ADVERTISEMENT

ಸಂಚಾರ ದಟ್ಟಣೆ ನಿಭಾಯಿಸಲು ಸಾಧ್ಯವಾಗದ ಸ್ಥಿತಿ: ಹಂಪಿ ಉತ್ಸವ ಜಾಗ ಬದಲಾವಣೆ?

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 3:02 IST
Last Updated 21 ಫೆಬ್ರುವರಿ 2026, 3:02 IST
ಹಂಪಿ ಉತ್ಸವದ ಸಂದರ್ಭದಲ್ಲಿ ಕಡ್ಡಿರಾಂಪುರದಲ್ಲಿ ಉಂಟಾಗಿದ್ದ ವಾಹನ ದಟ್ಟಣೆ
ಹಂಪಿ ಉತ್ಸವದ ಸಂದರ್ಭದಲ್ಲಿ ಕಡ್ಡಿರಾಂಪುರದಲ್ಲಿ ಉಂಟಾಗಿದ್ದ ವಾಹನ ದಟ್ಟಣೆ   

ಹೊಸಪೇಟೆ (ವಿಜಯನಗರ): ಹಂಪಿ ಉತ್ಸವ–2026 ಯಶಸ್ವಿಯಾಗಿ ಕೊನೆಗೊಂಡಿದ್ದರೂ, ಗಾಯತ್ರಿ ಪೀಠದ ಬದಲಿಗೆ ಕಮಲಾಪುರದ ಬೇರೊಂದು ಕಡೆಯಲ್ಲಿ ಹಂಪಿ ಉತ್ಸವ ಮಾಡಿದರೆ ಒಳಿತು ಎಂಬ ಮಾತುಗಳು ಕೇಳಿಬಂದಿವೆ. ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡ ಸಾವಿರಾರು ಮಂದಿ ಇದನ್ನು ಮತ್ತೆ ಮತ್ತೆ ಹೇಳುತ್ತಿದ್ದಾರೆ.

ಕಡ್ಡಿರಾಂಪುರ ಕ್ರಾಸ್‌ನಿಂದ ಗಾಯತ್ರಿ ಪೀಠದ ವರೆಗೆ ಹಾಗೂ ಮುಂದೆ ಕಮಲಾಪುರವರೆಗೆ ಏಕಮುಖ ಸಂಚಾರ ವ್ಯವಸ್ಥೆ ಕಲ್ಪಿಸಿದರೂ ದಟ್ಟಣೆ ಸಮಸ್ಯೆ ನಿವಾರಿಸುವುದು ಸಾಧ್ಯವಾಗಲಿಲ್ಲ.

‘ಪೊಲೀಸರು ದಟ್ಟಣೆ ನಿಯಂತ್ರಿಸಲು ಸಾಕಷ್ಟು ಶ್ರಮ ವಹಿಸಿದರೂ ಪರಿಸ್ಥಿತಿ ಕೈಮೀರಿ ಹೋಗುತ್ತಿತ್ತು. ವಾಹನ ನಿಲುಗಡೆ ಸ್ಥಳಗಳೆಲ್ಲ ಭರ್ತಿಯಾಗಿದ್ದವು. ಕಡ್ಡಿರಾಂಪುರದಿಂದ ಒಳಗೆ ಬಂದ ವಾಹನಗಳು ಮುಂದಕ್ಕೂ ಚಲಿಸಲು ಸಾಧ್ಯವಾಗದೆ, ಹಿಂದಕ್ಕೂ ಹೋಗಲಾಗದೆ ಒದ್ದಾಡುವ ಸ್ಥಿತಿ ಎದುರಾಯಿತು. ಇದನ್ನು ನೋಡಿದರೆ ಮುಂದೆ ಮುಖ್ಯ ವೇದಿಕೆಯ ಸ್ಥಳ ಬದಲಾವಣೆ ಮಾಡುವುದು ಒಳಿತು’ ಎಂದು ಪೊಲೀಸ್‌ ಮಾತ್ರವಲ್ಲದೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟರು.

ADVERTISEMENT

‘ಕಮಲಾಪುರ ಸಮೀಪ ಕನಿಷ್ಠ 20 ಎಕರೆ ಸ್ಥಳ ಗುರುತಿಸಿ ಅಲ್ಲಿ ಹಂಪಿ ಉತ್ಸವ ಮಾಡಬೇಕು. ಜತೆಗೆ ವಾಹನ ನಿಲುಗಡೆಗೆ ಸಮೀಪದಲ್ಲೇ ಪ್ರತ್ಯೇಕ ಸ್ಥಳ ಇರಬೇಕು. ವರ್ಷದಿಂದ ವರ್ಷಕ್ಕೆ ಉತ್ಸವಕ್ಕೆ ಬರುವ ಜನರನ್ನು ನಿಭಾಯಿಸಲು ಇದರಿಂದ ಸಾಧ್ಯವಾಗಬಹುದಷ್ಟೇ’ ಎಂದು ಇನ್ನೊಬ್ಬ ಅಧಿಕಾರಿ ಹೇಳಿದರು.

‘ಚಿಂತನೆ ನಡೆದಿದೆ’: ‘ಮುಖ್ಯ ವೇದಿಕೆ ಕಾರ್ಯಕ್ರಮವನ್ನು ಗಾಯತ್ರಿ ಪೀಠ ಸಮೀಪದಿಂದ ಹಂಪಿಯ ಸಮೀಪದಲ್ಲೇ ಬೇರೊಂದು ಕಡೆಗೆ ಸ್ಥಳಾಂತರಿಸುವ ಕುರಿತು ಯೋಚನೆ ಮಾಡಲಾಗುತ್ತಿದೆ. ಸೂಕ್ತ ಸ್ಥಳಕ್ಕಾಗಿ ಹುಡುಕಾಟ ನಡೆಸಲಾಗುವುದು’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಂಪಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ವಿಸ್ತರಿಸುವುದು ಹಾಗೂ ದ್ವಿಪಥ ರಸ್ತೆ ಮಾಡುವುದು ಕಷ್ಟ, ಏಕೆಂದರೆ ಸ್ಮಾರಕಗಳು ಇರುವ ಕಾರಣ ಅನುಮತಿ ಸಿಗಲಾರದು. ಖಾಸಗಿ ಜಮೀನುಗಳು ಸಹ ಇವೆ. ಹೀಗಾಗಿ ಬದಲಿ ಸ್ಥಳ ಗುರುತಿಸುವುದೇ ಸೂಕ್ತ’ ಎಂದು ಅವರು ಹೇಳಿದರು.

ಮೈಮರೆತರೆ ಅಪಾಯ

ಹಂಪಿ ಉತ್ಸವದ ಉದ್ಘಾಟನಾ ಕಾರ್ಯಕ್ರಮದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇದಿಕೆಯಲ್ಲಿ ಇದ್ದಾಗಲೇ ಪಟಾಕಿ ಸಿಡಿಸಿದ್ದರಿಂದ ವೇದಿಕೆ ಸಮೀಪ ಸಣ್ಣದಾಗಿ ಬೆಂಕಿ ಆಕಸ್ಮಿಕ ಸಂಭವಿಸಿತು. ಬೆಂಕಿಗೆ ಹೆದರಿ ಜನ ಓಡಿದ್ದರೆ ಕಾಲ್ತುಳಿತ ಆಗುವ ಆತಂಕವೂ ಇತ್ತು. ‘ಪಟಾಕಿ ಸಿಡಿಸುವುದನ್ನು ನಮಗೆ ಮೊದಲಾಗಿ ಹೇಳಿಯೇ ಇರಲಿಲ್ಲ. ಪಟಾಕಿ ಕಿಡಿ ಬಿದ್ದು ಬೆಂಕಿ ಹೊತ್ತಿಕೊಂಡಿತ್ತು. ಸಿಎಂ ಸಮ್ಮುಖದಲ್ಲಿ ಹೀಗೆ ಆದುದು ಈ ಬಾರಿಯ ಉತ್ಸವದ ಕಪ್ಪು ಚುಕ್ಕೆ. ಅದರ ಹೊರತು ಎಲ್ಲವೂ ಸಮರ್ಪಕವಾಗಿ ನಡೆಯಿತು. ಮುಂದೆ ಇಂತಹ ಪ್ರಸಂಗ ನಡೆಯದಂತೆ ಪೊಲೀಸ್‌ ಇಲಾಖೆಯ ಸೂಚನೆಯನ್ನು ಚಾಚೂ ತಪ್ಪದಂತೆ ಪಾಲಿಸಬೇಕು ಎಂಬುದಕ್ಕೆ ಇದು ದೊಡ್ಡ ಪಾಠವಾಗಿದೆ. ಎಲ್ಲರೂ ಇದನ್ನು ಅರ್ಥಮಾಡಿಕೊಳ್ಳುತ್ತಾರೆ ಎಂಬ ವಿಶ್ವಾಸ ಇದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಹಂಪಿ ಸಮೀಪದಲ್ಲೇ ಉತ್ಸವ ನಡೆಯಬೇಕು ಹೀಗಾಗಿ ಹಂಪಿಗೆ ಹೆಚ್ಚೇನೂ ದೂರ ಅಲ್ಲದ ಜನರಿಗೆ ಅನುಕೂಲವೂ ಆಗುವಂತಹ ಸ್ಥಳ ಗುರುತಿಸಿ ಅಲ್ಲಿ ಮುಖ್ಯ ವೇದಿಕೆ ನಿರ್ಮಿಸುವ ಯೋಜನೆ ರೂಪಿಸಲಾಗುವುದು.
ಕವಿತಾ ಎಸ್.ಮನ್ನಿಕೇರಿ, ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.