
ಬಾಡಿಗೆ ಬೈಕ್ ವಿರುದ್ಧ ಸೋಮವಾರ ಹಂಪಿಯಿಂದ ಹೊಸಪೇಟೆಯತ್ತ ಜಾಥಾ ನಡೆಸಿದ ಆಟೋಗಳು
–ಪ್ರಜಾವಾಣಿ ಚಿತ್ರ
ಹೊಸಪೇಟೆ (ವಿಜಯನಗರ): ಹಂಪಿಯಲ್ಲಿ ಬಾಡಿಗೆ ಬೈಕ್ ಸೇವೆ ನೀಡುವುದಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಹಂಪಿ, ಕಮಲಾಪುರ, ಕಡ್ಡಿರಾಂಪುರ ಹಾಗೂ ಹೊಸಪೇಟೆಯ ನೂರಾರು ಆಟೊಚಾಲಕರು ಸೋಮವಾರ ಬೃಹತ್ ಜಾಥಾ ನಡೆಸಿ ಇಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಬಳಿ ಪ್ರತಿಭಟನೆ ನಡೆಸಿದರು.
ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ರಥಬೀದಿಯಿಂದ ಆರಂಭವಾದ ರಿಕ್ಷಾಗಳ ಬೃಹತ್ ಜಾಥಾ ಕಮಲಾಪುರ, ಕಡ್ಡಿರಾಂಪುರ, ಗಾಳೆಮ್ಮನಗುಡಿ, ಮಲಪನಗುಡಿ, ಕೊಂಡನಾಯಕನಹಳ್ಳಿ, ಅನಂತಶಯನಗುಡಿ, ನಗರದ ಕನಕದಾಸ ವೃತ್ತ, ಪುನೀತ್ ರಾಜ್‌ಕುಮಾರ್ ವೃತ್ತ, ವಾಲ್ಮೀಕಿ ವೃತ್ತ ಮೂಲಕ ಆರ್‌ಟಿಒ ಕಚೇರಿಗೆ ಬಂದು ತಲುಪಿತು. ಬಳಿಕ ಅಲ್ಲಿ ಪ್ರತಿಭಟನೆ ನಡೆಸಲಾಯಿತು.
ಫೆಡರೇಷನ್ ಆಫ್ ಕರ್ನಾಟಕ ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ಸ್ (ಎಫ್‌ಕೆಎಆರ್‌ಡಿಯು–ಸಿಐಟಿಯು, ಆಐಆರ್‌ಟಿಡಬ್ಲ್ಯುಎಫ್), ವಿಜಯನಗರ ಜಿಲ್ಲಾ ಆಟೊ ಚಾಲಕರ ಸಂಘಗಳ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಗೆ ಹೊಸಪೇಟೆಯ ಹಲವು ರಿಕ್ಷಾಗಳೂ ಸಾಥ್ ನೀಡಿದ್ದವು. ಹೀಗಾಗಿ 450ರಷ್ಟು ರಿಕ್ಷಾಗಳಿಂದ ಈ ಬೃಹತ್ ಪ್ರತಿಭಟನೆ ನಡೆಯಿತು.
ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ತಾಲ್ಲೂಕು ಅಧ್ಯಕ್ಷ ಸಂತೋಷ್ ಕುಮಾರ್ ಕೆ.ಎಂ.ಮಾತನಾಡಿ, ಹಂಪಿ, ಕಮಲಾಪುರ, ಕಡ್ಡಿರಾಂಪುರ ಭಾಗದಲ್ಲಿ ಅನಧಿಕೃತವಾಗಿ ದ್ವಿಚಕ್ರ ವಾಹನಗಳನ್ನು ಬಾಡಿಗೆ ನೀಡುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಇತ್ತೀಚೆಗೆ ಬೆಂಗಳೂರು ಮೂಲದ ಸಂಸ್ಥೆ ಬೆಂಗಳೂರು ವಿಳಾಸದಿಂದ ದ್ವಿಚಕ್ರ ವಾಹನಗಳನ್ನು ಬಾಡಿಗೆಗೆ ನೀಡಲು ನೋಂದಣಿ ಮಾಡಿಕೊಂಡಿದೆ. ಕಚೇರಿಯ ಕೇಂದ್ರ ಸ್ಥಾನವನ್ನು ಬದಲಾಯಿಸಲು ಅವಕಾಶವಿಲ್ಲದಿದ್ದರೂ ಸ್ಥಳೀಯವಾಗಿ ಫ್ರಾಂಚೈಸಿ ನೀಡಿದೆ. ಇದು ಅಕ್ರಮವಾಗಿದ್ದು, ಇದರ ಬಗ್ಗೆ ಆರ್‌ಟಿಒಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಈ ಪ್ರತಿಭಟನೆ ನಡೆಸಲಾಗಿದೆ ಎಂದರು.
‘ಈ ಹಿಂದೆ ಹಂಪಿ - ಕಮಲಾಪುರ ಭಾಗದಲ್ಲಿ ದ್ವಿಚಕ್ರ ವಾಹನಗಳನ್ನು ಬಾಡಿಗೆಗೆ ನೀಡಲು ರೆಂಟ್ ಎ ಮೋಟಾರ್ ಸೈಕಲ್ ಸ್ಕೀಮ್ 1997 ರ ಅಡಿಯಲ್ಲಿ ವ್ಯಕ್ತಿಯೊಬ್ಬರಿಗೆ ದ್ವಿಚಕ್ರ ವಾಹನ ಬಾಡಿಗೆಗೆ ನೀಡಲು ಎಸ್‌ಟಿಎ ಟ್ರೇಡ್ ಲೈಸೆನ್ಸ್ ನೀಡಲಾಗಿತ್ತು. ಆದರೆ ಇಲ್ಲಿ ಹಲವು ನಿಯಮ ಉಲ್ಲಂಘನೆಯಾಗಿದೆ. ಇದೀಗ ಕೇಂದ್ರ ಸ್ಥಾನ ಬದಲಾಯಿಸಿದ್ದು, ಅಲ್ಲೂ ನಿಯಮದ ಪ್ರಕಾರ ಗ್ಯಾರೇಜ್, ವಿಶ್ರಾಂತಿ ಕೊಠಡಿಯಂತಹ ಅಗತ್ಯ ಮೂಲಸೌಕರ್ಯಗಳನ್ನು ಹೊಂದಿಲ್ಲ. ಹೀಗಾಗಿ ಈ ವ್ಯಕ್ತಿಗೆ ದ್ವಿಚಕ್ರ ವಾಹನಗಳನ್ನು ಬಾಡಿಗೆಗೆ ನೀಡಲು ನೀಡಿರುವ ಪರವಾನಗಿಯನ್ನು ತಕ್ಷಣದಿಂದಲೇ ರದ್ದುಮಾಡಬೇಕು’ ಎಂದು ಸಂತೋಷ್ ಕುಮಾರ್ ಒತ್ತಾಯಿಸಿದರು.
ಒಕ್ಕೂಟದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವೈ.ರಾಮಚಂದ್ರ ಬಾಬು, ಪದಾಧಿಕಾರಿಗಳಾದ ಎಸ್.ಅನಂತಶಯನ, ರಾಘವೇಂದ್ರ, ಪ್ರಕಾಶ್ ಬಾಬು, ವಿರೂಪಾಕ್ಷಗೌಡ, ಗೋವಿಂದ, ಬಿ.ಎಸ್.ರುದ್ರಪ್ಪ, ಅಶೋಕ್, ಎಂ.ಸುಭಾಷ್, ಎಸ್.ತಿಪ್ಪೇಸ್ವಾಮಿ, ಹಕ್ಕಬುಕ್ಕ ಆಟೊ ಚಾಲಕರ ಸಂಘದ ಅಧ್ಯಕ್ಷ ಶಿವು, ಬಿ.ಆರ್.ಅಂಬೇಡ್ಕರ್ ಆಟೊ ಚಾಲಕರ ಸಂಘದ ಅಧ್ಯಕ್ಷ ವಿರೂಪಾಕ್ಷಿ ಇತರರು ಇದ್ದರು.
ಕೊಪ್ಪಳ ಭಾಗದಿಂದಲೂ ಅಕ್ರಮ
ಕೊಪ್ಪಳ ಜಿಲ್ಲೆಯ ಆನೆಗುಂದಿಯಲ್ಲಿ ಹೋಟೆಲ್ ರೆಸಾರ್ಟ್‌ಗಳು, ಹೋಂ ಸ್ಟೇ ಗಳ ಮಾಲೀಕರು ಇನ್ನೂ ಕೆಲವರು ಅನಧಿಕೃತವಾಗಿ ಸ್ವಂತಕ್ಕೆ ಬಳಸುವ ದ್ವಿಚಕ್ರವಾಹನಗಳನ್ನು ಮತ್ತು ಬೆಂಗಳೂರು ಮೂಲದ ಕಂಪನಿಗಳ ದ್ವಿಚಕ್ರ ವಾಹನಗಳನ್ನು ವಿದೇಶಿ ಮತ್ತು ಸ್ವದೇಶಿ ಪ್ರವಾಸಿಗಳಿಗೆ ಬಾಡಿಗೆಗೆ ನೀಡುತ್ತಿರುವುದು ಕಂಡುಬಂದಿದೆ. ಈ ಕೂಡಲೇ ಕೊಪ್ಪಳ ಆರ್‌ಟಿಒ ಹಾಗೂ ಪ್ರಾಧಿಕಾರದ ಅಧಿಕಾರಿಗಳು ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರಿಗೆ ಆಯುಕ್ತರು ಹಾಗೂ ಇತರ ಹಲವರಿಗೆ ಕಳುಹಿಸಿಕೊಟ್ಟಿರುವ ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.