ಹರಪನಹಳ್ಳಿ ತಾಲ್ಲೂಕು ಮಾದಾಪುರ ಗ್ರಾಮದ ವಿದ್ಯಾರ್ಥಿಗಳು ಗದ್ದೆಯಾಗಿರುವ ರಸ್ತೆಯಲ್ಲಿ ಸಂಚರಿಸುತ್ತಿರುವುದು.
ಹರಪನಹಳ್ಳಿ: ಸರ್ಕಾರಿ ಶಾಲೆಗೆ ತೆರಳಲು ಜಮೀನು ದಾರಿಯಲ್ಲಿ ನಿತ್ಯ 4 ಕಿ.ಮೀ. ಕ್ರಮಿಸಬೇಕು, ಗದ್ದೆಯಾದ ರಸ್ತೆ, ತುಂಬಿ ಹರಿಯುವ ಹಳ್ಳ ದಾಟುವ ಸಾಹಸ..
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಮಾದಾಪುರ ಗ್ರಾಮದ 30 ವಿದ್ಯಾರ್ಥಿಗಳು ನಿತ್ಯ ಅನುಭವಿಸುತ್ತಿರುವ ಜೀವಂತ ಸಮಸ್ಯೆ ಇದು.
ತಾಲ್ಲೂಕಿನ ಗೋವೆರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ಈ ಭಾಗದ ಹಳ್ಳಿಗಳ ಜನರ ಮೆಚ್ಚುಗೆಗೂ ಪಾತ್ರವಾಗಿದೆ.
8 ರಿಂದ 10ನೇ ತರಗತಿಗಳ ಈ ಶಾಲೆಯಲ್ಲಿ ನಡೆಯುತ್ತವೆ. ಮಾದಾಪುರದ 18 ವಿದ್ಯಾರ್ಥಿನಿಯರು, 12 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸುಸಜ್ಜಿತ ರಸೆಗಳಲ್ಲದ ಪರಿಣಾಮ ನಿತ್ಯ 2 ಕಿ.ಮೀ. ಕ್ರಮಿಸುವುದು ಅನಿವಾರ್ಯವಾಗಿದೆ. ಪಕ್ಕದ ನಾರಾಯಣಪುರ ಕ್ರಾಸ್ ಮೂಲಕ ಶಾಲೆ ತಲುಪಲು ಅಂದಾಜು 1.70 ಕಿ.ಮೀ. ಆಗುತ್ತದೆ. ಆದರೆ ಸುಸಜ್ಜಿತ ರಸ್ತೆಯಿಲ್ಲ, ಆ ಮಾರ್ಗ ಆಟೊ, ಬಸ್ ಸಂಚಾರಕ್ಕೆ ಯೋಗ್ಯವಾಗಿಲ್ಲ.
ಒಂದುವರೆ ಕಿ.ಮೀ. ಮೈಲಾರ ದೇವಸ್ಥಾನದ ಹತ್ತಿರ ಕಾಲ್ನಡಿಗೆ ಕ್ರಮಿಸಿದರೆ, ಅಲ್ಲಿಂದ ವಾಹನಗಳಲ್ಲಿ ಶಾಲೆ ತಲುಪಲು 3.50 ಕಿ.ಮೀ. ಆಗುತ್ತದೆ. ಇದರಿಂದ ಸಮಯಕ್ಕೆ ಸರಿಯಾಗಿ ಆಟೊ, ಸಾರಿಗೆ ಬಸ್ ಸಿಗದೇ ತರಗತಿಗೆ ಹೋಗಲು ಸಾಧ್ಯವಾಗುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳು ರೈತರ ಜಮೀನುಗಳಿಗೆ ಓಡಾಡಲು ಮಾಡಿರುವ ಮಣ್ಣಿನ ದಾರಿಯಲ್ಲೇ ನಿತ್ಯ 2 ಕಿ.ಮೀ. ಕಾಲ್ನಡಿಗೆ ತೆರಳುತ್ತಾರೆ, ಸಂಜೆ ಪುನಃ ಅದೇ ದಾರಿಯಲ್ಲಿಯೇ ಕಾಲ್ನಡಿಗೆ ಬರುವುದು ಅನಿವಾರ್ಯವಾಗಿದೆ. ವಾರವಿಡೀ ಮಳೆ ನಿರಂತರ ಸುರಿದ ಪರಿಣಾಮ ರಸ್ತೆ ಕೆಸರು ಗದ್ದೆಯಾಗಿದೆ, ಹಳ್ಳಗಳು ತುಂಬಿ ಹರಿಯುತ್ತಿವೆ. ಗ್ರಾಮಸ್ಥರು ಹಳ್ಳ ದಾಟುವ ದೃಶ್ಯ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಹರಿಯುವ ಹಳ್ಳ ದಾಟಿ ಬರುವಾಗ ವಿದ್ಯಾರ್ಥಿಗಳ ಬಟ್ಟೆ, ಶಾಲಾ ಬ್ಯಾಗ್ ಗಳು ಒದ್ದೆಯಾಗುತ್ತವೆ. ಸಂಜೆಯಾಗುತ್ತಿದ್ದಂತೆ ಮಕ್ಕಳ ದಾರಿಕಾಯುವುದು ನಮಗೆ ಕಾಯಕವಾಗಿದೆ ಎನ್ನುತ್ತಾರೆ ಮಾದಾಪುರ ಗ್ರಾಮಸ್ಥರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.