ADVERTISEMENT

ಹಂಪಿಯ ಜೋಡಿ ರಥ ಕಣ್ತುಂಬಿಕೊಂಡ ಭಕ್ತಸಾಗರ

ಕಳೆದ ವರ್ಷಕ್ಕಿಂತ ಹೆಚ್ಚು ಭಕ್ತರು–ಸಮಯಕ್ಕೆ ಸರಿಯಾಗಿ ಮುಗಿದ ಗಿರಿಜಾ ಶಂಕರರ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 15:28 IST
Last Updated 12 ಏಪ್ರಿಲ್ 2025, 15:28 IST
ಹಂಪಿ ಮಹಾರಥೋತ್ಸವ ಪ್ರಯುಕ್ತ ವಿರೂಪಾಕ್ಷನಿಗೆ ಶನಿವಾರ ತೊಡಿಸಲಾದ ರತ್ನಖಚಿತ ಚಿನ್ನದ ಕಿರೀಟ
ಹಂಪಿ ಮಹಾರಥೋತ್ಸವ ಪ್ರಯುಕ್ತ ವಿರೂಪಾಕ್ಷನಿಗೆ ಶನಿವಾರ ತೊಡಿಸಲಾದ ರತ್ನಖಚಿತ ಚಿನ್ನದ ಕಿರೀಟ   

ಹೊಸಪೇಟೆ (ವಿಜಯನಗರ): ಹಂಪಿ ವಿರೂಪಾಕ್ಷೇಶ್ವರ ಮತ್ತು ಪಂಪಾಂಬಿಕಾ ದೇವಿಯರ ಭವ್ಯ ಮಹಾರಥೋತ್ಸವ ಮತ್ತು ಚಂದ್ರಮೌಳೇಶ್ವರ ಸಹಿತ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರಿದ್ದ ಸಣ್ಣ ರಥೋತ್ಸವ ಶನಿವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು.

ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರು ಹೈದರಾಬಾದ್‌ನ ನಿಜಾಮ ಕಾಣಿಕೆಯಾಗಿ ನೀಡಿದ ಕಿರೀಟ ತೊಟ್ಟು, ಗೌನು ಧರಿಸಿ ಚಂದ್ರಮೌಳೇಶ್ವರನ ಜತೆಗೆ ಚಿಕ್ಕ ರಥ ಏರಿದರೆ, ವಿರೂಪಾಕ್ಷ–ಪಂಪಾಂಬಿಕೆಯರ ಉತ್ಸವ ಮೂರ್ತಿಗಳು ದೊಡ್ಡ ರಥದಲ್ಲಿ ರಾರಾಜಿಸಿದವು. ದೇವಸ್ಥಾನದ ಪಟ್ಟದ ಆನೆಯ ಮುಂದಾಳತ್ವದಲ್ಲಿ ಜೋಡಿ ರಥಗಳು ಒಂದರ ಹಿಂದೆ ಮತ್ತೊಂದರಂತೆ ಸಾಗಿದಾಗ ಭಕ್ತರು ಹರ್ಷೋದ್ಗಾರ ಮಾಡಿದರು. ರಥಗಳಿಗೆ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿ ಭಾವದಿಂದ ವಂದಿಸಿದರು.

ವಿಜಯನಗರ ಸಾಮ್ರಾಜ್ಯದ ಪತನದ ನಂತರವೂ ಆನೆಗುಂದಿಯಲ್ಲಿ ಸಾಮಂತ ಅರಸರ ಆಳ್ವಿಕೆ ಮುಂದುವರಿದಿತ್ತು. ಆ ಮನೆತನದವರು ಈಗಲೂ ಇರುವ ಕಾರಣ ರಥೋತ್ಸವದ ದಿನ ಬೆಳಿಗ್ಗೆ ವಿರೂಪಾಕ್ಷ ದೇವಸ್ಥಾನಕ್ಕೆ ಪೂರ್ವಾಭಿಮುಖವಾಗಿ ಪ್ರವೇಶಿಸಿ, ವಿದ್ಯಾರಣ್ಯ ಗುರುಗಳಿಗೆ ಕಿರೀಟ ತೊಡಿಸುವ ಹಾಗೂ ಮಡಿ ತೇರು ಎಳೆಯುವ ಸಂಪ್ರದಾಯ ನಡೆಯುತ್ತಿದೆ. ಬೆಳಿಗ್ಗೆ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರು ಬುಕ್ಕದೇವರಾಯ ಕೊಟ್ಟಂತಹ ಕಿರೀಟ ಧರಿಸಿ ಬ್ರಹ್ಮರಥೋತ್ಸವ ಶಾಸ್ತ್ರ ನೆರವೇರಿಸಿದ್ದರು.

ADVERTISEMENT

ಮ್ಯಾಸಕೇರಿಯವರಿಗೆ ರಥದ ಸನ್ನೆ ಹಿಡಿಯುವ ಹೊಣೆ ಸಿಕ್ಕಿತ್ತು. ಹೀಗಾಗಿ ಹತ್ತಾರು ಸಂಖ್ಯೆಯಲ್ಲಿದ್ದ ಕೇರಿಯ ಯುವಕರು ತಮಟೆ ಸದ್ದಿಗೆ ಹೆಜ್ಜೆ ಹಾಕುತ್ತ ಸಂಭ್ರಮಿಸಿದರು.

ಚಿನ್ನದ ಮುಖವಾಡ, ಕಿರೀಟ: ವಿರೂಪಾಕ್ಷನಿಗೆ ವಿಶೇಷ ಸಂದರ್ಭಗಳಲ್ಲಿ ಮಾತ್ರ ತೊಡಿಸುವ ಚಿನ್ನದ ಮುಖವಾಡ, ಕಿರೀಟ ಕಂಡು ಭಕ್ತರು ಪುಳಕಿತಗೊಂಡರು. ವಿಜಯನಗರದ ಅರಸ ಕೃಷ್ಣದೇವರಾಯ ಮಾಡಿಸಿದ್ದೆನ್ನಲಾದ ಈ ಕಿರೀಟ 6 ಕೆ.ಜಿ.ತೂಕವಿದ್ದು, ಮಹಾಶಿವರಾತ್ರಿ, ರಥೋತ್ಸವ ಸಹಿತ ವಿಶೇಷ ಸಂದರ್ಭಗಳಲ್ಲಿ ಮಾತ್ರ ತೊಡಿಸಲಾಗುತ್ತದೆ. ಇತರ ದಿನಗಳಲ್ಲಿ ಇದು ಲಾಕರ್‌ನಲ್ಲಿರುತ್ತದೆ. ಹಂಪಿಯ ವಿದ್ಯಾರಣ್ಯ ಮಹಾಸ್ವಾಮೀಜಿ ಅವರು ಶಿವನಿಗೆ ಅಭಿಷೇಕ ಮಾಡಿ ಚಿನ್ನದ ಕವಚ ತೊಡಿಸಿದರು.

ಹಂಪಿ ವಿರೂಪಾಕ್ಷೇಶ್ವರ ಸ್ವಾಮಿಯ ಮಹಾರಥೋತ್ಸವವನ್ನು ಕಣ್ತುಂಬಿಕೊಳ್ಳಲು ಶನಿವಾರ ಸೇರಿದ್ದ ಜನಸ್ತೋಮದ ಡ್ರೋನ್‌ ಕ್ಯಾಮೆರಾ ದೃಶ್ಯ  –ಪ್ರಜಾವಾಣಿ ಚಿತ್ರ: ಲವ ಕೆ.

ಉಭಯ ಜಿಲ್ಲೆಗಳಲ್ಲಿ ನೂರಾರು ರಥೋತ್ಸವ

ಹಂಪಿ ರಥೋತ್ಸವದ ಜತೆಗೆ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ 108ಕ್ಕೂ ಅಧಿಕ ರಥೋತ್ಸವಗಳು ನಡೆಯುತ್ತಿರುವುದು ವಿಶೇಷವಾಗಿದೆ. ಸಹಜವಾಗಿಯೇ ಈ ಎಲ್ಲ ದೇವಾಲಯಗಳಿಗೆ ಹಂಪಿಯ ಜತೆಗೆ ಈ ಹಿಂದಿನಿಂದಲೂ ಇದ್ದಿರಬಹುದಾದ ನಂಟಿನ ಬಗ್ಗೆ ಕುತೂಹಲ ಕೆರಳಿಸುವಂತೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.