
ಹೂವಿನಹಡಗಲಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಹೊಳಲು ಗ್ರಾಮದ ವರ್ತಕ ಮಂಜುನಾಥ ಶೇಜವಾಡಕರ್ (58) ಅಪಹರಣ, ಕೊಲೆ ಪ್ರಕರಣದ ಮೂರನೇ ಆರೋಪಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಪ್ರಕರಣದ ಮುಖ್ಯ ಆರೋಪಿಗಳಾದ ಮಲ್ಲಿಕಾರ್ಜುನ ಉಜ್ಜಮ್ಮನವರ, ಯೋಗೇಶ ಅಂಗಡಿ ತಪ್ಪಿಸಿಕೊಳ್ಳಲು ನೆರವು ನೀಡಿದ ಆರೋಪದಡಿ 2ನೇ ಆರೋಪಿಯ ಮಾವ, ರಾಣೆಬೆನ್ನೂರು ತಾಲ್ಲೂಕು ಕೋಟಿಹಾಳ ಗ್ರಾಮದ ರುದ್ರಗೌಡ (29) ಎಂಬಾತನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ತಿಳಿಸಿದ್ದಾರೆ.
ಅಪಹರಣ ಕೃತ್ಯ ಬಳಿಕ ಆರೋಪಿಗಳು ರುದ್ರಗೌಡನಿಗೆ ಕರೆ ಮಾಡಿ ಎಲ್ಲ ವಿಚಾರಗಳನ್ನು ಹೇಳಿಕೊಂಡಾಗ, ಆತ ತಪ್ಪಿಸಿಕೊಳ್ಳುವಂತೆ ಸಲಹೆ ನೀಡಿದ್ದ. ಕೃತ್ಯದ ಎಲ್ಲ ಮಾಹಿತಿ ಗೊತ್ತಿದ್ದರೂ ವಿಚಾರಣೆ ವೇಳೆ ಬಾಯಿ ಬಿಟ್ಟಿರಲಿಲ್ಲ. ಈ ಕಾರಣಕ್ಕಾಗಿ ಪ್ರಕರಣದಲ್ಲಿ 3ನೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಆನ್‌ಲೈನ್ ಗೇಮ್, ಜೂಜು, ಮೋಜಿಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ ಇಬ್ಬರು ಆರೋಪಿಗಳು, ಇದಕ್ಕಾಗಿಯೇ ಅಪಹರಣ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಕೇಳಿದಷ್ಟು ಹಣ ಕೊಡಲು ಒಪ್ಪದಿದ್ದಾಗ ಭ್ರಮನಿರಸನಗೊಂಡ ಅಪಹರಣಕಾರರು ಮಂಜುನಾಥನಿಗೆ ಹಲ್ಲೆ ಮಾಡಿ, ಕಣ್ಣು, ಬಾಯಿಗೆ ಪ್ಲಾಸ್ಟರ್ ಅಂಟಿಸಿ ಕಾರಿನ ಡಿಕ್ಕಿಯಲ್ಲಿ ಹಾಕಿ ಸುತ್ತಾಡಿಸಿದ್ದರು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದುದು ಅ.10ರಂದು ರಾತ್ರಿ. ಆದರೆ ಅಂದು ಸಂಜೆಯ ವೇಳೆಗೇ ಮಂಜುನಾಥ್ ಉಸಿರುಗಟ್ಟಿ ಸತ್ತಿದ್ದಾರೆ, ನಂತರ ಶವವನ್ನು ಹರವಿ ಸೇತುವೆ ಮೇಲಿಂದ ನದಿಗೆ ಎಸೆದಿದ್ದಾರೆ. ಹೀಗಿದ್ದರೂ ಸಾವಿಗೆ ನಿಖರ ಕಾರಣ ಏನು ಎಂಬುದು ಮರಣೋತ್ತರ ಪರೀಕ್ಷೆ ವರದಿಯಿಂದ ತಿಳಿಯಬೇಕಷ್ಟೇ, ಅದಕ್ಕಾಗಿ ಕಾಯಲಾಗುತ್ತಿದೆ’ ಎಂದು ಎಸ್ಪಿ ಹೊಸಪೇಟೆಯಲ್ಲಿ ಮಾಧ್ಯಮದವರಿಗೆ ತಿಳಿಸಿದರು.
‘ಅಪಹರಣ ಪ್ರಕರಣದಲ್ಲಿ ಪೊಲೀಸರು ವೈಫಲ್ಯ ಅನುಭವಿಸಿದರು ಎಂದು ಹೇಳಲಾಗದು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವರ್ತಕನ ಜೀವ ಉಳಿಸಲು ನಾವು ನಮ್ಮಿಂದಾದ ಎಲ್ಲಾ ಪ್ರಯತ್ನಗಳನ್ನೂ ಮಾಡಿದ್ದೆವು. ಆರೋಪಿಗಳ ಇರುವಿಕೆ ಪತ್ತೆಹಚ್ಚಲು ನಾವು ಸಾಕಷ್ಟು ಪ್ರಯತ್ನ ನಡೆಸಿದ್ದೇವೆ’ ಎಂದು ಎಸ್‌ಪಿ ಹೇಳಿದರು.
‘ಆರೋಪಿಗಳು ಯಾವ ರೀತಿಯ ಯೋಜನೆ ರೂಪಿಸಿದ್ದರು ಎಂಬುದನ್ನು ವಿವರಿಸಲು ಸಾಧ್ಯವಿಲ್ಲ, ಏಕೆಂದರೆ ಇಂತಹ ಮಾಹಿತಿ ಇನ್ನಷ್ಟು ಅಪರಾಧ ಕೃತ್ಯಗಳಿಗೆ ದಾರಿಮಾಡಿಕೊಡುವ ಅಪಾಯ ಇದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.