ಹೊಸಪೇಟೆ (ವಿಜಯನಗರ): ಹಂಪಿ ಉತ್ಸವ ಯಶಸ್ವಿಯಾಗಿ ಕೊನೆಗೊಂಡಿದ್ದು, ಮೂರೂ ದಿನಗಳು ಸೇರಿ ಒಟ್ಟು 3.5 ಲಕ್ಷದಿಂದ 4 ಲಕ್ಷದಷ್ಟು ಮಂದಿ ಭೇಟಿ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೊದಲ ದಿನ 75 ಸಾವಿರದಿಂದ 1 ಲಕ್ಷ, ಎರಡು ಮತ್ತು ಮೂರನೇ ದಿನ 1ಲಕ್ಷದಿಂದ 1.50 ಲಕ್ಷ ಮಂದಿ ಬಂದಿದ್ದಾರೆ. ಒಟ್ಟಾರೆ 4 ಲಕ್ಷವನ್ನಂತೂ ಮೀರಿ ಹೋಗಿಲ್ಲ. ಕಳೆದ ವರ್ಷ ಸುಮಾರು 5 ಲಕ್ಷ ಜನ ಬಂದಿದ್ದರು ಎಂದು, ವಾಹನ ನಿಲುಗಡೆಯಲ್ಲಿನ ಕಾರು, ಬೈಕ್‌ಗಳ ಸಂಖ್ಯೆ, ಬಸ್ ಟ್ರಿಪ್‌ಗಳನ್ನು ಲೆಕ್ಕ ಹಾಕಿದ ಪೊಲೀಸರು ಮಾಹಿತಿ ನೀಡಿದ್ದಾರೆ.
ಭಾನುವಾರ ವಿವಿಧ ಪಾರ್ಕಿಂಗ್ ಸ್ಥಳಗಳಲ್ಲಿ 1 ಸಾವಿರದಷ್ಟು ಕಾರುಗಳು, 4 ಸಾವಿರದಷ್ಟು ದ್ವಿಚಕ್ರ ವಾಹನಗಳಿದ್ದವು. 40 ಬಸ್‌ಗಳು 5ರಿಂದ 6 ಬಾರಿ ಜನರನ್ನು ಹೊಸಪೇಟೆಯಿಂದ ಕರೆ ತಂದಿವೆ. ಸ್ಥಳೀಯರನ್ನೂ ಲೆಕ್ಕ ಹಾಕಿಕೊಂಡು ಈ ಸಂಖ್ಯೆಯನ್ನು ಅಂದಾಜಿಸಲಾಗಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಬೆಳಕಿಲ್ಲದ್ದಕ್ಕೆ ಆಕ್ಷೇಪ: ‘ಹಂಪಿ ಉತ್ಸವ ಎಂದರೆ ಅದು ವಿಜಯನಗರದ ಭವ್ಯ ಇತಿಹಾಸದ ಮೇಲೆ ಬೆಳಕು ಚೆಲ್ಲಲೆಂದೇ ಮಾಡುವಂತಹ ಉತ್ಸವ. ಇಂತಹ ಸಂದರ್ಭದಲ್ಲಾದರೂ ಸ್ಮಾರಕಗಳ ಮೇಲೆ, ಮಾತಂಗ ಪರ್ವತ, ಎದುರುಬಸವಣ್ಣ ಮೊದಲಾದೆಡೆ ಬೆಳಕು ಹಾಯಿಸುವ ಕೆಲಸ ಆಗಬೇಕಿತ್ತು. ಗಾಯತ್ರಿ ಪೀಠದ ಎಂ.ಪಿ.ಪ್ರಕಾಶ್ ಮುಖ್ಯ ವೇದಿಕೆಯಲ್ಲಿ ಅಬ್ಬರದ ಬೆಳಕು ಇತ್ತು, ಆದರೆ ಅದೇ ಉತ್ಸಾಹ ಸ್ಮಾರಕಗಳ ಮೇಲೆ ಬೆಳಕು ಹಾಯಿಸಲು ಉಳಿಯದಿರುವುದು ವಿಷಾದಕರ’ ಎಂದು ಉತ್ಸವಕ್ಕೆ ಬಂದಿದ್ದ ಹಲವರು ಬೇಸರ ವ್ಯಕ್ತಪಡಿಸಿದರು.
ಬಹುತೇಕ ಬಿಕೋ: ಮಹಾನವಮಿ ದಿಬ್ಬ ವೇದಿಕೆಯಲ್ಲಿ ಕಾರ್ಯಕ್ರಮಗಳೇನೋ ನಡೆದವು, ಆದರೆ ಅಲ್ಲಿ ಕಾರ್ಯಕ್ರಮ ವೀಕ್ಷಿಸಿದವರ ಸಂಖ್ಯೆ ಕಡಿಮೆ ಇತ್ತು. ಅಲ್ಲೊಂದು ವೇದಿಕೆ ಇದೆ ಎಂಬುದನ್ನು ತಿಳಿಸುವ ಪ್ರಯತ್ನ ನಡೆದಿರಲಿಲ್ಲ, ದಿಬ್ಬದ ಇನ್ನೊಂದು ಬದಿಗೆ ರಸ್ತೆಗೆ ಕಾಣದಂತೆ ವೇದಿಕೆ ನಿರ್ಮಿಸಿದ್ದು ಸಹ ಜನರಿಗೆ ತಿಳಿಯದೆ ಇರುವುದಕ್ಕೆ ಕಾರಣ ಇದ್ದಿರಬಹುದು ಎಂದು ಹಲವು ಕಲಾಸಕ್ತರು ಹೇಳಿದರು.
ಎದುರು ಬಸವಣ್ಣ ವೇದಿಕೆಯ ಕಾರ್ಯಕ್ರಮಗಳನ್ನು ಸರಾಸರಿ 4ಸಾವಿರದಿಂದ 5 ಸಾವಿರ ಮಂದಿ ವೀಕ್ಷಿಸಿದರು. ವಿರೂಪಾಕ್ಷ ದೇವಸ್ಥಾನದೊಳಗಿನ ವೇದಿಕೆಯಲ್ಲಿ ಎಂತಹ ಕಾರ್ಯಕ್ರಮಗಳು ಇವೆ ಎಂಬುದನ್ನು ರಥಬೀದಿಯಲ್ಲಿ ಬಿಂಬಿಸುವ ಪ್ರಯತ್ನ ಮಾಡಿದ್ದರೆ ಅಲ್ಲಿಗೂ ದೊಡ್ಡ ಸಂಖ್ಯೆಯಲ್ಲಿ ಜನರು ಹೋಗುತ್ತಿದ್ದರು ಎಂದು ಕೆಲವರು ಸಲಹೆ ನೀಡಿದರು.
ಹೆಲಿಕಾಪ್ಟರ್‌ನಲ್ಲಿ ಹಾರಾಡಿದ 1200 ಜನ
‘ಹಂಪಿ ಬೈ ಸ್ಕೈ’ ನಲ್ಲಿ ಈ ಬಾರಿ ಮೂರು ದಿನಗಳಲ್ಲಿ 1200 ಮಂದಿ ಎರಡು ಹೆಲಿಕಾಪ್ಟರ್‌ಗಳಲ್ಲಿ ಹಂಪಿಯ ದರ್ಶನ ಪಡೆದಿದ್ದಾರೆ’ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ ತಿಳಿಸಿದರು. ಕಳೆದ ವರ್ಷ 1056 ಮಂದಿ ಎರಡು ಹೆಲಿಕಾಪ್ಟರ್‌ಗಳಲ್ಲಿ ವೀಕ್ಷಣೆ ಮಾಡಿದ್ದರು. ಅದಕ್ಕೆ ಹೋಲಿಸಿದರೆ ಈ ಬಾರಿ ಸ್ವಲ್ಪ ಹೆಚ್ಚೇ ಮಂದಿ ಪ್ರಯಾಣಿಸಿದಂತಾಗಿದೆ. ಕಳೆದ ಬಾರಿ ಬಹುತೇಕ ಐದು ದಿನ ಈ ಸವಾರಿ ನಡೆದಿತ್ತು ಈ ಬಾರಿ ಮೂರೇ ದಿನ ನಡೆದಿದ್ದು ಮೊದಲ ದಿನ ಅಂದರೆ ಫೆ.28ರಂದು ಮಧ್ಯಾಹ್ನದ ನಂತರದಿಂದಷ್ಟೇ ಹಾರಾಟ ಆರಂಭವಾಗಿತ್ತು. ಸೋಮವಾರ ಕೇವಲ ಐದಾರು ಬಾರಿ ಮಾತ್ರ ಹಾರಾಟ ನಡೆಸಿದ ಹೆಲಿಕಾಪ್ಟರ್‌ಗಳು ಬಳಿಕ ಜನರಿಲ್ಲದ ಕಾರಣ ಹಾರಾಟ ಕೊನೆಗೊಳಿಸಿದವು.
ಹಂಪಿ ಉತ್ಸವ ಯಶಸ್ವಿಯಾಗಿದೆ. ಜನರಿಗೆ ಹಲವು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸುವ ಅವಕಾಶ ಸಿಕ್ಕಿದೆ-ಎಂ.ಎಸ್.ದಿವಾಕರ್ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.