ಹರಪನಹಳ್ಳಿ: ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಸಂಭ್ರಮ ಆಚರಿಸಲಾಯಿತು.
ಹತ್ತು ವರ್ಷಗಳಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ಬೇಡಿಕೆಯಿತ್ತು. 2015, 2020, 2023ರಲ್ಲಿ ನಡೆದ ಪುರಸಭೆ ಸಾಮಾನ್ಯ ಸಭೆಗಳಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು.
ಪುರಸಭೆ ಆಡಳಿತ ಮಂಡಳಿ, ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ಸರ್ಕಾರದ ಗಮನ ಸೆಳೆದು, ನಗರಸಭೆಯಾಗಿ ಮೇಲ್ದರ್ಜೆಗೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಮಾತನಾಡಿ, ‘2001ರ ಜನಗಣತಿ ಪ್ರಕಾರ ಪಟ್ಟಣದಲ್ಲಿ 45 ಸಾವಿರ ಜನಸಂಖ್ಯೆಯಿತ್ತು. ಈಗ 54 ಸಾವಿರ ದಾಟಿದೆ. 25.53 ಚದರ ಕಿ.ಮೀ. ಪ್ರದೇಶ ಹೊಂದಿದ್ದು, ಜನಸಾಂದ್ರತೆ ಪ್ರತಿ ಚದರ ಕಿ.ಮೀ. ಗೆ 2,146 ಇದೆ. ರಾಜಸ್ವ ಸ್ವೀಕೃತಿ, ವರಮಾನ, ಜನಸಂಖ್ಯೆ ಸೇರಿ ಹಲವು ಅಂಶ ಪರಿಗಣಿಸಿ ಸರ್ಕಾರ ಮೇಲ್ದರ್ಜೆಗೇರಿಸಲು ನಿರ್ಧರಿಸಿದೆ’ ಎಂದರು.
ಸಂಭ್ರಮಾಚರಣೆಯಲ್ಲಿ ಪುರಸಭೆ ಅಧ್ಯಕ್ಷೆ ಫಾತೀಮಾಬಿ, ಉಪಾಧ್ಯಕ್ಷ ಎಚ್.ಕೊಟ್ರೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವೆಂಕಟೇಶ್, ಸದಸ್ಯರಾದ ಎಂ.ವಿ. ಅಂಜಿನಪ್ಪ, ಇಜಂತಕರ ಮಂಜುನಾಥ, ಎಚ್.ಎಂ. ಅಶೋಕ ಹರಾಳು, ರೊಕ್ಕಪ್ಪ, ಜಾಕೀರ ಹುಸೇನ್, ಸುಮಾ, ಜಾವಿದ್ ಮುಖಂಡರಾದ ವಸಂತಪ್ಪ, ಗುಡಿ ನಾಗರಾಜ್ , ಮೈದೂರು ಒ. ರಾಮಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.