ADVERTISEMENT

ಹಂಪಿಯಲ್ಲಿ ದಟ್ಟಣೆ, ಪ್ರವಾಸಿಗರು ಹೈರಾಣ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 6:11 IST
Last Updated 17 ಆಗಸ್ಟ್ 2025, 6:11 IST
ಹಂಪಿಯ ಹೇಮಕೂಟ ಏರುದಾರಿಯಲ್ಲಿ ಶನಿವಾರ ಕಂಡ ವಾಹನಗಳ ದಟ್ಟಣೆ  –ಪ್ರಜಾವಾಣಿ ಚಿತ್ರ
ಹಂಪಿಯ ಹೇಮಕೂಟ ಏರುದಾರಿಯಲ್ಲಿ ಶನಿವಾರ ಕಂಡ ವಾಹನಗಳ ದಟ್ಟಣೆ  –ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ಮಳೆ ಕಡಿಮೆಯಾಗಿ ನಿರೀಕ್ಷೆಗೂ ಮೀರಿ ಪ್ರವಾಸಿಗರು ಶನಿವಾರ ಹಂಪಿಗೆ ಬಂದ ಕಾರಣ ಎಲ್ಲೆಡೆ ಸಂಚಾರ ದಟ್ಟಣೆ ಕಂಡುಬಂತು. ಸೂಕ್ತ ಮೂಲಸೌಲಭ್ಯ ಕಲ್ಪಿಸದ ಆಡಳಿತ ವ್ಯವಸ್ಥೆಗೆ ಪ್ರವಾಸಿಗರು ಹಿಡಿಶಾಪ ಹಾಕಿದರು.

‘ಸರಣಿ ರಜೆ ಇದೆ, ಸಹಜವಾಗಿಯೇ ಹಂಪಿಗೆ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ ಎಂಬ ನಿರೀಕ್ಷೆ ಇದ್ದೇ ಇರುತ್ತದೆ. ಅದಕ್ಕೆ ತಕ್ಕಂತೆ ಕನಿಷ್ಠ ಮೂಲಸೌಲಭ್ಯ ಕಲ್ಪಿಸಬೇಡವೇ? ನಾವು ಮತ್ತೊಮ್ಮೆ ಇಲ್ಲಿಗೆ ಬರಬೇಕೇ, ಬೇಡವೇ?’ ಎಂಬುದು ಹಲವು ಪ್ರವಾಸಿಗರ ಪ್ರಶ್ನೆಯಾಗಿತ್ತು.

ವಿಜಯವಿಠ್ಠಲ ದೇವಸ್ಥಾನದ ಗೆಜ್ಜಲ ಮಂಟಪದಿಂದ ಆರಂಭವಾದ ವಾಹನ ದಟ್ಟಣೆ ಎರಡು ಕಿ.ಮೀ. ದೂರದ ಟಾಮರೆಂಡ್ ಟ್ರೀ ರೆಸಾರ್ಟ್‌ ತನಕವೂ ಇತ್ತು. ಹೊಂಡ, ಗುಂಡಿಗಳಿಂದ ಕೂಡಿದ ಉಗ್ರ ನರಸಿಂಹ ಸಮೀಪ ವಾಹನ ನಿಲುಗಡೆಗೆ ಸ್ಥಳವೇ ಇರಲಿಲ್ಲ. ವಿರೂಪಾಕ್ಷ ದೇವಸ್ಥಾನಕ್ಕೆ ತೆರಳುವ ಹೇಮಕೂಟ ಏರು ಮಾರ್ಗದಲ್ಲೂ ಹಲವು ವಾಹನಗಳು ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದವು.

ADVERTISEMENT

‘ಪ್ರವಾಸಿಗರಿಗೆ ಅಗತ್ಯದ ಮೂಲಸೌಲಭ್ಯ ಒದಗಿಸದಿದ್ದರೆ ಅವರು ಮುಂದಿನ ಬಾರಿ ಬರುತ್ತಾರೆಯೇ? ಇದರ ನೇರ ಹೊಡೆತ ಬೀಳುವುದು ರಿಕ್ಷಾಗಳು, ಗೈಡ್‌ಗಳಿಗೆ’ ಎಂದು ಪ್ರವಾಸಿ ಮಾರ್ಗದರ್ಶಿಯೊಬ್ಬರು ಅಳಲು ತೋಡಿಕೊಂಡರು.

1 ಲಕ್ಷ  ಮಂದಿ ಭೇಟಿ: ಸಾಲು ಸಾಲು ರಜೆ ಇದ್ದ ಕಾರಣ ಹಂಪಿಗೆ ಶನಿವಾರ 70 ಸಾವಿರದಿಂದ 1 ಲಕ್ಷದವರೆಗೆ ಪ್ರವಾಸಿಗರು ಬಂದಿರಬಹುದು ಎಂಬ ಅಂದಾಜು ಮಾಡಲಾಗಿದೆ. ಕಮಲಾಪುರ, ಕಡ್ಡಿರಾಂಪುರ, ಹೊಸಪೇಟೆಗಳಲ್ಲಿ ಬಹುತೇಕ ಲಾಡ್ಜ್‌ಗಳು, ಕಾಟೇಜ್‌ಗಳು ಭರ್ತಿಯಾಗಿದ್ದವು. ಇವುಗಳ ದರ ದುಪ್ಪಟ್ಟು, ಮೂರು ಪಟ್ಟು ಏರಿಕೆಯಾಗಿದ್ದು ಸಹ ಕಂಡುಬಂತು.

ಮತ್ತೊಂದೆಡೆ ಟಿ.ಬಿ.ಡ್ಯಾಂಗೂ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದರು.

ಜಾರಿಕೊಳ್ಳುವ ಪರಿ

ಹಂಪಿ ಹಲವು ಇಲಾಖೆಗಳ ಸುಪರ್ದಿಗೆ ಒಳಪಡುವ ಪ್ರವಾಸಿ ತಾಣವಾಗಿದ್ದು ಹೊಣೆಗಾರಿಕೆ ವಹಿಸಿಕೊಳ್ಳಲು ಯಾವ ಇಲಾಖೆಯೂ ಸಿದ್ಧವಿಲ್ಲ. ಮೂಲಸೌಲಭ್ಯ ಸಂಚಾರ ದಟ್ಟಣೆ ಸಹಿತ ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸಿಕೊಡುವ ಕೆಲಸವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಹಂಪಿ ವಿಶ್ವಪಾರಂಪರಿಕ ತಾಣ ನಿರ್ವಹಣಾ ಪ್ರಾಧಿಕಾರ (ಹವಾಮ) ಮಾಡಬೇಕು ಎಂದು ಹೇಳಿದ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರವಾಸಿಗರಿಗೆ ಆಗುವ ತೊಂದರೆಗೂ ನಿಮಗೂ ಸಂಬಂಧವೇ ಇಲ್ಲವೇ’ ಎಂದು ಕೇಳಿದ್ದಕ್ಕೆ ನಿರುತ್ತರರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.