ADVERTISEMENT

ಹೊಸಪೇಟೆ: ತುಂಗಭದ್ರಾ ಅಣೆಕಟ್ಟು ನೋಡಲು ಜನಸಾಗರ

33 ಕ್ರಸ್ಟ್‌ಗೇಟ್‌ಗಳಿಂದ 1.56 ಲಕ್ಷ ಕ್ಯುಸೆಕ್‌ ನೀರು ನದಿಗೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 15:06 IST
Last Updated 28 ಜುಲೈ 2024, 15:06 IST
<div class="paragraphs"><p>ತುಂಗಭದ್ರಾ ಅಣೆಕಟ್ಟು</p></div>

ತುಂಗಭದ್ರಾ ಅಣೆಕಟ್ಟು

   

ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯ ತುಂಬಿ ತುಳುಕುತ್ತಿದ್ದು, ಎಲ್ಲಾ 33 ಕ್ರಸ್ಟ್‌ಗೇಟ್‌ಗಳಿಂದ ನೀರು ನದಿಗೆ ಧುಮ್ಮುಕ್ಕುತ್ತಿದೆ. ಇದನ್ನು ನೋಡಲು ರಾಜ್ಯದ ನಾನಾ ಭಾಗಗಳಲ್ಲದೆ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಕಡೆಗಳಿಂದ ಪ್ರವಾಸಿಗರು ಬರುತ್ತಿದ್ದಾರೆ.

ಅಣೆಕಟ್ಟೆಯಿಂದ ಸತತ ಎರಡು ದಿನಗಳಿಂದ ನದಿಗೆ 1 ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರು ಹರಿದು ಹೋಗುತ್ತಿದ್ದು, ಸದ್ಯ ಹೊರಹರಿವಿನ ಪ್ರಮಾಣ 1,56,871 ಕ್ಯುಸೆಕ್‌ನಷ್ಟಿದೆ. ಒಳಹರಿವಿನ ಪ್ರಮಾಣ 1,44,099 ಕ್ಯುಸೆಕ್‌ನಷ್ಟಿದೆ. ವಾರಾಂತ್ಯದ  ದಿನಗಳಲ್ಲಿ ಸಾಮಾನ್ಯವಾಗಿ ಹಂಪಿ, ಟಿ.ಬಿ.ಡ್ಯಾಂ ಪ್ರದೇಶಗಳಲ್ಲಿ ಪ್ರವಾಸಿಗರು ಹೆಚ್ಚೇ ಇರುತ್ತಾರೆ. ಇದೀಗ ತುಂಗಭದ್ರಾ ಅಣೆಕಟ್ಟೆಯಿಂದ ಎಲ್ಲಾ ಗೇಟ್‌ಗಳು ಮೂಲಕ ನೀರು ಧುಮ್ಮಿಕ್ಕುತ್ತಿರುವುದರಿಂದ ಅದರ ಸೊಬಗನ್ನು ಸವಿಯಲು ಪ್ರವಾಸಿಗರು ತಂಡೋಪತಂಡವಾಗಿ ಬರತೊಡಗಿದ್ದಾರೆ.

ADVERTISEMENT

ಭಾನುವಾರ ಟಿ.ಬಿ.ಡ್ಯಾಂನ ವಾಹನ ನಿಲುಗಡೆ ಸ್ಥಳ ಭರ್ತಿಯಾಗಿದ್ದು ಮಾತ್ರವಲ್ಲ, ಟಿಕೆಟ್ ಕೌಂಟರ್‌ನಲ್ಲಿ ಜನರ ಸರದಿ ಸಾಲು ದೊಡ್ಡದಾಗಿತ್ತು. ₹ 10 ಪ್ರವೇಶ ಶುಲ್ಕ ನಿಗದಿಪಡಿಸಿದ್ದು, ಜನ ಜಾತ್ರೆಯಂತೆ ಇಲ್ಲಿ ಸೇರಿದ್ದರು.

ಟಿ.ಬಿ.ಡ್ಯಾಂ ಒಳಗೆ ಒಳಗೆ ಪ್ರವೇಶಿಸಿದ ಬಳಿಕ ನಡೆದುಕೊಂಡು ಅಣೆಕಟ್ಟೆಯ ಸಮೀಪಕ್ಕೆ ತೆರಳಲು ಅವಕಾಶ ಇದ್ದು, ವೈಕುಂಠ ಅತಿಥಿಗೃಹದ ಬಳಿಗೂ ತೆರಳಬಹುದಾಗಿದೆ. ಹೀಗಾಗಿ ಜಲಾಶಯದಲ್ಲಿ ಭೋರ್ಗರೆದು, ಗಾಳಿಗೆ ತೊಯ್ದಾಡುವ ಜಲರಾಶಿಯನ್ನು ಕಂಡು, ಅಣೆಕಟ್ಟೆಯಿಂದ ಹೊರಬೀಳುವ ಹಾಲ್ನೊರೆಯಂತಹ ಜಲಧಾರೆಯನ್ನು ನೋಡಿ ಜನರು ಪುಳಕಿತರಾದರು.

ಅತಿಗಣ್ಯರಿಗಷ್ಟೇ ಅಣೆಕಟ್ಟೆಯೊಳಗೆ ಪ್ರವೇಶ: ಜಿಲ್ಲೆಗಳ ಹಿರಿಯ ಅಧಿಕಾರಿಗಳು, ಅವರ ಕುಟುಂಬದವರು, ಅತಿಗಣ್ಯರು, ಅವರ ಕುಟುಂಬದವರಿಗೆ ಮಾತ್ರ ಅಣೆಕಟ್ಟೆಯೊಳಗೆ ತೆರಳಿ ಜಲರಾಶಿಯ ಅಗಾಧತೆಯನ್ನು ಮತ್ತು ಗೇಟ್‌ಗಳಿಂದ ಧುಮ್ಮಿಕ್ಕುವ ತುಂಗಭದ್ರೆಯ ರಭಸವನ್ನು ನೋಡಲು ಅವಕಾಶ ನೀಡಲಾಗುತ್ತಿದೆ. ಸಾವಿರಾರು ಸಾಮಾನ್ಯ ಪ್ರವಾಸಿಗರು ಅಣೆಕಟ್ಟೆಯ ಬದಿಯಲ್ಲಿ, ವೈಕುಂಠ  ಅತಿಥಿಗೃಹ  ಸಮೀಪದ ವೀಕ್ಷಣಾ ಗೋಪುರದ ಬಳಿ ನಿಂತು ಅದ್ಭುತ ದೃಶ್ಯಕಾವ್ಯಕ್ಕೆ ಸಾಕ್ಷಿಯಾಗುತ್ತಿದ್ದಾರೆ.

ಬಿಗಿ ಭದ್ರತಾ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಸೇತುವೆ ಸಮೀಪಕ್ಕೆ ತೆರಳುವ ಅತಿಗಣ್ಯರ ವಾಹನ ಸಹಿತ ಪ್ರತಿಯೊಂದು ವಾಹನವನ್ನೂ ಕೂಲಂಕಷ ತಪಾಸಣೆ ನಡೆಸಿಯೇ ಒಳಗೆ ಬಿಡಲಾಗುತ್ತಿದೆ.

ಹೆದ್ದಾರಿಯಲ್ಲೂ ಜನ: ಹೊಸಪೇಟೆ–ಕೊಪ್ಪಳ ರಾಷ್ಟ್ರೀಯ ಹೆದ್ದಾರಿಯ ಮೇಲಿನಿಂದಲೂ ತುಂಗಭದ್ರೆಯ ವಯ್ಯಾರವನ್ನು ಪ್ರಯಾಣಿಕರು ಕಣ್ತುಂಬಿಕೊಳ್ಳುತ್ತಿದ್ದಾರೆ. ಮುನಿರಾಬಾದ್ ಸೇತುವೆ ಮೇಲೆ ಸ್ವಲ್ಪ ಹೊತ್ತು ನಿಲ್ಲುವ ವಾಹನಗಳು ಜಲರಾಶಿಗೆ ಸಾಕ್ಷಿಯಾಗುತ್ತಿವೆ. ಈ ಸೇತುವೆ ಈಗ ಸೆಲ್ಫಿ ಪಾಯಿಂಟ್ ಆಗಿಯೂ ಬದಲಾಗಿದೆ. ಹೆದ್ದಾರಿಯಲ್ಲಿ ವಾಹನ ದಟ್ಟಣೆ ಆಗದಂತೆ ಮಾಡಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಹಂಪಿಯಲ್ಲಿ: ಹಂಪಿಯಲ್ಲಿ ಶನಿವಾರದ ಇದ್ದಂತಹ ಸ್ಥಿತಿಯೇ ಭಾನುವಾರವೂ ಮುಂದುವರಿದಿದ್ದು, ಚಕ್ರತೀರ್ಥ ಪ್ರದೇಶದಲ್ಲಿ ತುಂಗಭದ್ರೆಯಿಂದ ರಾಮ ಲಕ್ಷ್ಮಣರ ಪಾದಸ್ಮರ್ಶ ಇನ್ನೂ ಆಗಿಲ್ಲ.1.90  ಲಕ್ಷ ಕ್ಯುಸೆಕ್‌ನಷ್ಟು ನೀರನ್ನು ನದಿಗೆ ಹರಿಸಿದರೆ ಮಾತ್ರ  ತುಂಗಭದ್ರೆ  ರಾಮ ಲಕ್ಷ್ಮಣರ ಪಾದ ತೊಳೆಯುತ್ತಾಳೆ ಎಂದು ಸ್ಥಳೀಯರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಳೆದ ವರ್ಷ ತುಂಗಭದ್ರಾ ಅಣೆಕಟ್ಟೆ ಭರ್ತಿಯಾಗಿರಲಿಲ್ಲ. 105.78 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 89 ಟಿಎಂಸಿ ಅಡಿಯಷ್ಟು ಮಾತ್ರ  ನೀರು ಸಂಗ್ರಹವಾಗಿತ್ತು. ಹೀಗಾಗಿ ಅಣೆಕಟ್ಟೆಯಿಂದ ನೀರು ಬಿಟ್ಟಿರಲಿಲ್ಲ. ಈ ಬಾರಿ ಮಲೆನಾಡು ಭಾಗದಲ್ಲಿ ಮುಂಗಾರು ಮಳೆಯ ಅಬ್ಬರದಿಂದಾಗಿ ನದಿಗೆ ಭಾರಿ ಪ್ರಮಾಣದಲ್ಲಿ ಒಳಹರಿವು ಆಗಿ ಕಳೆದ ಎರಡು ದಿನಗಳಿಂದ ಲಕ್ಷಕ್ಕೂ ಅಧಿಕ ಕ್ಯುಸೆಕ್‌ ನೀರನ್ನು ಹೊರಗೆ ಬಿಡುವಂತಾಗಿದೆ. 2022ರಲ್ಲಿ ಒಂದೂವರೆ ತಿಂಗಳ ಕಾಲ ಕ್ರಸ್ಟ್‌ಗೇಟ್‌ಗಳಿಂದ ನೀರು ಧುಮ್ಮಿಕ್ಕುವುದನ್ನು ಪ್ರವಾಸಿಗರು ಕಣ್ತುಂಬಿಕೊಂಡಿದ್ದರು. ತ್ತು. ಆಗ 400 ಟಿಎಂಸಿ ಅಡಿಯಷ್ಟು ನೀರು ನದಿಗೆ ಹರಿದು ಹೋಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.