೂಲಕ ಸರ್ಕಾರದ ಗಮನಕ್ಕೇ ತಂದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜೀವನ ನಿರ್ವಹಣೆಗೆ ಕಷ್ಟವಾಗಿದೆ’ ಎಂದು ಗೋಳು ತೋಡಿಕೊಂಡರು.

ಸಂಶೋಧನಾ ವಿದ್ಯಾರ್ಥಿನಿ ರಾಗಿಣಿ ಮಾತನಾಡಿ, ‘ಕ್ಷೇತ್ರ ಕಾರ್ಯ ಹಾಗೂ ಸಂಶೋಧನೆಗಳಿಗೆ ಸಂಬಂಧಿಸಿದ ಅಧ್ಯಯನ ಕಾರಣಗಳಿಗಾಗಿ ಆರ್ಥಿಕ ನೆರವು ಅವಶ್ಯಕವಾಗಿದೆ. ಆದರೆ, ಅನುದಾನ ಇರದ ಕಾರಣ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ’ ಎಂದರು.

ದೇವದಾಸಿ ಮಹಿಳಾ ವಿಮೋಚನಾ ಸಂಘದ ಬಿ.ಮಾಳಮ್ಮ, ಡಿವೈಎಫ್ಐನ ರಾಜ್ಯ ಘಟಕದ ಉಪಾಧ್ಯಕ್ಷ ಬಿಸಾಟಿ ಮಹೇಶ್, ಯು.ಬಸವರಾಜ್, ಭಾಸ್ಕರ್ ರೆಡ್ಡಿ, ಸಮುದಾಯ ಸಂಘಟನೆಯ ಎಂ.ಮುನಿರಾಜು, ಜೆ.ಶಿವಕುಮಾರ್, ವಿ.ಸ್ವಾಮಿ, ದಾದಾ ಹಯಾತ್ ಇನ್ನಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.