ADVERTISEMENT

ಹೊಸಪೇಟೆ: ಜಿಲ್ಲಾ ಉಸ್ತುವಾರಿ ಸ್ಥಾನದಿಂದ ಸಚಿವ ಜಮೀರ್‌ ಬದಲಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2024, 15:52 IST
Last Updated 6 ಫೆಬ್ರುವರಿ 2024, 15:52 IST
ಸಿರಾಜ್‌ ಶೇಖ್‌
ಸಿರಾಜ್‌ ಶೇಖ್‌   

ಹೊಸಪೇಟೆ (ವಿಜಯನಗರ): ‘ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಕೂಡಲೇ ಇಲ್ಲಿನ ಉಸ್ತುವಾರಿಯಿಂದ ಮುಕ್ತಗೊಳಿಸಬೇಕು. ಇಲ್ಲದಿದ್ದರೆ, ಈಗ ಮೂರು ಬಣವಾಗಿರುವ ಕಾಂಗ್ರೆಸ್‌ ಪಕ್ಷ ಇನ್ನಷ್ಟು ಛಿದ್ರವಾಗಲಿದೆ’ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಿರಾಜ್ ಶೇಖ್ ಎಚ್ಚರಿಕೆ ನೀಡಿದರು.

‘ಜಿಲ್ಲೆಗೆ ಅಪರೂಪಕ್ಕೆ ಬರುವ ಸಚಿವರು ತಮ್ಮದೇ ವಸತಿ ಇಲಾಖೆಯ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ. ಬದಲಿಗೆ ₹ 5 ಸಾವಿರ ಕೊಟ್ಟು ಪ್ರಚಾರ ಪಡೆಯುವ ಗೀಳು ಶುರುವಾಗಿದೆ. ಅವರ ವಿರುದ್ಧ ಭಷ್ಟಾಚಾರ ದೂರುಗಳಿವೆ. ಇನ್ನಷ್ಟು ದಿನ ಉಸ್ತುವಾರಿ ಸಚಿವರಾಗಿ ಮುಂದುವರಿದರೆ, ಪಕ್ಷಕ್ಕೆ ಸರಿಪಡಿಸಲಾಗದ ಹಾನಿ ಆಗಬಹುದು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಜಮೀರ್ ಅಹಮದ್ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಖಾಸಗಿ ಏಜೆಂಟರ ಮೂಲಕ ಕೆಲಸ ಮಾಡಿಸುತ್ತಾರೆ. ಅಂಥ ಮೂರು–ನಾಲ್ಕು ಜನ ಸರ್ಕಾರಿ ವೇದಿಕೆ, ಪ್ಲೆಕ್ಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇಲ್ಲಿ ಶಾಸಕರು, ಪಕ್ಷದ ಅಧ್ಯಕ್ಷರು ಮತ್ತು ಕಾರ್ಯಕರ್ತರನ್ನು ಕಡೆಗಣಿಸಿ ತಮ್ಮ ಇಷ್ಟದಂತೆ ಕೆಲಸ ಮಾಡಿಸಿಕೊಳ್ಳುತ್ತಾರೆ’ ಎಂದು ಅವರು ಆರೋಪಿಸಿದರು.

ADVERTISEMENT

‘ಸಚಿವರು ಮುಖ್ಯಮಂತ್ರಿಗೆ ಆಪ್ತರು ಆಗಿರಬಹುದು. ಅವರ ವಿರುದ್ಧ ಮಾತನಾಡಿದ್ದಕ್ಕೆ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸುವ ಸಾಧ್ಯತೆ ಇದೆ. ಅದಕ್ಕೆ ಸಿದ್ಧನಿದ್ದೇನೆ. ಪಕ್ಷಕ್ಕೆ ಹಾನಿ ತಪ್ಪಿಸಲು ಸಚಿವರ ವಿರುದ್ಧ ಧ್ವನಿ ಎತ್ತಿದ್ದೇನೆ’ ಎಂದರು.

ಸಂಪೂರ್ಣ ಕಡೆಗಣನೆ: ‘ಪಕ್ಷದ್ದೇ ಸರ್ಕಾರವಿದ್ದರೂ ಹಂಪಿ ಉತ್ಸವದಲ್ಲಿ ಪಕ್ಷದ ಅಧ್ಯಕ್ಷ, ಕಾರ್ಯಕರ್ತರನ್ನು ಕಡೆಗಣಿಸಲಾಗಿತ್ತು. ಹೊಸಪೇಟೆ ನಗರಸಭೆ ಸದಸ್ಯರನ್ನು ಆಹ್ವಾನಿಸಿರಲಿಲ್ಲ’ ಎಂದು ಹೇಳಿದರು.

ಸಮಸ್ಯೆಗಳನ್ನು ಕೆಪಿಸಿಸಿ ಗಮನಕ್ಕೆ ತರಲಾಗಿದೆ. ಪ್ರಚಾರ ಪ್ರಿಯ ಕೆಲ ಅಧಿಕಾರಿಗಳು ಇದೀಗ ಸಚಿವರ ಖಾಸಗಿ ವ್ಯಕ್ತಿಗಳ ಜೊತೆಗೂಡಿ ಸೇರಿ ಆಡಳಿತ ನಡೆಸಿದ್ದಾರೆ. ಪಕ್ಷಕ್ಕೆ ಕೆಟ್ಟ ಹೆಸರು ಬಂದರೆ ಸಹಿಸೊಲ್ಲ
–ಸಿರಾಜ್ ಶೇಖ್ ಅಧ್ಯಕ್ಷ ಕಾಂಗ್ರೆಸ್‌ ಜಿಲ್ಲಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.