ADVERTISEMENT

ಹೊಸಪೇಟೆ: ಕುರುಬರಿಗೆ ಕಾಂಗ್ರೆಸ್‌ ಎಂಎಲ್‌ಸಿ ಟಿಕೆಟ್‌ಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 8:34 IST
Last Updated 11 ಅಕ್ಟೋಬರ್ 2021, 8:34 IST
   

ಹೊಸಪೇಟೆ (ವಿಜಯನಗರ): ‘ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಅವಳಿ ಜಿಲ್ಲೆಗಳಾದ ವಿಜಯನಗರ–ಬಳ್ಳಾರಿಯಿಂದ ಕುರುಬ ಸಮಾಜದ ಯಾರಿಗಾದರೂ ಒಬ್ಬರಿಗೆ ಪಕ್ಷದ ಟಿಕೆಟ್‌ ನೀಡಬೇಕು’ ಎಂದು ಕುರುಬ ಸಮಾಜದ ಮುಖಂಡರು ಆಗ್ರಹಿಸಿದರು.

ಸೋಮವಾರ ನಗರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಕುರುಬ ಸಮಾಜದ ಮುಖಂಡರಾದ ರಾಮಚಂದ್ರಗೌಡ, ಚಿದಾನಂದಪ್ಪ, ಅಯ್ಯಾಳಿ ಮೂರ್ತಿ, ದೇವರಮನೆ ಚೆನ್ನಪ್ಪ, ದಲ್ಲಾಳಿ ಕುಬೇರ, ಕುರಿ ಶಿವಮೂರ್ತಿ, ಗೋಪಾಲಕೃಷ್ಣ, ಕೆ. ರವಿಕುಮಾರ್‌, ಬಸಲಿಂಗಪ್ಪ ಎಸ್‌. ಮೇಟಿ, ಕೆ. ಹನುಮಂತ, ಕೆ.ಎಂ. ಪರಮೇಶ, ಗೌರಿಶಂಕರ, ಜೋಗಿನರ ಭರತೇಶ್‌ ಆಗ್ರಹಿಸಿದರು.

ಬಳ್ಳಾರಿ ಲೋಕಸಭೆ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಬಳ್ಳಾರಿ–ವಿಜಯನಗರ ಜಿಲ್ಲೆ ವ್ಯಾಪ್ತಿಗೆ ಬರುವ ಹತ್ತು ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳು ಪರಿಶಿಷ್ಟ ಪಂಗಡಕ್ಕೆ, 2 ಪರಿಶಿಷ್ಟ ಜಾತಿಯವರಿಗೆ, 3 ಸಾಮಾನ್ಯ ವರ್ಗದವರಿಗೆ ಮೀಸಲಾಗಿವೆ. ರಾಜ್ಯಸಭೆಗೆ ಅಲ್ಪಸಂಖ್ಯಾತರಿಗೆ ಅವಕಾಶ ಕೊಡಲಾಗಿದೆ. ಅವಳಿ ಜಿಲ್ಲೆಗಳಲ್ಲಿ ಲಿಂಗಾಯತರು, ಪರಿಶಿಷ್ಟ ಪಂಗಡದವರ ನಂತರ ಕುರುಬರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಅನೇಕ ದಶಕಗಳಿಂದ ಸಮಾಜದವರು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುತ್ತ ಬಂದಿದ್ದಾರೆ. 2003ರಲ್ಲಿ ಸಮಾಜದ ಮುಖಂಡ ಕೆ.ಎಸ್‌.ಎಲ್‌.ಸ್ವಾಮಿ ನಂತರ ಯಾರಿಗೂ ಪಕ್ಷ ಟಿಕೆಟ್‌ ಕೊಟ್ಟಿಲ್ಲ. ಈ ಸಲ ಸಮಾಜಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಈ ಸಂಬಂಧ ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ಗೂ ಮನವಿ ಸಲ್ಲಿಸಲಾಗುವುದು. ಪಕ್ಷ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಕ್ಷೇತ್ರ ಪುನರ್‌ ವಿಂಗಡಣೆ ನಂತರ ಕುರುಬರಿಗೆ ರಾಜಕೀಯ ಪ್ರಾತಿನಿಧ್ಯ ಸಂಪೂರ್ಣ ಮರೀಚಿಕೆಯಾಗಿದೆ. ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಹೊಂದಿರುವ ಕಾಂಗ್ರೆಸ್‌ ಪಕ್ಷದಿಂದ ಸಮಾಜಕ್ಕೆ ನ್ಯಾಯ ಒದಗಿಸಿಕೊಡಲು ಸಾಧ್ಯ ಎಂದು ಹೇಳಿದರು.

‘ನಾನು ಎಂಎಲ್‌ಸಿ ಸ್ಥಾನದ ಆಕಾಂಕ್ಷಿ ಅಲ್ಲ. ನೂತನ ವಿಜಯನಗರ ಜಿಲ್ಲಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಷ್ಟೇ. ಸಮಾಜದ ಮುಖಂಡನಾಗಿ ಸಮಾಜಕ್ಕೆ ಟಿಕೆಟ್‌ ಕೊಡಬೇಕೆಂದು ಕೇಳಲು ಬಂದಿರುವೆ’ ಎಂದು ಕೆಪಿಸಿಸಿ ಸದಸ್ಯ ಕುರಿ ಶಿವಮೂರ್ತಿ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.