ಹೊಸಪೇಟೆ (ವಿಜಯನಗರ): ನಗರದ ಹೊರವಲಯದ ಕಾರಿಗನೂರು–ಮಲಪನಗುಡಿ ಮಧ್ಯದಲ್ಲಿರುವ ಗೊಂದಳಿಪುರ ತಿಮ್ಮಪ್ಪನಗುಡ್ಡದ ಹತ್ತಿರ ಅರಣ್ಯ ಇಲಾಖೆ ಸಿಬ್ಬಂದಿ ಇರಿಸಿದ ಬೋನಿಗೆ ಶುಕ್ರವಾರ ಬೆಳಿಗ್ಗೆ ಸುಮಾರು ಏಳು ವರ್ಷದ ಗಂಡು ಕರಡಿ ಬಿದ್ದಿದೆ.
‘ಈ ಕರಡಿ ಬಹಳ ದಿನಗಳಿಂದ ಇಂಗಳಗಿ, ಕಾರಿಗನೂರು, ಸಂಕ್ಲಾಪುರ, ಜಂಬುನಾಥಹಳ್ಳಿ, ಮಲಪನಗುಡಿ, ವಡ್ಡರಹಳ್ಳಿ ಸುತ್ತಮುತ್ತ ತಿರುಗಾಡುತ್ತಿತ್ತು. ಎರಡು ದಿನದ ಹಿಂದೆ ಜಂಬುನಾಥ ದೇವಸ್ಥಾನದ ಬಳಿ ಕ್ಯಾಮೆರಾದಲ್ಲಿ ಸೆರೆಯಾದ ಕರಡಿಯೂ ಇದೇ’ ಎಂದು ಆರ್‌ಎಫ್‌ಒ ಕೌಶಿಕ್ ದಳವಾಯಿ ತಿಳಿಸಿದರು.
ಬೋನಿಗೆ ಬಿದ್ದುದು ಹೇಗೆ?: ‘ಕರಡಿಯ ಚಲನವಲನ ನೋಡಿಕೊಂಡು ತಿಮ್ಮಪ್ಪ ಗುಡ್ಡದ ಬಳಿ ಸುಮಾರು 15 ದಿನದ ಹಿಂದೆ ಬೋನು ಇಟ್ಟಿದ್ದೆವು. ಅದರೊಳಗೆ ಬೆಲ್ಲವನ್ನು ಇಡಲಾಗಿತ್ತು. ಕೆಲವು ದಿನ ಅದರೊಳಗೆ ಬಂದು ಬೆಲ್ಲ ತಿಂದು ಕರಡಿ ಹೋಗಿತ್ತು. ಅದರೊಳಗಿನ ಪ್ಲೇಟ್ ಒಂದನ್ನು ಮೆಟ್ಟಿದರೆ ಬೋನಿನ ಬಾಗಿಲು ಬಂದ್ ಆಗುತ್ತದೆ. ಗುರುವಾರ ಮತ್ತೆ ಪ್ಲೇಟ್ ಮೇಲ್ಣಾಗಕ್ಕೆ ಕರಡಿ ಕೈ ಇಡುವ ರೀತಿಯಲ್ಲೇ ಆಹಾರವನ್ನು ಇಡಲಾಗಿತ್ತು. ಆ ಪ್ರಯೋಗ ಯಶಸ್ವಿಯಾಗಿದ್ದು, ಶುಕ್ರವಾರ ಮುಂಜಾನೆ ಬೆಲ್ಲ ತಿನ್ನಲು ಬಂದ ಕರಡಿ ಪ್ಲೇಟ್ ಮುಟ್ಟಿದಾಗ ಬಾಗಿಲು ಬಂದ್ ಆಗಿದೆ’ ಎಂದು ಡಿವೈಆರ್‌ಎಫ್ಒ ರಾಮಲಿಂಗಪ್ಪ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದರು.
ಡಿಸಿಎಫ್ ಎಚ್.ಅನುಪಮಾ, ಎಸಿಎಫ್ ಕಿರುಬನಂದನ್ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿತ್ತು. ಆಗಸ್ಟ್ 22ರಂದು ನಗರದ ಕಲ್ಲಳ್ಳಿ ರಸ್ತೆಯಲ್ಲಿ ಮರವೇರಿ ಕುಳಿತಿದ್ದ ಕರಡಿಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಬೋನಿಗೆ ಹಾಕಲಾಗಿತ್ತು. ಆ ಕರಡಿಯನ್ನು ಗದಗ ಮೃಗಾಲಯಕ್ಕೆ ಕಳುಹಿಸಲಾಗಿದೆ.
ಇದೀಗ ಮತ್ತೊಂದು ಕರಡಿಯನ್ನು ಸೆರೆ ಹಿಡಿದ ಕಾರಣ ಜನರು ಸ್ವಲ್ಪ ನೆಮ್ಮದಿಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.