ADVERTISEMENT

ತುಂಗಭದ್ರಾ ಜಲಾಶಯ ಭರ್ತಿಯಾಗಲು ಇನ್ನೂ ಬೇಕು 5 ಅಡಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2023, 15:12 IST
Last Updated 12 ಆಗಸ್ಟ್ 2023, 15:12 IST
   

ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಕಡಿಮೆಯಾಗಿದ್ದು, ಆಣೆಕಟ್ಟೆಯಲ್ಲಿ ನೀರಿನ ಮಟ್ಟ ನಿಧಾನವಾಗಿ ಹೆಚ್ಚುತ್ತಿದೆ. ಆಣೆಕಟ್ಟೆ ಭರ್ತಿಯಾಗಲು ಇನ್ನೂ 5 ಅಡಿ ನೀರು ಸಂಗ್ರಹವಾಗಬೇಕಾಗಿದೆ.

ಅಣೆಕಟ್ಟೆಯ ಗರಿಷ್ಠ ಎತ್ತರ 1,633 ಅಡಿ ಇದ್ದು, ಸದ್ಯ ನೀರಿನ ಮಟ್ಟ 1,628.70ರಷ್ಟಿದೆ. ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 105.78 ಟಿಎಂಸಿ ಅಡಿ ಆಗಿದ್ದು, ಸದ್ಯ 89.26 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.

ಮಲೆನಾಡು ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಜುಲೈ ಅಂತ್ಯದ ವೇಳೆಗೆ ಒಳಹರಿವಿನ ಪ್ರಮಾಣ ಇಳಿಮುಖವಾಗತೊಡಗಿತ್ತು. ಜುಲೈ 27ರಂದು 1.21 ಲಕ್ಷ ಕ್ಯುಸೆಕ್‌ ಒಳಹರಿವು ದಾಖಲಾಗಿರುವುದು ಈ ವರ್ಷದ ಗರಿಷ್ಠ ಪ್ರಮಾಣವಾಗಿದೆ.

ADVERTISEMENT

ಕಳೆದ ವರ್ಷ ಜುಲೈ 24ರಂದು ಜಲಾಶಯ ಭರ್ತಿಯಾಗಿತ್ತು. ಆದರೆ ಈ ವರ್ಷ ಆಗಸ್ಟ್ 15 ಸಮೀಪಿಸಿದರೂ ಜಲಾಶಯ ಭರ್ತಿಯಾಗಿಲ್ಲ.

ಜುಲೈ ಅಂತ್ಯದ ವೇಳೆಗೆ ಬಿರುಸಿನ ಮಳೆ ಸುರಿಯುವುದನ್ನು ಕಂಡಿದ್ದ ರೈತರು ಹಾಗೂ ನೀರಾವರಿ ತಜ್ಞರು, ಆಗಸ್ಟ್‌ ಮೊದಲ ವಾರದಲ್ಲೇ ಜಲಾಶಯ ಭರ್ತಿಯಾಗುವುದು ನಿಶ್ಚಿತ ಎಂದು ಅಂದಾಜಿಸಿದ್ದರು. ಆದರೆ ವಿಳಂಬವಾಗಿ ಅರಂಭವಾದ ಮುಂಗಾರು ಮತ್ತೆ ಕೈಕೊಟ್ಟಿದ್ದರಿಂದ ನಿರೀಕ್ಷಿಸಿದಂತೆ ಜಲಾಶಯ ಭರ್ತಿಯಾಗಿಲ್ಲ.

ಈಗಾಗಲೇ ಕಾಲುವೆಗಳಿಗೆ 11 ಸಾವಿರ ಕ್ಯುಸೆಕ್‌ಗಿಂತ ಅಧಿಕ ನೀರು ಹರಿಸಲಾಗುತ್ತಿದೆ. ಸದ್ಯ ಜಲಾಶಯದ ಒಳಹರಿವಿನ ಪ್ರಮಾಣ 11,654 ಕ್ಯುಸೆಕ್‌ನಷ್ಟು ಮಾತ್ರ ಇದೆ. ಇದೇ 16ರಂದು ಮುನಿರಾಬಾದ್‌ನಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಯಲಿದ್ದು, ಮುಂಗಾರು ಹಂಗಾಮಿನ ಬೆಳೆಗಳಿಗೆ ಎಷ್ಟು ನೀರು ಹರಿಸಬೇಕು ಎಂದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಧರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.