
ಹೊಸಪೇಟೆ (ವಿಜಯನಗರ): ನಗರದಲ್ಲಿ ಹಿಂದೂ ಸಮಾಜದ ಏಕತೆ ಮತ್ತು ಸಂಘಟಣೆಗಾಗಿ ಉಪನಗರಗಳ ನಾಲ್ಕೈದು ವಾರ್ಡ್‌ಗಳನ್ನು ಸೇರಿಸಿಕೊಂಡು ಹಿಂದೂ ಸಮ್ಮೇಳನ ನಡೆಯುತ್ತಿದ್ದು, ಭಾನುವಾರ ಬಸವೇಶ್ವರ ಬಡಾವಣೆ ಹಾಗೂ ಕೊಟ್ಟೂರು ಸ್ವಾಮಿ ಮಠದ ಆವರಣದಲ್ಲಿ ನಡೆಯಿತು. ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರು.
ಕೊಟ್ಟೂರು ಸ್ವಾಮಿ ಮಠದ ಆವರಣದಲ್ಲಿ ಗೋವಿಗೆ ಆಹಾರ ನೀಡಿ, ಪೂಜೆ ಸಲ್ಲಿಸುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು.
ಮುಖ್ಯ ವಕ್ತಾರ ಸೋಮಶೇಖರ್ ಮಾತನಾಡಿ, ಹಿಂದೂ ಧರ್ಮವಲ್ಲ, ಅದು ನಮ್ಮ ಜೀವನ ಪದ್ಧತಿ. ಹಿಂದೂ ಎಂದೊಡನೆ ಇತ್ತೀಚಿಗ ಕೋಮು ಸಂಘಟನೆ ಎಂದು ಬಿಂಬಿಸಲಾಗುತ್ತಿದೆ, ಇದು ಆತಂಕಕಾರಿ ಬೆಳವಣಿಗೆ. ಹಿಂದೂ ರಾಷ್ಟ್ರಕ್ಕೆ, ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗುತ್ತದೆ, ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಲ್ಲಲು ಹಿಂದೂಗಳ ಸಂಘಟನೆ ಒಂದೇ ದಾರಿಯಾಗಿದೆ ಎಂದರು.
ಗರಗ ನಾಗಲಾಪುರದ ಒಪ್ಪತ್ತೇಶ್ವರ ಮಠದ ನಿರಂಜನ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ಗೋಸಲ ಭರಮಪ್ಪ ವಹಿಸಿದ್ದರು. ಹಿಂದೂ ಸಂಘಟನೆಯ ಪ್ರಮುಖರಾದ ಅಖಂಡ ಬಳ್ಳಾರಿ ಜಿಲ್ಲೆಯ ವಿಎಚ್‌ಪಿ ಸಂಚಾಲಕ ಕೇಶವ ಜೀ, ಜಗದೀಶ್ ಕಮಟಗಿ, ಕಿರಣ ಶಂಕ್ರಿ, ಕಿಚಡಿ ಕೊಟ್ರೇಶ್, ಗೌಳಿ ರುದ್ರಪ್ಪ, ಗೌಳಿ ಈಶಪ್ಪ ಇತರರು ಇದ್ದರು.
ಹಿಂದೂ ಹೆಸರಿನಿಂದಲೇ ಗುರುತಿಸಿಕೊಳ್ಳಿ: ಬಸವೇಶ್ವರ ಬಡಾವಣೆಯಲ್ಲಿ ನಡೆದ ಹಿಂದೂ ಸಮ್ಮೇಳನದಲ್ಲಿ ಮಾತನಾಡಿದ ಹಗರಿಬೊಮ್ಮನಹಳ್ಳಿ ರಾಷ್ಟ್ರೋತ್ಥಾನ ಕೇಂದ್ರದ ಕಾರ್ಯದರ್ಶಿ ಬಸವನಗೌಡ್ರು, ಹಿಮಾಲಯದ ತಪ್ಪಲು ಮತ್ತು ದಕ್ಷಿಣಕ್ಕೆ ಜನಿಸಿದ ಎಲ್ಲರೂ ಹಿಂದೂಗಳೇ. ಹಿಂದುತ್ವ ಎಂಬುದೇ ನಮ್ಮ ಗುರುತು. ಹೆಸರು, ಜಾತಿ, ಕುಲ, ಗೋತ್ರದ ಮೂಲಕ ಪರಿಚಯಿಸಿಕೊಳ್ಳುವ ಬದಲಿಗೆ ಹಿಂದೂ ಹೆಸರಿನಿಂದ ಗುರುತಿಸುವ ಪರಿ ಆರಂಭವಾಗಬೇಕು ಎಂದರು.
ಮತಾಂತರದ ಹಿಂದೆ ರಾಷ್ಟ್ರಾಂತರದ ಹುನ್ನಾರ ಇರುವುದನ್ನು ನಾವೆಲ್ಲ ತಿಳಿಯಬೇಕು. ಕೇರಳ, ಅಸ್ಸಾಂ, ಕಾಶ್ಮೀರದಲ್ಲಿ ನಡೆಯುತ್ತಿರುವ ದೇಶ ವಿರೋಧಿ ಬೆಳವಣಿಗೆಗಳು ಅಪಾಯಕಾರಿ. ಈಗಲಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ಪೀಳಿಗೆ ಭಾರತವನ್ನು ನೋಡಲೂ ಅಸಾಧ್ಯ. ನಾವು 21ನೇ ಶತಮಾನದಲ್ಲಿದ್ದರೂ ಇಂದಿಗೂ ನಮ್ಮವರಿಗೆ ಕೆಲವೆಡೆ ದೇವಸ್ಥಾನಗಳಿಗೆ ಪ್ರವೇಶ ಅವಕಾಶ ಇಲ್ಲ. ಅಸ್ಪೃಶ್ಯತೆಯಿಂದ ನಮ್ಮವರೇ ದೂರವಾಗುತ್ತಿದ್ದಾರೆ. ಜಾತಿ, ಮತ, ಪಂತಗಳನ್ನು ಮೀರಿ ಎಲ್ಲರನ್ನೂ ಒಪ್ಪಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಹಿಂದೂ ರಾಷ್ಟ್ರ ಆಗಲಿ: ಮಾತಂಗ ಪರ್ವತದ ಪೂರ್ಣಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಭಾರತ ಹಿಂದೂ ರಾಷ್ಟ್ರ ಆಗಬೇಕು ಎಂಬುದು ಎಲ್ಲ ಸಂತರ ಕನಸು. ಆ ನಿಟ್ಟಿನಲ್ಲಿ ನಾವು ಬದುಕು ರೂಪಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣುಸ್ವಾಮಿ, ಜಾತಿ, ಸಂಪ್ರದಾಯಗಳು ಮನೆಗೆ ಸೀಮಿತವಾಗಬೇಕು. ದೇಶ ವಿಚಾರದಲ್ಲಿ ವಸುದೈವ ಕುಟುಂಬದ ತತ್ವವನ್ನು ಅಳವಡಿಸಿಕೊಳ್ಳಬೇಕು ಎಂದರು.
ಪ್ರತಿಯೊಂದು ಕಡೆ ನೂರಾರು ಮಂದಿ ಜಮಾವಣೆ ಶೋಭಾಯಾತ್ರೆಗಳಿಗೆ ಇಲ್ಲ ಅನುಮತಿ ವಿವಿಧ ಮಠಾಧೀಶರಿಂದ ಆಶೀರ್ವಚನ
ಫೆ.1ರಂದು ಸಮಾರೋಪ ಫೆ.1ರಂದು ವಾಲ್ಮೀಕಿ ಉಪನಗರದಲ್ಲಿ ಸಮಾರೋಪ ನಡೆಯಲಿದ್ದು ಅಯೋಧ್ಯೆಯಿಂದ ಗೋಪಾಲ ಜೀ ಅವರು ಮುಖ್ಯ ಭಾಷಣಕಾರರಾಗಿ ಆಗಮಿಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. ಶನಿವಾರ ಎಂ.ಪಿ.ಪ್ರಕಾಶ ನಗರದ ಮಹಾಲಕ್ಷ್ಮಿ ದೇವಸ್ಥಾನ ಸಮೀಪದ ಪಾರ್ಕ್‌ನಲ್ಲಿ ಸಮ್ಮೇಳನ ನಡೆದಿತ್ತು. ಕಾರ್ಯಕ್ರಮದಲ್ಲಿ ಹಂಪಿ ಸಿದ್ಧಾರೂಢ ಮಠದ ವಿದ್ಯಾನಂದ ಭಾರತಿ ಸ್ವಾಮೀಜಿ ಹೊಸಪೇಟೆಯ ಮರಳುಸಿದ್ಧೇಶ್ವರ ಪುಣ್ಯಾಶ್ರಮದ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದ್ದರು ಹಾಗೂ ಪ್ರಾಂತ ಬೌದ್ಧಿಕ ಪ್ರಮುಖ ದುರ್ಗಣ್ಣ ದಿಕ್ಸೂಚಿ ಭಾಷಣ ಮಾಡಿದ್ದರು. ಗೋಪಾಲ ಜೋಶಿ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.