ಸಿದ್ದರಾಮಯ್ಯ
ಹೊಸಪೇಟೆ (ವಿಜಯನಗರ): ‘ವಿಜಯನಗರ ಸಾಮ್ರಾಜ್ಯದ ವೈಭವ, ಇತಿಹಾಸವನ್ನು ಜನರಿಗೆ ತಿಳಿಸುವ ಅಗತ್ಯ ಇದೆ. ಹಿಂದಿನಂತೆ ನವೆಂಬರ್ 3, 4 ಮತ್ತು 5ರಂದೇ ಉತ್ಸವವನ್ನು ನಡೆಸುವುದು ಸೂಕ್ತ. ಹೀಗಾಗಿ ನವೆಂಬರ್‌ನಲ್ಲೇ ಮುಂದಿನ ಹಂಪಿ ಉತ್ಸವ ನಡೆಯಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಹಂಪಿಯ ಗಾಯತ್ರಿ ಪೀಠ ಸಮೀಪದ ಎಂ.ಪಿ.ಪ್ರಕಾಶ್ ವೇದಿಕೆಯಲ್ಲಿ ಶುಕ್ರವಾರ ರಾತ್ರಿ ಹಂಪಿ ಉತ್ಸವವನ್ನು ಉದ್ಘಾಟಿಸಿದ ಅವರು, ‘ಫೆಬ್ರುವರಿ ತಿಂಗಳಲ್ಲಿ ಪರೀಕ್ಷೆಗಳು ನಡೆಯುವುದರಿಂದ ಈ ವರ್ಷದ ನವೆಂಬರ್ ಮೊದಲ ವಾರದಲ್ಲಿ ಹಂಪಿ ಉತ್ಸವ ನಡೆಸಲಾಗುವುದು’ ಎಂದರು.
‘ರಾಜ್ಯ ಸರ್ಕಾರ ಕಲೆ, ಸಂಸ್ಕೃತಿಗಳ ಉತ್ತೇಜನಕ್ಕೆ ಸದಾ ಸಿದ್ಧವಿದೆ, ಹೀಗಾಗಿ ಹಲವು ಉತ್ಸವಗಳಿಗೆ ಅನುದಾನ ನೀಡುತ್ತಿದೆ. ಈ ವ್ಯವಸ್ಥೆ ಮುಂದುವರಿಯಲಿದೆ. ಜನರಿಗೆ ನಮ್ಮ ನೆಲದ ಇತಿಹಾಸ, ಸಂಸ್ಕೃತಿ, ಕಲೆಗಳನ್ನು ತಿಳಿಸುವುದೇ ಇಂತಹ ಉತ್ಸವಗಳ ಉದ್ದೇಶ’ ಎಂದು ಸಿದ್ದರಾಮಯ್ಯ ಹೇಳಿದರು.
‘ಸಮಾಜದಲ್ಲಿ ಅಸಮಾನತೆ ಹೋಗದೆ ಜಾತಿ ವ್ಯವಸ್ಥೆ ಅಳಿಯಲಾರದು. ಅಸಮಾನತೆಯನ್ನು ತೊಡೆದು ಹಾಕಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಗ್ಯಾರಂಟಿ ಅದರಲ್ಲಿ ಒಂದು’ ಎಂದು ಹೇಳಿದರು.
ಅದ್ಭುತ ಡ್ರೋನ್ ಶೋ:
ಇದಕ್ಕೆ ಮೊದಲು ಮುಖ್ಯ ವೇದಿಕೆಯ ಆಗಸದ ಮೇಲೆ ಹಾರಾಡಿದ ಸುಮಾರು 1,000 ಡ್ರೋನ್‌ಗಳು ವಿಜಯನಗರ ಸಾಮ್ರಾಜ್ಯದ ವೈಭವದ ಸಂಕೇತಗಳಾದ ವಿರೂಪಾಕ್ಷ ದೇವಸ್ಥಾನ, ಕಲ್ಲಿನ ರಥ, ಶ್ರೀಕೃಷ್ಣದೇವರಾಯನ ಬಿಂಬಗಳನ್ನು ಆಗಸದಲ್ಲಿ ಮೂಡಿಸಿದವು. ಜತೆಗೆ ಸರ್ಕಾರದ ಗ್ಯಾರಂಟಿ ಯೋಜನೆಗಳು, ಪುನೀತ್ ರಾಜ್‌ಕುಮಾರ್ ಸಹಿತ ಸಿಎಂ, ಡಿಸಿಎಂ, ಕೆಲವು ಸಚಿವರು, ಶಾಸಕರ ಪ್ರತಿರೂಪವನ್ನು ಮೂಡಿಸಿದವು.
ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್, ಸಂಸದರಾದ ಇ.ತುಕಾರಾಂ, ರಾಜಶೇಖರ ಹಿಟ್ನಾಳ್, ಶಾಸಕ ಎಚ್.ಆರ್.ಗವಿಯಪ್ಪ, ಬಳ್ಳಾರಿ, ವಿಜಯನಗರ ಜಿಲ್ಲೆಗಳ ಇತರ ಶಾಸಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.