
ಹೊಸಪೇಟೆ (ವಿಜಯನಗರ): ಈ ಬಾರಿಯ ಹಂಪಿ ಉತ್ಸವ ಫೆ.13ರಿಂದ 15ರವರೆಗೆ ಐದು ವೇದಿಕೆಗಳಲ್ಲಿ ನಡೆಯಲಿದ್ದು, ಹಲವು ಸ್ಥಳಗಳಲ್ಲಿ ಪ್ರದರ್ಶನಗಳು, ಸಾಹಸ ಕ್ರೀಡೆಗಳು ನಡೆಯಲಿದೆ. ಇದನ್ನು ನೋಡಲು ಬರುವ ಜನರಿಗೆ ಅನುಕೂಲ ಮಾಡಿಕೊಡಲು ಮೂರೂ ದಿನ ಎಲ್ಲಾ ತಾಲ್ಲೂಕುಗಳಿಂದ ಉಚಿತ ಬಸ್ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಹಂಪಿ ಉತ್ಸವದ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಮಾಧ್ಯಮದವರ ಸಹಿತ ಹಲವರಿಂದ ಸಲಹೆ ಕೇಳಿದರು. ಆಗ ವಿವಿಧ ತಾಲ್ಲೂಕುಗಳಿಂದ ಉತ್ಸವದ ಮೊದಲ ದಿನ ಮಾತ್ರ ಉಚಿತ ಬಸ್ ಸೇವೆ, ಉಳಿದ ದಿನಗಳಲ್ಲಿ ಹೊಸಪೇಟೆಯಿಂದ ಮಾತ್ರ ಹಂಪಿಗೆ ಉಚಿತ ಬಸ್ ಓಡಿಸುತ್ತಿರುವುದನ್ನು ಸಚಿವರ ಗಮನಕ್ಕೆ ತರಲಾಯಿತು. ಈ ಬಗ್ಗೆ ಚರ್ಚಿಸಿ, ಮೂರೂ ದಿನ ವಿವಿಧ ತಾಲ್ಲೂಕುಗಳಿಂದ ಬಸ್ ಓಡಿಸುವ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ವಾಹನ ನಿಲುಗಡೆ: ಕಳೆದ ವರ್ಷ ಹಲವಾರು ಕೃಷಿಕರು ತಮ್ಮ ಜಮೀನುಗಳನ್ನು ವಾಹನ ನಿಲುಗಡೆಗೆ ನೀಡಿದ್ದರು. ಆದರೆ ಅವರಿಗೆ ಒಂದಿಷ್ಟು ಗೌರವಧನ ಕೊಟ್ಟಿಲ್ಲದ ಕಾರಣ ಈ ಬಾರಿ ಅವರು ತಮ್ಮ ಜಾಗ ನೀಡುತ್ತಿಲ್ಲ ಎಂಬ ವಿಷಯ ಸಭೆಯಲ್ಲಿ ಪ್ರಸ್ತಾಪವಾಯಿತು. ರೈತರಿಗೆ ಒಂದಿಷ್ಟು ಪರಿಹಾರ ಕೊಡೋಣ ಎಂದು ಸಚಿವರು ಹೇಳಿದರು. ಜಮೀನು ಮಾಲೀಕರೊಂದಿಗೆ ಮಾತುಕತೆ ನಡೆಸಲಾಗಿದೆ, ಈ ಬಾರಿ ಸಹ ಜಾಗ ಕೊಡಲು ಒಪ್ಪಿದ್ದಾರೆ, ಕೆಲವು ಕೃಷಿ ಭೂಮಿಯಲ್ಲಿ ಈಗಷ್ಟೇ ಬಾಳೆಗಿಡಗಳನ್ನು ನೆಟ್ಟಿದ್ದು, ಅದನ್ನು ತೆಗೆದು ವಾಹನ ನಿಲುಗಡೆಗೆ ಕೊಡುವ ಭರವಸೆ ನೀಡಿದ್ದಾರೆ ಎಂದು ಉಪವಿಭಾಗಾಧಿಕಾರಿ ಪಿ.ವಿವೇಕಾನಂದ ತಿಳಿಸಿದರು.
ಕೆಲವೊಂದು ವೇದಿಕೆ ಕಡಿತ?: ಪ್ರಧಾನ ವೇದಿಕೆ, ಎದುರುಬಸವಣ್ಣ ವೇದಿಕೆ, ವಿರೂಪಾಕ್ಷ ದೇವಸ್ಥಾನ ವೇದಿಕೆ ಬಿಟ್ಟರೆ ಉಳಿದ ಎರಡು ವೇದಿಕೆಗಳಲ್ಲಿ (ಸಾಸಿವೆಕಾಳು ಗಣೇಶ, ಮಹಾನವಮಿ ದಿಬ್ಬ) ಪ್ರೇಕ್ಷಕರೇ ಇರುವುದಿಲ್ಲ, ಹೀಗಾಗಿ ಅಲ್ಲಿಗೂ ಪ್ರೇಕ್ಷಕರು ಹೋಗುವಂತೆ ಮಾಡಬೇಕು, ಇಲ್ಲವೇ ಆ ವೇದಿಕೆಗಳನ್ನೇ ರದ್ದುಪಡಿಸಬೇಕು ಎಂಬ ಸಲಹೆಯೂ ಬಂತು. ಇದರ ಬಗ್ಗೆ ಸಹ
ಪರಿಶೀಲಿಸುವುದಾಗಿ ಸಚಿವ ಜಮೀರ್ ತಿಳಿಸಿದರು.
ಸಮಿತಿಗಳ ರಚನೆ: ಆಹಾರ, ವಾಹನ, ಆರೋಗ್ಯ ಸಹಿತ ವಿವಿಧ ಸಮಿತಿಗಳನ್ನು ರಚಿಸಿರುವ ಕುರಿತು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ಸಭೆಗೆ ಮಾಹಿತಿ ನೀಡಿದರು. ಈವೆಂಟ್ ಸಂಸ್ಥೆಯವರು, ವೇದಿಕೆ ನಿರ್ಮಾಣ ಸಂಸ್ಥೆಯವ
ರೊಂದಿಗೆ ಪ್ರತ್ಯೇಕ ಸಭೆ ನಡೆಸಿ, ಯಾವ ಯಾವ ಗಣ್ಯರು, ಸೆಲೆಬ್ರೆಟಿಗಳಿಗೆ ಆಹ್ವಾನ ನೀಡಬೇಕು ಎಂಬ ಬಗ್ಗೆ ಚರ್ಚಿಸಲಾ
ಗುವುದು. ಈಗಾಗಲೇ ಧ್ರುವ ಸರ್ಜಾ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಬರುವುದು ದೃಢಪಟ್ಟಿದೆ. ಉಳಿದವರ ಪಟ್ಟಿ ಸಿದ್ಧವಾಗುತ್ತಿದೆ ಎಂದರು.
‘ಹುಡಾ’ ಅಧ್ಯಕ್ಷ ಎಚ್.ಎನ್.ಎಫ್.ಮೊಹಮ್ಮದ್ ಇಮಾಂ ನಿಯಾಜಿ, ಎಸ್‌ಪಿ ಎಸ್.ಜಾಹ್ನವಿ, ಜಿಲ್ಲಾ ಪಂಚಾಯಿತಿ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಷಾ, ಡಿಸಿಎಫ್ ಅನುಪಮ, ಎಡಿಸಿ ಇ.ಬಾಲಕೃಷ್ಣ ಇದ್ದರು.
ಇದು ನನ್ನ 3ನೇ ಹಂಪಿ ಉತ್ಸವ. ಮೊದಲು ಎರಡು ಉತ್ಸವಗಳಿಗಿಂತ ಈ ಬಾರಿ ಭಿನ್ನವಾಗಿ ಅದ್ಧೂರಿಯಾಗಿ ಈ ನಡೆಯಬೇಕು. ಅಧಿಕಾರಿಗಳ ಸಮನ್ವಯದಿಂದ ಮಾತ್ರ ಇದು ಸಾಧ್ಯಜಮೀರ್ ಅಹಮದ್ ಖಾನ್ ಜಿಲ್ಲಾ ಉಸ್ತುವಾರಿ ಸಚಿವ
‘ಹಂಪಿ ಬೈ ಸ್ಕೈ’ ಹಾರಾಟ; ‘ಮಕ್ಕಳಿಗೆ ₹1 ಸಾವಿರ ರಿಯಾಯಿತಿ’
ಹಂಪಿ ಉತ್ಸವದಲ್ಲಿ ಹೆಲಿಕಾಪ್ಟರ್‌ನಿಂದ ಹಂಪಿಯ ವಿಹಂಗಮ ದೃಶ್ಯ ನೋಡುವ ‘ಹಂಪಿ ಬೈ ಸ್ಕೈ’ ಹಾರಾಟ ಈ ಬಾರಿಯೂ ಇರಲಿದ್ದು ಮೊದಲ ದಿನ ಮೊದಲ 100 ಶಾಲಾ ವಿದ್ಯಾರ್ಥಿಗಳಿಗೆ ₹1000 ರಿಯಾಯಿತಿಯಲ್ಲಿ ಹಾರಾಟ ನಡೆಸುವುದಾಗಿ ಹೆಲಿಕಾಪ್ಟರ್ ಸಂಸ್ಥೆಯ ಪ್ರತಿನಿಧಿಯು ಸಭೆಗೆ ತಿಳಿಸಿದರು. ‘6 ನಿಮಿಷದ ಹಾರಾಟಕ್ಕೆ ಎಲ್ಲರಿಗೂ ₹3999 ಶುಲ್ಕ ನಿಗದಿಪಡಿಸಲಾಗಿದೆ. ಮೊದಲ ದಿನ ಮೊದಲ 100 ಶಾಲಾ ಮಕ್ಕಳಿಗೆ ಈ ಶುಲ್ಕ ₹2999 ಇರಲಿದೆ. ಎರಡೂವರೆ ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ಟಿಕೆಟ್ ಇಲ್ಲ. ಕೊನೆಯ ಎರಡು ದಿನ ಅಧಿಕ ಪ್ರವಾಸಿಗರು ಇರುವ ಕಾರಣ ಈ ರಿಯಾಯಿತಿ ಪ್ರಯಾಣ ಸಾಧ್ಯವಿಲ್ಲ. ಬೇಡಿಕೆ ಇದ್ದರೆ ಫೆ.12ರಂದೂ ಹಾರಾಟ ನಡೆಸಬಹುದು’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.