ADVERTISEMENT

ಹೊಸಪೇಟೆ ನಗರಸಭೆ ಚುನಾವಣೆ: ಬಿಜೆಪಿ, ಕಾಂಗ್ರೆಸ್‌ಗೆ ಬಂಡಾಯದ ಬಿಸಿ

ಮೂಲ ಕಾರ್ಯಕರ್ತರ ಕಡೆಗಣನೆ ಆರೋಪ–ಪಕ್ಷೇತರರಾಗಿ ನಾಮಪತ್ರ ಸಲ್ಲಿಕೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 16 ಡಿಸೆಂಬರ್ 2021, 10:57 IST
Last Updated 16 ಡಿಸೆಂಬರ್ 2021, 10:57 IST
ಹೊಸಪೇಟೆ ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬುಧವಾರ ಕೊನೆಯ ದಿನವಾಗಿತ್ತು. ಅಭ್ಯರ್ಥಿಗಳು ಪಕ್ಷದ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು
ಹೊಸಪೇಟೆ ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬುಧವಾರ ಕೊನೆಯ ದಿನವಾಗಿತ್ತು. ಅಭ್ಯರ್ಥಿಗಳು ಪಕ್ಷದ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು   

ಹೊಸಪೇಟೆ (ವಿಜಯನಗರ): ಇಲ್ಲಿನ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳಿಗೆ ಬಂಡಾಯದ ಬಿಸಿ ತಟ್ಟಿದೆ.

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಬುಧವಾರ ‘ಬಿ’ ಫಾರಂ ಸಿಗುವ ನಿರೀಕ್ಷೆಯಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಇದ್ದರು. ಆದರೆ, ಕೊನೆ ಗಳಿಗೆಯಲ್ಲಿ ಟಿಕೆಟ್‌ ಕೈ ತಪ್ಪಿರುವುದರಿಂದ ಹಲವರು ಸ್ವಪಕ್ಷಿಯರ ವಿರುದ್ಧವೇ ಬಂಡಾಯವೆದ್ದು, ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ.

ಈಗಾಗಲೇ ಪಕ್ಷದ ನಿರ್ಧಾರವನ್ನು ಬಹಿರಂಗವಾಗಿಯೇ ಟೀಕಿಸಿರುವ ಬಿಜೆಪಿಯ ಬಿಸಾಟಿ ಸತ್ಯನಾರಾಯಣ, ‘ಕಾಂಗ್ರೆಸ್‌ನವರಿಗೆ ಬಿಜೆಪಿ ಟಿಕೆಟ್‌ ನೀಡಲಾಗಿದೆ’ ಎಂದು ಆರೋಪಿಸಿದ್ದಾರೆ. ಅವರು ಚುನಾವಣಾ ಕಣಕ್ಕೆ ದುಮುಕಿಲ್ಲ. ಆದರೆ, ಅಂತರ ಕಾಯ್ದುಕೊಳ್ಳುವ ಮಾತುಗಳನ್ನು ಆಡಿದ್ದಾರೆ. ಇನ್ನು, ಬಿಜೆಪಿ, ಆರ್‌ಎಸ್‌ಎಸ್‌ನಲ್ಲಿ ಸಕ್ರಿಯರಾಗಿರುವ ಅನಿಲ್‌ ಜೋಶಿ ಕೂಡ ಟಿಕೆಟ್‌ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ, ಪಕ್ಷ ಅವರನ್ನು ಕಡೆಗಣಿಸಿರುವುದರಿಂದ ಅವರು ಪಕ್ಷೇತರರಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ.

ADVERTISEMENT

‘ಟಿಕೆಟ್‌ ಹಂಚಿಕೆಗೆ ಕೋರ್‌ ಕಮಿಟಿ ರಚಿಸಲಾಗಿತ್ತು. ಆದರೆ, ಅದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರ ಮಾತು ನಡೆದಿದೆ. ಅವರ ಬೆಂಬಲಿಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಸಿಕ್ಕಿದೆ. ಮುಖಂಡರಾದ ರಾಣಿ ಸಂಯುಕ್ತಾ, ಎಚ್‌.ಆರ್‌. ಗವಿಯಪ್ಪ ಅವರ ಬೆಂಬಲಿಗರಿಗೆ ಟಿಕೆಟ್‌ ಸಿಕ್ಕಿಲ್ಲ. ಹೆಸರಿಗಷ್ಟೇ ಕೋರ್‌ ಕಮಿಟಿ ರಚಿಸಲಾಗಿತ್ತು’ ಎಂದು ಹೆಸರು ಹೇಳಲಿಚ್ಛಿಸದ ಪಕ್ಷದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದಲ್ಲೂ ಹಲವರು ಬಂಡಾಯದ ಬಾವುಟ ಹಾರಿಸಿದ್ದಾರೆ. 35 ವಾರ್ಡ್‌ಗಳ ಪೈಕಿ 34 ಕಡೆ ಪಕ್ಷದ ಅಭ್ಯರ್ಥಿಗಳನ್ನು ಪಕ್ಷ ಕಣಕ್ಕಿಳಿಸಿದೆ. 34ನೇ ವಾರ್ಡಿಗೆ ನಿರ್ಮಲಾ ಅವರ ಹೆಸರು ಅಂತಿಮಗೊಳಿಸಲಾಗಿತ್ತು. ಆದರೆ, ಅನಾರೋಗ್ಯದಿಂದ ಅವರು ಕಣಕ್ಕಿಳಿದಿಲ್ಲ.

ಟಿಕೆಟ್‌ ಸಿಗದೇ ಹಲವರು ಮುನಿಸಿಕೊಂಡಿದ್ದಾರೆ. 4, 9,11, 12, 20ನೇ ವಾರ್ಡ್‌ನಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧವೇ ಪಕ್ಷೇತರರಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಮತ್ತೆ ಕೆಲವರು ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡಿದ್ದಾರೆ. ಪಕ್ಷದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಿಟ್ಟು ಹೊರಹಾಕಿದ್ದಾರೆ. ರೋಹಿಣಿ ಅವರನ್ನು ಹೊರತುಪಡಿಸಿದರೆ ಎಲ್ಲ ಕಡೆ ಹೊಸ ಮುಖಗಳಿಗೆ ಆದ್ಯತೆ ನೀಡಲಾಗಿದೆ.

‘ಪಕ್ಷದ ಹಿರಿಯ ಮುಖಂಡರನ್ನು ಒಳಗೊಂಡ ಸಮಿತಿ ರಚಿಸಿ, ಎಲ್ಲವನ್ನೂ ಪರಿಶೀಲಿಸಿ ಮೂಲ ಕಾರ್ಯಕರ್ತರಿಗೆ ಟಿಕೆಟ್ ಕೊಡಲಾಗಿದೆ’ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿನಾಯಕ್‌ ಶೆಟ್ಟರ್‌ ತಿಳಿಸಿದ್ದಾರೆ. ಆದರೆ, ಕಾರ್ಯಕರ್ತರು ಹೇಳುವುದೇ ಬೇರೆ. ‘ಟಿಕೆಟ್‌ ಹಂಚಿಕೆಯಲ್ಲಿ ಅಬ್ದುಲ್‌ ವಹಾಬ್‌, ವೆಂಕಟರಾವ್‌ ಘೋರ್ಪಡೆ ಅವರ ಕೈ ಮೇಲಾಗಿದೆ. ಅವರ ಬೆಂಬಲಿಗರಿಗೆ ಟಿಕೆಟ್‌ ಕೊಡಲಾಗಿದೆ’ ಎಂದು ಆರೋಪಿಸಿದ್ದಾರೆ.

ನಾಮಪತ್ರ ಹಿಂಪಡೆಯಲು ಡಿ. 17 ಕೊನೆಯ ದಿನವಾಗಿದ್ದು, ಬಂಡಾಯಗಾರರ ಮನವೊಲಿಸಲು ಎರಡೂ ಪಕ್ಷಗಳು ಯಾವ ರಣತಂತ್ರ ರೂಪಿಸುತ್ತವೆ ನೋಡಬೇಕಿದೆ.

ಮೂವರಿಗೆ ಮತ್ತೆ ಟಿಕೆಟ್‌
ನಗರಸಭೆ ಚುನಾವಣೆಗೆ ಬಿಜೆಪಿ ಪಕ್ಷವು 28ನೇ ವಾರ್ಡಿನಿಂದ ಚಂದ್ರಕಾಂತ ಕಾಮತ್‌, 5ನೇ ವಾರ್ಡಿನಿಂದ ರೂಪೇಶ್‌ ಕುಮಾರ್‌ ಅವರಿಗೆ ಮತ್ತೊಮ್ಮೆ ಟಿಕೆಟ್‌ ನೀಡಿ ಕಣಕ್ಕಿಳಿಸಿದೆ. ಇನ್ನು ಕಾಂಗ್ರೆಸ್‌ ಪಕ್ಷ ರೋಹಿಣಿ ವೆಂಕಟೇಶ ಅವರಿಗೆ ಎರಡನೇ ಬಾರಿಗೆ ಟಿಕೆಟ್‌ ನೀಡಿದರೆ, ಮಾಜಿ ಸದಸ್ಯ ರಾಮಾಂಜಿನಿ ಬದಲು ಅವರ ಪತ್ನಿಗೆ ಟಿಕೆಟ್‌ ಸಿಕ್ಕಿದೆ.

‘ಚುನಾವಣೆಯಲ್ಲಿ ನಾವೇ ಗೆಲ್ತೇವೆ’
‘ನಗರಸಭೆ ಚುನಾವಣೆಯಲ್ಲಿ ನಾವೇ ಗೆಲ್ತೇವೆ. ಎಂಎಲ್‌ಸಿ ಚುನಾವಣೆ ಫಲಿತಾಂಶ ನಮ್ಮ ವಿಶ್ವಾಸ ಇಮ್ಮಡಿಗೊಳಿಸಿದೆ. ನಾವು ಕೆಲಸ ಮಾಡ್ತೇವೆ. ಅದರ ಹೆಸರಲ್ಲೇ ಮತ ಕೇಳ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಪ್ರತಿಕ್ರಿಯಿಸಿದರು.
ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಅವರನ್ನು ಭೇಟಿಯಾಗಿ ಅಭಿನಂದಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘35 ವಾರ್ಡ್‌ಗಳಿಗೆ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸಲಾಗಿದೆ. ಪಕ್ಷದ ಬಾವುಟ ಹಿಡಿದು ನಾಮಪತ್ರ ಸಲ್ಲಿಸಲು ಕಾರ್ಯಕರ್ತರು ಬರುತ್ತಿರುವುದು ನೋಡಿದರೆ ಖುಷಿಯಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.