ADVERTISEMENT

ಹೊಸಪೇಟೆಯಲ್ಲಿ ಉತ್ತಮ ಮಳೆ: ನದಿಯಲ್ಲಿ ಹೆಚ್ಚಿದ ನೀರಿನ ಮಟ್ಟ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2022, 12:33 IST
Last Updated 28 ಆಗಸ್ಟ್ 2022, 12:33 IST
ಹೊಸಪೇಟೆ ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಭಾನುವಾರ ಬೆಳಿಗ್ಗೆ ಮಳೆಯಾಯಿತು. ಹಂಪಿ ವಿಜಯ ವಿಠಲ ದೇವಸ್ಥಾನದ ಅಂಗಳದಲ್ಲಿ ನಿಂತ ಮಳೆ ನೀರಿನಲ್ಲಿ ಕಲ್ಲಿನ ರಥ, ಮಂಟಪ ಹಾಗೂ ಪ್ರವಾಸಿಗರ ಬಿಂಬ ಕಂಡಿದ್ದು ಹೀಗೆ  –ಚಿತ್ರ: ರಾಚಯ್ಯ ಎಸ್‌. ಸ್ಥಾವರಿಮಠ
ಹೊಸಪೇಟೆ ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಭಾನುವಾರ ಬೆಳಿಗ್ಗೆ ಮಳೆಯಾಯಿತು. ಹಂಪಿ ವಿಜಯ ವಿಠಲ ದೇವಸ್ಥಾನದ ಅಂಗಳದಲ್ಲಿ ನಿಂತ ಮಳೆ ನೀರಿನಲ್ಲಿ ಕಲ್ಲಿನ ರಥ, ಮಂಟಪ ಹಾಗೂ ಪ್ರವಾಸಿಗರ ಬಿಂಬ ಕಂಡಿದ್ದು ಹೀಗೆ –ಚಿತ್ರ: ರಾಚಯ್ಯ ಎಸ್‌. ಸ್ಥಾವರಿಮಠ   

ಹೊಸಪೇಟೆ (ವಿಜಯನಗರ): ಸತತ ಎರಡನೇ ದಿನವೂ ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಉತ್ತಮ ವರ್ಷಧಾರೆಯಾಗಿದೆ.
ಶನಿವಾರ ರಾತ್ರಿ 9ಗಂಟೆ ಸುಮಾರಿಗೆ ಆರಂಭಗೊಂಡ ಮಳೆ ಭಾನುವಾರ ನಸುಕಿನ ಜಾವದ ವರೆಗೆ ಎಡೆಬಿಡದೇ ಸುರಿದಿದೆ. ಸತತ ಮಳೆಗೆ ವಾತಾವರಣ ಸಂಪೂರ್ಣ ತಂಪಾಗಿದೆ. ಭಾನುವಾರ ದಿನವಿಡೀ ಕಾರ್ಮೋಡ ಕವಿದಿತ್ತು. ರಾತ್ರಿ ಸುರಿದ ಭಾರಿ ಮಳೆಗೆ ಚರಂಡಿಗಳು ಉಕ್ಕಿ ಹರಿದವು.

ತಾಲ್ಲೂಕಿನ ಮರಿಯಮ್ಮನಹಳ್ಳಿಯಲ್ಲಿ ಅತಿ ಹೆಚ್ಚು 8.5 ಸೆಂ.ಮೀ ಮಳೆಯಾಗಿದೆ. ಹೊಸಪೇಟೆ ಐ.ಬಿ.ಯಲ್ಲಿ 3.38 ಸೆಂ.ಮೀ, ರೈಲು ನಿಲ್ದಾಣದ ಪ್ರದೇಶದಲ್ಲಿ 2.62 ಸೆಂ.ಮೀ, ಟಿ.ಬಿ. ಡ್ಯಾಂನಲ್ಲಿ 2.35 ಸೆಂ.ಮೀ, ತಾಲ್ಲೂಕಿನ ಹಂಪಿ–ಕಮಲಾಪುರದಲ್ಲಿ 4.5 ಸೆಂ.ಮೀ, ಗಾದಿಗನೂರಿನಲ್ಲಿ 4.22 ಸೆಂ.ಮೀ ಮಳೆಯಾಗಿದೆ.

ಇನ್ನು, ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ಜಲಾಶಯದ ಒಳಹರಿವು ಪುನಃ ಹೆಚ್ಚಾಗಿದೆ. ಒಟ್ಟು 133 ಟಿ.ಎಂ.ಸಿ. ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಹೂಳು ತುಂಬಿರುವುದರಿಂದ ಅದರ ನೀರಿನ ಸಂಗ್ರಹ ಸಾಮರ್ಥ್ಯ 105.788 ಟಿ.ಎಂ.ಸಿ ಅಡಿಗೆ ಕುಸಿದಿದೆ.

ADVERTISEMENT

ಸದ್ಯ ಜಲಾಶಯದಲ್ಲಿ 103.740 ಟಿ.ಎಂ.ಸಿ. ಅಡಿ ನೀರಿನ ಸಂಗ್ರಹವಿದೆ. ಪ್ರತಿ ಗಂಟೆಗೆ 66,183 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಇನ್ನು, ಜಲಾಶಯದ ಒಟ್ಟು 33 ಕ್ರಸ್ಟ್‌ಗೇಟ್‌ಗಳ ಪೈಕಿ 28 ಗೇಟ್‌ಗಳಿಂದ 80,750 ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ. ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಹಂಪಿ ಸ್ನಾನಘಟ್ಟ, ಪುರಂದರದಾಸರ ಮಂಟಪ, ಚಕ್ರತೀರ್ಥ ಭಾಗಶಃ ಮುಳುಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.