
ಹೊಸಪೇಟೆ (ವಿಜಯನಗರ): ಹಂಪಿ ಉತ್ಸವದ ಸಂದರ್ಭದಲ್ಲಿ ಆನೆಲಾಯ ಪ್ರದೇಶದಲ್ಲಿ ನಡೆಯುವ ‘ವಿಜಯನಗರ ವೈಭವ’ ಧ್ವನಿ ಬೆಳಕಿನ ಕಾರ್ಯಕ್ರಮಕ್ಕೆ ಸ್ಥಳೀಯವಾಗಿ 115ರಷ್ಟು ಕಲಾವಿದರನ್ನು ಆಯ್ಕೆ ಮಾಡಲಾಗುತ್ತಿದ್ದು, ಈ ಬಾರಿ ಮತ್ತೆ ಐವರು ಸರ್ಕಾರಿ ನೌಕರರು ಅರ್ಜಿ ಸಲ್ಲಿಸಿ, ಬುಧವಾರ ಸಂದರ್ಶನ ಎದುರಿಸಿದ್ದರಿಂದ ಕುತೂಹಲ ಮೂಡಿದೆ.
2024ರ ಹಂಪಿ ಉತ್ಸವದ ವೇಳೆ ಧ್ವನಿ ಬೆಳಕಿನಲ್ಲಿ ಸುಮಾರು 15 ಮಂದಿ ಸರ್ಕಾರಿ ನೌಕರರು ಕಲಾವಿದರಾಗಿಯೂ ಪಾಲ್ಗೊಂಡಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾದ ಬಳಿಕ ಕಳೆದ ವರ್ಷ ಸರ್ಕಾರಿ ನೌಕರರಿಗೆ ಅವಕಾಶ ನಿರಾಕರಿಸಲಾಗಿತ್ತು. ಆದರೆ ಈ ಬಾರಿ ಮತ್ತೊಮ್ಮೆ ಅವಕಾಶ ನೀಡಿರುವ ಲಕ್ಷಣ ಕಾಣಿಸಿದ್ದರಿಂದ ಬಡ ಕಲಾವಿದರು ಚಿಂತಿತರಾಗಿದ್ದಾರೆ.
‘ನಮಗೆ ಸಿಗುವುದು ವರ್ಷಕ್ಕೆ 15 ದಿನದ ಗೌರವಧನ. ಅದೂ ದಿನಕ್ಕೆ ₹1 ಸಾವಿರದಂತೆ. ಸರ್ಕಾರಿ ನೌಕರರು ಇಲ್ಲಿ ಗೌರವಧನ ಇಲ್ಲದೆಯೇ ತಮ್ಮ ಕಲೆ ಪ್ರದರ್ಶಿಸುವುದಾಗಿ ಹೇಳಿದರೂ ಅವರ ಉಪಸ್ಥಿತಿಯಿಂದ ಕಾರ್ಯಕ್ರಮದಿಂದ ಹೊರಗೆ ಉಳಿಯಬೇಕಾದ ಬಡ ಕಲಾವಿದರ ಪಾಡೇನು’ ಎಂದು ಕಲಾವಿದರೊಬ್ಬರು ಆರೋಪಿಸಿದರು.
7 ದಿನ ರಜೆ: ‘ಸರ್ಕಾರಿ ನೌಕರರು ಇದರಲ್ಲಿ ಪಾಲ್ಗೊಂಡರೆ ಏಳು ದಿನ ಪೂರ್ಣ ಕರ್ತವ್ಯದ ರಜೆ ಸೌಲಭ್ಯ, ಮತ್ತೆ ಏಳು ಅರ್ಧ ರಜೆ ಸಿಗುತ್ತಿತ್ತು. ಈ ವಿಷಯ ನಮಗೆ ಅಷ್ಟಾಗಿ ಗೊತ್ತಿರಲಿಲ್ಲ, ಗೊತ್ತಿದ್ದರೆ ನಾವೂ ಅರ್ಜಿ ಹಾಕುತ್ತಿದ್ದೆವು’ ಎಂದು ಸರ್ಕಾರಿ ನೌಕರರೊಬ್ಬರು ಹೇಳಿಕೊಂಡರು.
ಡಿ.ಸಿಗೆ ಸಂದಿಗ್ಧ: ‘ಕಳೆದ ವರ್ಷ ಅವಕಾಶ ನಿರಾಕರಿಸಿದ್ದು ನಿಜ, ಆದರೆ ಅವಕಾಶ ಕೊಡಲಾಗದು ಎಂದು ಹೇಳಲೂ ಬರುವುದಿಲ್ಲ. ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರ ಅನುಮತಿ ಪತ್ರದೊಂದಿಗೆ ಅರ್ಜಿ ಸಲ್ಲಿಸಬಹುದು ಎಂಬ ಸೂಚನೆ ನೀಡಲಾಗಿತ್ತು. ಬಹುಶಃ ಅರ್ಜಿ ಸಲ್ಲಿಸಿದವರು ಹೀಗೆ ಅನುಮತಿ ಪಡೆದೇ ಸಂದರ್ಶನಕ್ಕೆ ಹಾಜರಾಗಿರಬಹುದು. ಈ ವಿಷಯದಲ್ಲಿ ಜಿಲ್ಲಾಡಳಿತವೂ ಸಂದಿಗ್ಧದಲ್ಲಿದೆ. ವಿಚಾರಿಸಿ ಒಂದು ನಿರ್ಧಾರಕ್ಕೆ ಬರುತ್ತೇವೆ’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.
ಸ್ಥಳೀಯ ಗುತ್ತಿಗೆದಾರರನ್ನು ಖಂಡಿತ ಕಡೆಗಣಿಸಿಲ್ಲ. ಸರ್ಕಾರದಿಂದ ಅನದಾನ ವಿಳಂಬವಾಗಿ ಬಂದರೂ ಬೆಂಗಳೂರಿನ ಗುತ್ತಿಗೆದಾರರಿಗೆ ಧಾರಣ ಶಕ್ತಿ ಇರುವ ಕಾರಣ ಈ ಕ್ರಮ ಆಗಿದೆ ಅಷ್ಟೇಕವಿತಾ ಎಸ್. ಮನ್ನಿಕೇರಿ ಜಿಲ್ಲಾಧಿಕಾರಿ
ಬೆಂಗಳೂರಿನಿಂದಲೇ ಕೆಲಸ: ಆಕ್ಷೇಪ
ಹಂಪಿ ಉತ್ಸವದ ಮುಖ್ಯ ವೇದಿಕೆ ನಿರ್ಮಾಣ ಸೆಲೆಬ್ರೆಟಿಗಳನ್ನು ಕರೆಸುವಂತಹ ಕೆಲಸಗಳನ್ನು ಬೆಂಗಳೂರಿನವರೇ ಮಾಡಲಿ ಅಡ್ಡಿಯಿಲ್ಲ ಆದರೆ ಎಲೆಕ್ಟ್ರಿಕಲ್ ತೋರಣ ಶಾಮಿಯಾನ ಅಡುಗೆ ಮೊದಲಾದ ಕೆಲಸಗಳ ಗುತ್ತಿಗೆಯನ್ನು ಸಹ ಬೆಂಗಳೂರಿನಿಂದಲೇ ನಿರ್ಧರಿಸಿ ಅಲ್ಲಿನವರಿಗೇ ನೀಡಿ ಅವರು ನೀಡುವ ತುಂಡು ಗುತ್ತಿಗೆಯಷ್ಟೇ ಸ್ಥಳೀಯರಿಗೆ ಸಿಗುವಂತಹ ವ್ಯವಸ್ಥೆ ರೂಪಿಸಿದ್ದಕ್ಕೆ ಸಹ ಸ್ಥಳೀಯ ಹಲವಾರು ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.