
ಹಂಪಿ (ವಿಜಯನಗರ): ನೇಗಿಲ ನೊಗದ ಭಾರ ಹೊತ್ತು, ಹೊಲದಲ್ಲಿ ನೇರ ಸಾಲಿನಲ್ಲಿ ರೈತನೊಂದಿಗೆ ಹೆಜ್ಜೆ ಹಾಕುತ್ತಾ, ಬಿತ್ತನೆಗೆ ಭೂಮಿ ಹದಗೊಳಿಸುವ ಜೋಡೆತ್ತುಗಳು ಶುಕ್ರವಾರ ಹಂಪಿಯ ಕಡೆಗೆ ಮುಖ ಮಾಡಿದ್ದವು. ಸಂಘಟಕರ ನಿರೀಕ್ಷೆಗೂ ಮೀರಿ ಜೋಡೆತ್ತುಗಳ ಸ್ಪರ್ಧೆಗೆ ಸ್ಪಂದನೆ ದೊರೆತಿದ್ದು, 180 ಅಧಿಕ ಜೋಡೆತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಜಿಲ್ಲಾಡಳಿತ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಕಮಲಾಪುರದ ಹಂಪಿ ವಿಶ್ವ ಪಾರಂಪರಿಕ ತಾಣ ನಿರ್ವಹಣಾ ಪ್ರಾಧಿಕಾರದ (ಹವಾಮಾ) ಕಚೇರಿ ಹಿಂಭಾಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಎತ್ತುಗಳ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯಿತು.
ಜೋಡೆತ್ತುಗಳಿಗೆ ಪೂಜೆ ಸಲ್ಲಿಸವ ಮೂಲಕ ವಸತಿ, ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಪ್ರದರ್ಶನ ಉದ್ಘಾಟಿಸಿದರು.
ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಹೊಸಪೇಟೆ ರೈತ ಮಂಜುನಾಥ್.ಆರ್ ಅವರ ಹಳ್ಳಿಕಾರ ತಳಿಯ ಜೋಡೆತ್ತುಗಳು ₹10,000 ಹಾಗೂ ಪ್ರಮಾಣ ಪತ್ರ ಪಡೆದು ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡವು. ಗಾದಿನಗನೂರು ಗ್ರಾಮದ ಬಿ.ಬಸವ ಅವರ ಜೋಡು ಎತ್ತುಗಳು ದ್ವೀತಿಯ ಸ್ಥಾನ ಗಳಿಸುವ ಮೂಲಕ ₹7,500, ಬಾಳಾಪುರದ ರೈತ ಶಂಕರಪ್ಪನವರ ಎತ್ತುಗಳು ತೃತೀಯ ಸ್ಥಾನ ಪಡೆದು, ₹5,500 ಹಾಗೂ ಪ್ರಮಾಣ ಪತ್ರ ಗಿಟ್ಟಿಸಿಕೊಂಡವು.
ಹೊಸಪೇಟೆ ಮಹಮದ್ ಹುಸೇನ್ ಅವರ ಜೋಡೆತ್ತುಗಳು ₹2,500 ಪಡೆದುಕೊಂಡು ನಾಲ್ಕನೇ ಸ್ಥಾನ ಪಡೆದುಕೊಂಡವು. ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು ಪ್ರಶಸ್ತಿಗೆ ಭಾಜನವಾದ ನಾಲ್ಕು ಜೊತೆ ಜೊಡೆತ್ತುಗಳಿಗೆ ವೈಯುಕ್ತಿಕವಾಗಿ ₹.2 ಲಕ್ಷ ನಗದು ಬಹುಮಾನವನ್ನು ನೀಡಿದರು.
ಕಲಮಾಪುರ, ಹೊಸಪೇಟೆ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಿಂದ 180ಕ್ಕೂ ಹೆಚ್ಚಿನ ಜೋಡೆತ್ತುಗಳು ಉತ್ಸವದಲ್ಲಿ ಭಾಗವಹಿಸಿವೆ. ಹಳ್ಳಿಕಾರ್, ಮಲೆನಾಡ ಗಿಡ್ಡ, ಓಂಗೋಲ್, ಅಮೃತ್‌ಮಹಲ್, ಕಿಲಾರಿ ಜಾತಿ ವಿವಿಧ ದೇಶಿ ಹಾಗೂ ವಿದೇಶಿ ತಳಿಯ ಜೋಡೆತ್ತುಗಳು ತಮ್ಮ ಗಾಂಭೀರ್ಯದಿAದ ನೋಡುಗರನ್ನು ಚಕಿತಗೊಳಿಸಿದವು.
ಬೀದರ್ ಪಶುವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಕೊಟ್ರೇಶ್ ಬಸವರಾಜ್ ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಪಶು ವೈದ್ಯರ ತಂಡ ಜೋಡೆತ್ತುಗಳ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಕೆಲಸ ನಿರ್ವಹಿಸಿದರು. ಪ್ರದರ್ಶನದಲ್ಲಿ ಎತ್ತುಗಳ ಮೂಲತಳಿ, ದೇಹದಾರ್ಢ್ಯತೆ, ಚುರುಕುತನ, ಅವುಗಳ ಚಲನವಲನಗಳ, ಹೊಳೆಯುವ ಚರ್ಮ, ಕಣ್ಣು, ವಯಸ್ಸು, ಹಲ್ಲು ಸೇರಿದಂತೆ ರೈತರಿಂದ ಅವುಗಳ ಪೋಷಣೆ ಕ್ರಮವನ್ನು ಪರಿಗಣಿಸಿ ತೀರ್ಪುಗಾರರು ಬಹುಮಾನ ನಿಗದಿಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.