
ಹಂಪಿಯ ರಾಣಿಸ್ನಾನಗೃಹ ಸಮೀಪ ಶನಿವಾರ ಆರ್‌ಟಿಒ ಸಿಬ್ಬಂದಿ ವಾಹನ ತಪಾಸಣೆ ನಡೆಸಿದ್ದರಿಂದ ಉಂಟಾದ ಸಂಚಾರ ದಟ್ಟಣೆ
–ಪ್ರಜಾವಾಣಿ ಚಿತ್ರ
ಹೊಸಪೇಟೆ (ವಿಜಯನಗರ): ಹಂಪಿಗೆ ಪ್ರವಾಸಿಗರು ಬರುವುದು ಮನಸ್ಸಿಗೆ ಆಹ್ಲಾದ, ನೆಮ್ಮದಿ ಪಡೆಯುವುದಕ್ಕೆ, ಆದರೆ ಹಂಪಿಯ ಸ್ಮಾರಕಗಳ ಸಮೀಪದಲ್ಲೇ ವಾಹನ ತಪಾಸಣೆ ನಡೆಸುತ್ತ ಮಾನಸಿಕ ಕಿರುಕುಳ ನೀಡುವ ವ್ಯವಸ್ಥೆಗೆ ಪ್ರವಾಸಿಗರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ರಾಣಿಸ್ನಾನಗೃಹ ಸಮೀಪ ಶನಿವಾರ ಪ್ರಾದೇಶಿಕ ಸಾರಿಗೆ ಕಚೇರಿಯ (ಆರ್‌ಟಿಒ) ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದುದರಿಂದ ಸ್ವಲ್ಪ ಹೊತ್ತು ಸಂಚಾರ ದಟ್ಟಣೆ ಉಂಟಾಗಿತ್ತು, ಅದಕ್ಕಿಂತಲೂ ಮುಖ್ಯವಾಗಿ ಶಾಲಾ ಮಕ್ಕಳನ್ನು ತುಂಬಿದ್ದ ಬಸ್ಸೊಂದು ತಪಾಸಣೆ ನೆಪದಲ್ಲಿ 20 ನಿಮಿಷಕ್ಕೂ ಹೆಚ್ಚು ಕಾಲ ನಿಂತಲ್ಲಿಯೇ ನಿಂತಿತ್ತು.
ಗೆಜ್ಜಲಮಂಟಪದಲ್ಲಿ ಪಾರ್ಕಿಂಗ್ ಮಾಡಲಾದ ಸ್ಥಳಕ್ಕೂ ಬಂದ ಆರ್‌ಟಿಒ ಸಿಬ್ಬಂದಿ, ಅಲ್ಲೂ ವಾಹನ ತಪಾಸಣೆ ಮಾಡುತ್ತಿದ್ದುದು ಕಂಡುಬಂತು. ಇದರಿಂದ ಸಹ ಪ್ರವಾಸಿಗರು ತೀವ್ರ ಅಸಹನಗೊಂಡರು.
ಹೊರಗಡೆ ಮಾಡಿ: ‘ವಾಹನ ತಪಾಸಣೆ ಮಾಡಬಾರದು ಎಂದು ನಾವು ಹೇಳುತ್ತಿಲ್ಲ. ಹಂಪಿಗೆ ಪ್ರವೇಶ ಪಡೆಯುವ ಸ್ಥಳದಲ್ಲಿ ಅಂದರೆ ಕಡ್ಡಿರಾಂಪುರ ಕ್ರಾಸ್, ಕಮಲಾಪುರ ಕಡೆಯಲ್ಲಿ ತಪಾಸಣೆ ಮಾಡಲಿ, ಸ್ಮಾರಕಗಳ ಬಳಿಯಲ್ಲೇ ಏಕೆ ಮಾಡಬೇಕು? ಪ್ರವಾಸಿಗರು ಮಾನಸಿಕ ಯಾತನೆ ಅನುಭವಿಸಿ ಮತ್ತೊಮ್ಮೆ ಇತ್ತ ಸುಳಿಯದಂತೆ ಮಾಡುವುದೇ ಇವರ ಯೋಜನೆ ಇದ್ದಂತಿದೆ’ ಎಂದು ಹಲವು ಪ್ರವಾಸಿಗರು ‘ಪ್ರಜಾವಾಣಿ’ ಬಳಿ ದೂರಿದರು.
ಈ ಹಿಂದೆ ಪೊಲೀಸ್ ಇಲಾಖೆಯಿಂದಲೂ ಇಂತಹದೇ ತಪಾಸಣೆಗಳು ಸ್ಮಾರಕಗಳ ಬಳಿಯಲ್ಲೇ ನಡೆಯುತ್ತಿದ್ದವು. ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾದ ಬಳಿಕ ಅವರ ತಪಾಸಣೆ ಹಂಪಿಯ ಪ್ರವೇಶ ಸ್ಥಳಗಳಿಗೆ ಸ್ಥಳಾಂತರಗೊಂಡಿತ್ತು.
ಈ ಬಗ್ಗೆ ಆರ್‌ಟಿಒ ಅವರಿಂದ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.