ಹರಪನಹಳ್ಳಿ: ಭರತ ಹುಣ್ಣಿಮೆ- ಉಚ್ಚಂಗಿದುರ್ಗಕ್ಕೆ ಹರಿದುಬಂದ ಭಕ್ತಸಾಗರ
ಹರಪನಹಳ್ಳಿ (ವಿಜಯನಗರ ಜಿಲ್ಲೆ): ಗ್ವಾಲಿಯರ್ ಕೋಟೆ ಖ್ಯಾತಿಯ ಉಚ್ಚಂಗಿದುರ್ಗಕ್ಕೆ ಭರತ ಹುಣ್ಣಿಮೆ ನಿಮಿತ್ತ ರಾಜ್ಯದ ವಿವಿಧ ಜಿಲ್ಲೆ, ಹೊರ ರಾಜ್ಯಗಳಿಂದ ಬುಧವಾರ ಭಕ್ತಸಾಗರವೇ ಹರಿದುಬಂದಿತ್ತು.
ದುಷ್ಟ ಸಂಹಾರಕ್ಕೆ ತೆರಳಿದ್ದ ಉಚ್ಚಂಗೆಮ್ಮ ದೇವಿಯು ವಿಜಯದೊಂದಿಗೆ ಮರಳುತ್ತಾಳೆ ಎನ್ನುವ ನಂಬಿಕೆಯಿಂದ ಹುಣ್ಣಿಮೆ ಮುನ್ನಾ ದಿನ ಕೋಟೆಗೆ ಸಾವಿರಾರು ಪುನರ್ವಸತಿ ಕಲ್ಪಿತ ದೇವದಾಸಿಯರು, ಜೋಗಪ್ಪ ಅವರು ಬೆಟ್ಟದ ಮೇಲೆ ನಿಗದಿತ ಸ್ಥಳದಲ್ಲಿ ಸ್ನಾನ ಮಾಡಿ, ತಾವು ಬಳಸುತ್ತಿದ್ದ ಹಳೆಯ ಪಡ್ಲಗಿ, ಹಸಿರು ಬಳೆ, ಬಿಳಿ, ಕೆಂಪು ಮುತ್ತುಗಳಿರುವ ಸರ, ಸೀರೆಗಳನ್ನು ಕೋಟೆಯ ಆವರಣದಲ್ಲಿ ಬಿಟ್ಟು ಬಟ್ಟೆ, ಸಾಮಗ್ರಿ ಧರಿಸುವ ಮೂಲಕ ಹೊಸ ಪಡ್ಲಗಿ ತುಂಬಿಸಿ ಮುತ್ತೈದೆತನ ಪಡೆಯುವ ಸಂಪ್ರದಾಯ ಆಚರಿಸುತ್ತಿದ್ದ ದೃಶ್ಯಗಳು ಗಮನ ಸೆಳೆದವು.
ಹರಕೆ ಹೊತ್ತಿದ್ದ ಸಾವಿರಾರು ಭಕ್ತರು ಕೆಂಡದಂತೆ ಕಾದಿದ್ದ ಬಂಡೆಗಳನ್ನು ಲೆಕ್ಕಿಸದೇ ಬರಿಗಾಲಿನಲ್ಲಿ ದೇವಿ ಸನ್ನಿಧಿಗೆ ತೆರಳಿ ಹೂವು, ಹಣ್ಣು, ಕಾಯಿ ಸಮರ್ಪಿಸಿದರು. ಕೆಲವರು ಬಾಳೆ ಹಣ್ಣುಗಳನ್ನು ಮುಖ್ಯದ್ವಾರ, ದೇವಸ್ಥಾನ ಹಿಂಭಾಗದ ಗೋಡೆಗೆ ತಿಕ್ಕಿ ಭಕ್ತಿ ಸಲ್ಲಿಸುತ್ತಿದ್ದರು.
ಅರಿಶಿನ ಹೊಂಡ, ಆನೆ ಹೊಂಡಗಳಿಗೆ ಇಳಿಯದಂತೆ ತಂತಿ ಬೇಲಿ ಹಾಕಿದ್ದ ಕಾರಣ ಕೃತಕ ಸ್ನಾನಗೃಹಗಳಲ್ಲಿ ಸ್ನಾನ ಮಾಡುತ್ತಿದ್ದ ಭಕ್ತರು ಸ್ಥಳದಲ್ಲಿಯೇ ಬಟ್ಟೆಗಳನ್ನು ಬೀಸಾಡಿದ್ದರು. ಕೆಲವೆಡೆ ಪಡ್ಲಗಿಗಳ ರಾಶಿಯೇ ಕಂಡುಬಂತು. ದೇವದಾಸಿ ಬಿಡುವ ಆಚರಣೆ ಮಾಡದಂತೆ ಅಲ್ಲಲ್ಲಿ ಧ್ವನಿವರ್ಧಕ, ಸಿ.ಸಿ.ಟಿ.ವಿ. ಕ್ಯಾಮೆರಾಗಳ ಕಣ್ಗಾವಲು, ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಜಡಿ ಕತ್ತರಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆ, ಕಂದಾಯ ಇಲಾಖೆ, ಹಿಂದೂ ಧಾರ್ಮಿಕ ದತ್ತಿ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರ ತಂಡದವರು ಅಲ್ಲಲ್ಲಿ ಜಾಗೃತಿ ಮೂಡಿಸುತ್ತಿದ್ದರು.
‘ನಮ್ಮ ಹಿರಿಯರು ಭರತ ಹುಣ್ಣಿಮೆ ದಿನ ಉಚ್ಚಂಗೆಮ್ಮ ದೇವಿ ದರ್ಶನ ಪಡೆದು, ಸಾಮಗ್ರಿ ಅರ್ಪಿಸುತ್ತಿದ್ದರು. ಹೀಗೆ ಮಾಡುವುದರಿಂದ ಮುತ್ತೈದೆತನ ಸಿಗುತ್ತದೆ’ ಎಂದು ಪುನರ್ವಸತಿ ಕಲ್ಪಿತ ದೇವದಾಸಿ ಗಂಗಮ್ಮ ಅನಿಸಿಕೆ ವ್ಯಕ್ತಪಡಿಸಿದರು.
‘ಚಿಕ್ಕವನಿದ್ದಾಗಿನಿಂದ ನನಗೆ ರೋಗಗಳ ಕಾಟ ಹೆಚ್ಚಿತ್ತು. ಉಚ್ಚಂಗೆಮ್ಮ ದೇವಿ ಬಳಿ ಬಂದಾಗಿನಿಂದ ಯಾವುದೇ ತೊಂದರೆ ಇಲ್ಲ, ಹಾಗಾಗಿ ಪ್ರತಿ ವರ್ಷ ಬಂದು ಪಡ್ಲಗಿ ಸೇವೆ ಸಲ್ಲಿಸಿ, ಮುತ್ತೈದೆ ತನ ಪಡೆಯುತ್ತೇವೆ’ ಎಂದು ಹರಪನಹಳ್ಳಿಯ ಜೋಗಪ್ಪ ಮೋಹನ್ ಹೇಳಿದರು.
ತಮಿಳುನಾಡು, ಆಂಧ್ರ ಪ್ರದೇಶದಿಂದಲೂ ಭಕ್ತರು ಬಂದಿದ್ದರು. ಭಕ್ತರಿಗೆ ತೊಂದರೆ ಆಗದಂತೆ ಗ್ರಾಮದ ಹೊರವಲಯದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.
ಹಿಂದೂ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿ ಮಲ್ಲಪ್ಪ, ಡಿವೈಎಸ್ಪಿ ವೆಂಕಟೇಶ್, ಸಿಪಿಐ ನಾಗರಾಜ್ ಎಂ.ಕಮ್ಮಾರ, ಸಿಡಿಪಿಒ ಅಶೋಕ ದೇವಸ್ಥಾನ ಸಮಿತಿ ಪದಾಧಿಕಾರಿಗಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.