ADVERTISEMENT

ವಿಜಯನಗರ | ಸಿಲಿಂಡರ್‌ನಿಂದ ಅವಘಡ ಆಗದಂತೆ ಎಚ್ಚರ ವಹಿಸಿ

ಗ್ಯಾಸ್‌ ಏಜೆನ್ಸಿದಾರರಿಗೆ ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನಿಕೇರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 7:35 IST
Last Updated 22 ಅಕ್ಟೋಬರ್ 2025, 7:35 IST
ಹೊಸಪೇಟೆಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ಗ್ಯಾಸ್ ಏಜೆನ್ಸಿಯವರ ಸಭೆ ನಡೆಸಿದರು.  ಆಹಾರ ಇಲಾಖೆಯ ಉಪನಿರ್ದೇಶಕ ರಿಯಾಜ್ ಹಾಜರಿದ್ದರು
ಹೊಸಪೇಟೆಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ಗ್ಯಾಸ್ ಏಜೆನ್ಸಿಯವರ ಸಭೆ ನಡೆಸಿದರು.  ಆಹಾರ ಇಲಾಖೆಯ ಉಪನಿರ್ದೇಶಕ ರಿಯಾಜ್ ಹಾಜರಿದ್ದರು   

ಹೊಸಪೇಟೆ: ಜಿಲ್ಲೆಯಲ್ಲಿ ಅಡುಗೆ ಸಿಲಿಂಡರ್‌ನ ಸುರಕ್ಷತಾ ಮಾನದಂಡಗಳನ್ನು ಸಾರ್ವನಿಕರಿಗೆ ತಿಳಿಸುವ ಮೂಲಕ ಯಾವುದೇ ರೀತಿಯ ಅವಘಡ ಸಂಭವಿಸಿದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನಿಕೇರಿ ಹೇಳಿದರು.

ಮಂಗಳವಾರ ತಮ್ಮ ಕಚೇರಿಯಲ್ಲಿ ಏರ್ಪಡಿಸಿದ್ದ ಅಡುಗೆ ಸಿಲಿಂಡರ್ ವಿತರಣೆ, ಸಾಗಾಣಿಕೆ ಮತ್ತು ಸಂಗ್ರಹಣೆ ಮಾಡುವ ಗ್ಯಾಸ್ ಏಜೆನ್ಸಿಗಳ ನಿರ್ವಹಣೆ ಕುರಿತು ಸಭೆಯಲ್ಲಿ ಅವರು ಮಾತನಾಡಿದರು.

‌‘ಅಡುಗೆ ಸಿಲಿಂಡರ್ ಗೃಹ ಬಳಕೆದಾರರು ಅತ್ಯಂತ ತುರ್ತು ಸಮಯದಲ್ಲಿ 1906 ಟೋಲ್ ಫ್ರೀ ಸಂಖ್ಯೆಯನ್ನು ಬಳಕೆ ಮಾಡಬೇಕು. ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಗೃಹಬಳಕೆ ಅನಿಲ ಗ್ರಾಹಕರಿಂದ ಹೆಚ್ಚುವರಿಯಾಗಿ ಹಣ ವಸೂಲಿ ಮಾಡಬಾರದು. ಗ್ರಾಹಕರಿಂದ ಯಾವುದೇ ದೂರುಗಳು ಬಂದ ತಕ್ಷಣ ಕೂಡಲೇ ಸ್ಥಳಕ್ಕೆ ತೆರಳಿ ಸಮಸ್ಯೆಯನ್ನು ಬಗೆಹರಿಸಬೇಕು. ನಿರ್ಲಕ್ಷ ವಹಿಸಿದಲ್ಲಿ ಏಜೆನ್ಸಿಗಳ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಡಿ.ಸಿ ಎಚ್ಚರಿಸಿದರು.

ADVERTISEMENT

ಗ್ಯಾಸ್ ಸಿಲೆಂಡರ್‌ಗಳನ್ನು ಬುಕಿಂಗ್ ಮಾಡಿದ ನಂತರ 48 ಗಂಟೆಯೊಳಗೆ ಪೂರೈಸಬೇಕು. ಜಿಲ್ಲೆಯಲ್ಲಿ ಗೃಹಬಳಕೆ ಸಿಲಿಂಡರ್ ಕೊರತೆ ಉಂಟಾಗದಂತೆ ಸಮರ್ಪಕವಾಗಿ ಪೂರೈಕೆ ಕಲ್ಪಿಸಬೇಕು. ಉಜ್ವಲ ಯೋಜನೆಯ ಫಲಾನುಭವಿಗಳ ಇ-ಕೆವೈಸಿ ಯನ್ನು ಕಡ್ಡಾಯವಾಗಿ ಮಾಡಿಸಬೇಕು. ಸಿಲಿಂಡರ್ ಗೃಹಬಳಕೆದಾರರಿಗೆ ಸುರಕ್ಷತಾ ನಿಯಮಗಳನ್ನು (ಎಸ್ ಓ ಪಿ) ಮುದ್ರಿಸಿ ಪ್ರತಿ ಸಿಲಿಂಡರ್ ಜತೆಗೆ ಮನೆಗೆ ತಲುಪಿಸಬೇಕು. ಗೃಹಣಿಯರಿಗೆ ಅಡುಗೆ ಸಿಲಿಂಡರ್‌ನ ಬಳಕೆಯ ಬಗ್ಗೆ ಮಾಹಿತಿಯನ್ನು ನೀಡಬೇಕು. ಪ್ರತಿ ಗ್ಯಾಸ್ ಏಜೆನ್ಸಿಗಳು ತಮ್ಮ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ ಮತ್ತು ವಾರ್ಡ್‌ಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಬೇಕು ಎಂದರು

ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯ ಉಪನಿರ್ದೇಶಕ ರಿಯಾಜ್ ಮಾತನಾಡಿ, ಗೃಹ ಸಿಲಿಂಡರ್ ಬಳಕೆದಾರರು ಗ್ಯಾಸ್ ಸ್ಟವ್ ಪೈಪ್ ಅಗಿಂದಾಗ್ಗೆ ಬದಲಿಸಬೇಕು. ಅಧಿಕೃತ ಗ್ಯಾಸ್ ಸರಬರಾಜುದಾರರಿಂದಲೇ ಗ್ಯಾಸ್ ಖರೀದಿ ಮಾಡಬೇಕು. ಸಿಲಿಂಡರ್ ನಲ್ಲಿ ಆಯಾ ಕಂಪನಿಯ ಸೀಲ್ ಮತ್ತು ಕ್ಯಾಪ್ ಸರಿಯಾಗಿ ಇದೆಯೇ ಎಂದು ಪರಿಶೀಲಿಸಬೇಕು. ಮನೆಗಳಲ್ಲಿ ಸಿಲಿಂಡರ್ ಅನ್ನು ಗಾಳಿಯಾಡುವ ಜಾಗದಲ್ಲಿ ಇಡಬೇಕು. ರಾತ್ರಿ ಮಲಗುವ ವೇಳೆ ಗ್ಯಾಸ್ ಸ್ಟವ್ ಆಫ್ ಆಗಿದಿಯೇ ಎಂದು ಪರಿಶೀಲಿಸಬೇಕು ಎಂದರು.

ಇತ್ತೀಚೆಗೆ ತಾಲ್ಲೂಕಿನಗಾದಿಗನೂರು ಗ್ರಾಮದಲ್ಲಿ ನಡೆದ ಸಿಲಿಂಡರ್ ಸ್ಪೋಟ ಪ್ರಕರಣದಿಂದ ಎಚ್ಚೆತ್ತುಕೊಳ್ಳಬೇಕಿದೆ. ಇಂತಹ ಘಟನೆ ಮರುಕಳಿಸದಂತೆ ಜಾಗೃತಿ ವಹಿಸಬೇಕು
ಕವಿತಾ ಎಸ್.ಮನ್ನಿಕೇರಿ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.