ADVERTISEMENT

ಹೊಸಪೇಟೆ: ದುರಸ್ತಿಯಾಗದ ಬೃಹತ್‌ ಧ್ವಜಸ್ತಂಭ

ಈ ಬಾರಿಯ ಸ್ವಾತಂತ್ರ್ಯೋತ್ಸವದಲ್ಲಿ ಸಣ್ಣ ಸ್ತಂಭದಲ್ಲೇ ಧ್ವಜಾರೋಹಣ

ಎಂ.ಜಿ.ಬಾಲಕೃಷ್ಣ
Published 12 ಆಗಸ್ಟ್ 2025, 5:54 IST
Last Updated 12 ಆಗಸ್ಟ್ 2025, 5:54 IST
ಧ್ವಜಸ್ತಂಭದಲ್ಲಿ ಬೃಹತ್‌ ರಾಷ್ಟ್ರಧ್ವಜ ಹಾರಾಡಿದಾಗ ಹೊಸಪೇಟೆಯ ಜೋಳದರಾಶಿ ಗುಡ್ಡದಿಂದ ಈ ರೀತಿ ಕಾಣಿಸಿತ್ತು –ಪ್ರಜಾವಾಣಿ ಚಿತ್ರ
ಧ್ವಜಸ್ತಂಭದಲ್ಲಿ ಬೃಹತ್‌ ರಾಷ್ಟ್ರಧ್ವಜ ಹಾರಾಡಿದಾಗ ಹೊಸಪೇಟೆಯ ಜೋಳದರಾಶಿ ಗುಡ್ಡದಿಂದ ಈ ರೀತಿ ಕಾಣಿಸಿತ್ತು –ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ನಗರದ ಪುನೀತ್ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದ ಮಧ್ಯಭಾಗದಲ್ಲಿರುವ ಬೃಹತ್‌ ಧ್ವಜಸ್ತಂಭದಲ್ಲಿ ಕಾಣಿಸಿದ ತಾಂತ್ರಿಕ ತೊಂದರೆ ಸರಿಪಡಿಸಲು ಇನ್ನೂ ಸಾಧ್ಯವಾಗಿಲ್ಲ. ಹಾಗಾಗಿ, ಈ ಬಾರಿಯ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಸಣ್ಣ ಸ್ತಂಭದಲ್ಲೇ ನಡೆಯುವುದು ಬಹುತೇಕ ನಿಶ್ಚಿತವಾಗಿದೆ.

ಬೃಃತ್‌ ಸ್ತಂಭ 405 ಅಡಿ ಎತ್ತರವಿದೆ. ಅದರ ಮೇಲೆ ವಿದ್ಯುತ್‌ ದೀಪ ಬೆಳಗದಿದ್ದರೆ  ಹೆಲಿಕಾಪ್ಟರ್ ಡಿಕ್ಕಿ ಹೊಡೆಯುವ ಸಾಧ್ಯತೆ ಇದೆ ಎಂಬ ಕುರಿತು ‘ಪ್ರಜಾವಾಣಿ’ ಆಗಸ್ಟ್ 2ರಂದು ವರದಿ ಮಾಡಿತ್ತು. ಆಗ ಧ್ವಜಸ್ತಂಭದ ನಿರ್ವಹಣೆ ಯಾರು ಮಾಡಬೇಕೆಂಬ ವಿಷಯ ಜಟಿಲಗೊಂಡಿದ್ದು ಸಹ ಬೆಳಕಿಗೆ ಬಂದಿತ್ತು. ಹೀಗಿದ್ದರೂ, ದೀಪಗಳು ಬೆಳಗಲಿಲ್ಲ. ನಗರದ ವೈದ್ಯ ಗುರುರಾಜ್‌ ಆಚಾರ್ ಅವರು ಶನಿವಾರ ವಿಡಿಯೊ ಮಾಡಿ ವೈರಲ್‌ ಮಾಡಿದ ನಂತರ ಧ್ವಜಸ್ತಂಭದ ದೀಪಗಳ ದುರಸ್ತಿಯ ಪ್ರಯತ್ನವನ್ನು ನಗರಸಭೆಯೇ ಮಾಡಿದೆ.

‘ಕೆಳಗಿನಿಂದಲೇ ದೀಪಗಳ ದುರಸ್ತಿ ಮಾಡಬಹುದೇ ಎಂಬ ಪರೀಕ್ಷೆಯನ್ನು ತಜ್ಞರಿಂದ ಶನಿವಾರ ನಡೆಸಲಾಯಿತು. ಅದು ಸಾಧ್ಯವಿಲ್ಲ. ಮೇಲೆ ಕೇಬಲ್ ತುಂಡಾಗಿದೆ. 405 ಅಡಿ ಎತ್ತರದ ಕ್ರೇನ್‌ ತರಿಸಿ, ಧ್ವಜಸ್ತಂಭದ ಮೇಲ್ಭಾಗಕ್ಕೆ ತೆರಳಿ ಪರಿಶೀಲನೆ ನಡೆಸಬೇಕಾಗುತ್ತದೆ ಎಂಬುದಾಗಿ ತಜ್ಞರು ಹೇಳಿದರು’ ಎಂದು ನಗರಸಭೆ ಆಯುಕ್ತ ಎ. ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಭಾರಿ ವೆಚ್ಚ?: ಬೃಹತ್ ಕ್ರೇನ್‌ಗೆ ₹28 ಲಕ್ಷ ಬಾಡಿಗೆ ಕೇಳುತ್ತಾರೆ ಎಂದು ಹೇಳಲಾಗಿದ್ದು, ನಗರಸಭೆ ಅಷ್ಟು ಮೊತ್ತವನ್ನು ಏಕಾಏಕಿ ವ್ಯಯಿಸುವುದು ಸಾಧ್ಯವಿಲ್ಲ, ಎಲ್ಲಾ ಸದಸ್ಯರ ಸಮ್ಮತಿ ಬೇಕಾಗುತ್ತದೆ. ₹2–₹3 ಲಕ್ಷದೊಳಗೆ ದುರಸ್ತಿಯಾಗುವುದಿದ್ದರೆ ನಗರಸಭೆ ನೇರವಾಗಿ ದುರಸ್ತಿ ಕೆಲಸ ಮಾಡಿಸಬಹುದಿತ್ತು.

ದೀಪದ ಜತೆಗೆ ಧ್ವಜ ಏರಿಸುವ ಕೇಬಲ್‌ಗಳ ದುರಸ್ತಿಯನ್ನೂ ಮಾಡಬೇಕಾಗುತ್ತದೆ. ಅದಕ್ಕೆ ಸಮಯ ಹಿಡಿಯುತ್ತದೆ. ಹೀಗಾಗಿಯೇ ಈ ಬಾರಿಯ ಸ್ವಾತಂತ್ರ್ಯೋತ್ಸವದಲ್ಲಿ ಬೃಹತ್ ಧ್ವಜ ಹಾರಾಟ ನಡೆಯಲ್ಲ ಎಂದು ನಗರಸಭೆ ಮೂಲಗಳು ತಿಳಿಸಿವೆ.

ಧ್ವಜಸ್ತಂಭದ ದೀಪಗಳ ದುರಸ್ತಿ ಅಗತ್ಯವಿದೆ. ಸಣ್ಣ ವೆಚ್ಚವಾದರೆ ತಕ್ಷಣ ಮಾಡಬಹುದು ಅಧಿಕ ವೆಚ್ಚವಾದರೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿಯೇ ನಿರ್ಧರಿಸಬೇಕಾಗುತ್ತದೆ
ಎ.ಶಿವಕುಮಾರ್ ಆಯುಕ್ತ ನಗರಸಭೆ

ಜನನಿಬಿಡ ಸ್ಥಳ: ಅಪಾಯ

‘ಜಿಂದಾಲ್‌ ವಿಮಾನನಿಲ್ದಾಣ ಇಲ್ಲಿಂದ ಸುಮಾರು 30 ಕಿ.ಮೀ.ದೂರದಲ್ಲಿದೆ. ವಿಮಾನಗಳು ಹೆಲಿಕಾಪ್ಟರ್‌ಗಳು ಸಿಂಗಲ್ ಎಂಜಿನ್ ವಿಮಾನಗಳು 600 ಅಡಿಗಿಂತಲೂ ಕಡಿಮೆ ಎತ್ತರದಲ್ಲಿ ಹಾರಾಡಿದರೆ ಕಂಬದ ಇರುವಿಕೆ ಕಾಣಿಸದು. ದಟ್ಟ ಮೋಡ ಮುಸುಕಿದ ಸಂದರ್ಭದಲ್ಲೂ ಬ್ಲಿಂಕಿಂಗ್ ದೀಪ ಇದ್ದರೆ ಅದು ದೂರಕ್ಕೇ ಗೋಚರಿಸುತ್ತದೆ ಮತ್ತು ಕಂಬವನ್ನು ತಪ್ಪಿಸಿಯೇ ಸಂಚರಿಸುವುದು ಸಾಧ್ಯವಾಗುತ್ತದೆ’ ಎಂದು ವೈದ್ಯ ಗುರುರಾಜ್ ಆಚಾರ್ ತಿಳಿಸಿದ್ದಾರೆ.  ‘ಈ ಧ್ವಜಸ್ತಂಭವನ್ನು ದುರಸ್ತಿ ಮಾಡದೆ ಹಾಗೆಯೇ ಬಿಟ್ಟರೆ ಜನನಿಬಿಡ ಪ್ರದೇಶದಲ್ಲಿ ವಾಸಿಸುವ ಜನರಿಗೆ ಅಪಾಯ ಉಂಟಾಗಬಹುದು. ಬೃಹತ್ ಧ್ವಜಸ್ತಂಭದ ಮೇಲ್ಭಾಗದ ನ್ಯಾವಿಗೇಷನ್ ಲೈಟ್‌ ಮತ್ತು ಬ್ಲಿಂಕಿಂಗ್ ವೈಟ್ ಲೈಟ್ ಅನ್ನು ತಕ್ಷಣ ದುರಸ್ತಿ ಮಾಡಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.