ADVERTISEMENT

ಹಂಪಿ ಉತ್ಸವದಲ್ಲಿ ಶೇ 50 ಸ್ಥಳೀಯ ಕಲಾವಿದರು

ಉತ್ಸವದ ದಿನಾಂಕ ನಿಗದಿ ಬಗ್ಗೆ ಇನ್ನಷ್ಟೇ ಅಂತಿಮ ತೀರ್ಮಾನ–ಡಿ.ಸಿ ವೆಂಕಟೇಶ್‌

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2022, 12:45 IST
Last Updated 18 ನವೆಂಬರ್ 2022, 12:45 IST
   

ಹೊಸಪೇಟೆ (ವಿಜಯನಗರ): ‘ಪ್ರಸಕ್ತ ಸಾಲಿನ ‘ಹಂಪಿ ಉತ್ಸವ’ದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಶೇ 50ಕ್ಕಿಂತಲೂ ಹೆಚ್ಚು ಕಾರ್ಯಕ್ರಮಗಳಲ್ಲಿ ಸ್ಥಳೀಯರಿಗೆ ಅವಕಾಶ ಒದಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ ತಿಳಿಸಿದರು.

ಶುಕ್ರವಾರ ನಗರದಲ್ಲಿ ಏರ್ಪಡಿಸಿದ್ದ ಹಂಪಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಉತ್ಸವದಲ್ಲಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಕಲಾವಿದರೊಂದಿಗೆ ಸ್ಥಳೀಯ ಕಲಾವಿದರು ಕಾರ್ಯಕ್ರಮ ನೀಡುವರು. ಈಗಾಗಲೇ 150ಕ್ಕಿಂತ ಹೆಚ್ಚು ಅರ್ಜಿಗಳು ನನ್ನ ಕಚೇರಿಗೆ ಬಂದಿವೆ. ಅಧಿಕಾರಿಗಳ ಸಮಿತಿ ಪರಿಶೀಲಿಸಿ, ಪುನರಾವರ್ತನೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಉತ್ಸವದಲ್ಲಿ ಕರಕುಶಲ ಪ್ರದರ್ಶನ, ಸಾಹಸ ಕ್ರೀಡೆಗಳು, ಫಲಪುಷ್ಪ ಪ್ರದರ್ಶನ, ವಿವಿಧ ಇಲಾಖೆಗಳ ವಸ್ತುಪ್ರದರ್ಶನ, ಧ್ವನಿ ಬೆಳಕು, ಹಂಪಿ ಬೈ ಸ್ಕೈ, ಛಾಯಾಚಿತ್ರ ಸೇರಿದಂತೆ ಇತರೆ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಉತ್ಸವಕ್ಕೆ ಬರುವ ಪ್ರವಾಸಿಗರು, ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಡಲಾಗುತ್ತದೆ ಎಂದರು.

ADVERTISEMENT

ಕೋವಿಡ್‌ ನಂತರ ಪ್ರವಾಸೋದ್ಯಮ ಚೇತರಿಕೆ ಕಂಡಿದ್ದು, ಹೆಚ್ಚಿನ ಪ್ರವಾಸಿಗರು ಹಂಪಿಗೆ ಬರುತ್ತಿದ್ದಾರೆ. ಉತ್ಸವ ಕೂಡ ವಿಜೃಂಭಣೆಯಿಂದ ಆಚರಿಸಲಾಗುವುದು. ಜನವರಿ 7, 8ರಂದು ಉತ್ಸವ ಸಂಘಟಿಸುವ ಯೋಜನೆ ಇದೆ. ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನ ನಿಗದಿ ಆಗಿರುವುದರಿಂದ ದಿನಾಂಕದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗುವುದು. ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ದಿನಾಂಕ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.

ಎಷ್ಟು ವೇದಿಕೆಗಳನ್ನು ನಿರ್ಮಿಸಬೇಕೆನ್ನುವುದರ ಬಗ್ಗೆ ಜನಪ್ರತಿನಿಧಿಗಳ ಸಭೆಯಲ್ಲಿ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು. ವಿವಿಧ ಕಂಪನಿಗಳ ಸಿ.ಎಸ್.ಆರ್.ನಿಧಿಯಡಿ ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಳೆದ ಎರಡು ವರ್ಷಗಳ ₹4 ಕೋಟಿ ಅನುದಾನ, ಪ್ರವಾಸೋದ್ಯಮ ಇಲಾಖೆಯ ಅನುದಾನ ಸೇರಿದಂತೆ ವಿವಿಧ ಕಂಪನಿಗಳ ಪ್ರಾಯೋಜಕತ್ವ ಪಡೆದು, ಸಂಪನ್ಮೂಲ ಕ್ರೋಢೀಕರಿಸಿ ಅದ್ದೂರಿಯಾಗಿ ಉತ್ಸವ ಆಚರಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್‌., ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ವಿ.ಪ್ರಕಾಶ್, ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

26 ಸಮಿತಿಗಳ ರಚನೆ
ಉತ್ಸವವನ್ನು ಯಶಸ್ವಿಯಾಗಿ ನಡೆಸಬೇಕೆನ್ನುವ ಉದ್ದೇಶದಿಂದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ 26 ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಗಳು ಸಭೆಗಳನ್ನು ನಡೆಸಿ ಆಯಾ ಸಮಿತಿಗೆ ಸಂಬಂಧಿಸಿದ ಕ್ರಿಯಾ ಯೋಜನೆಯನ್ನು ವಾರದಲ್ಲಿ ನೀಡುವಂತೆ ಸೂಚಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.