ADVERTISEMENT

ಹೊಸಪೇಟೆ| ಕಲುಷಿತ ನೀರು ಸೇವಿಸಿ ಮಹಿಳೆ ಸಾವು: ನಗರಸಭೆ ಆಯುಕ್ತ ಸೇರಿ ಮೂವರ ಅಮಾನತು

​ಪ್ರಜಾವಾಣಿ ವಾರ್ತೆ
Published 8 ಜನವರಿ 2024, 9:29 IST
Last Updated 8 ಜನವರಿ 2024, 9:29 IST
<div class="paragraphs"><p>ಹೊಸಪೇಟೆ ನಗರಸಭೆಯ ಕಾರಿಗನೂರಿನ ವಾರ್ಡ್‌ನ ದೃಶ್ಯ</p></div>

ಹೊಸಪೇಟೆ ನಗರಸಭೆಯ ಕಾರಿಗನೂರಿನ ವಾರ್ಡ್‌ನ ದೃಶ್ಯ

   

ಹೊಸಪೇಟೆ (ವಿಜಯನಗರ): ಹೊಸಪೇಟೆ ನಗರಸಭೆಯ ಕಾರಿಗನೂರಿನ ವಾರ್ಡ್‌ನಲ್ಲಿ ಕಲುಷಿತ ನೀರು ಸೇವಿಸಿ 35 ಮಂದಿ ಅಸ್ವಸ್ಥಗೊಂಡು ಸೀತಮ್ಮ ಎಂಬುವವರು ಮೃತ ಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ಆಯುಕ್ತ ಬಂಡಿವಡ್ಡರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸತೀಶ್ ಹಾಗೂ ಕಿರಿಯ ಎಂಜಿನಿಯರ್ ಖಾಜಿ ಅವರನ್ನು ಅಮಾನತುಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಸೂಚನೆ ನೀಡಿದ್ದಾರೆ.

ಮೂವರು ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಿ ಇಲಾಖಾ ವಿಚಾರಣೆ ನಡೆಸಲು ಅವರು ಜಿಲ್ಲಾಧಿಕಾರಿ ಅವರಿಗೆ ನಿರ್ದೇಶನ ನೀಡಿದ್ದಾರೆ.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಜತೆ ನಿರಂತರ ಸಂಪರ್ಕದಲ್ಲಿದ್ದು ಮಾಹಿತಿ ಪಡೆದು ಪ್ರಕರಣ ಮರು ಕಳಿಸದಂತೆ ಎಲ್ಲ ರೀತಿಯ ಮುನ್ನಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ.

ಕುಡಿಯುವ ನೀರು ಪೊರೈಕೆ ಹಾಗೂ ಒಳಚರಂಡಿ ವ್ಯವಸ್ಥೆ, ಸ್ವಚ್ಛತೆ ಬಗ್ಗೆ ನಿಗಾ ವಹಿಸುವಂತೆಯೂ ನಿರ್ದೇಶನ ನೀಡಿದ್ದಾರೆ.

ಕಾರಿಗನೂರಿನ ಶಿಕಾರಿ ಕ್ಯಾಂಪ್‌ನಲ್ಲಿ ಶುಕ್ರವಾರ ವಾಂತಿಭೇದಿ ಕಾಣಿಸಿತ್ತು. ಭಾನುವಾರದ ವರೆಗೆ 27 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲವರು ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಶಿಕಾರಿ ಕ್ಯಾಂಪ್ ಪಕ್ಕದ ಆರ್ ಬಿಎಸ್ ಎಸ್ ಎನ್ ಕ್ಯಾಂಪಿನ 66 ವರ್ಷದ ಮಹಿಳೆ ಸೀತಮ್ಮ ಅವರು ಭಾನುವಾರ ಮೃತಪಟ್ಟಿದ್ದರು.

ನಗರಸಭೆ ಪೂರೈಸಿದ ನೀರು ಕಲುಷಿತಗೊಂಡಿದ್ದೇ ವಾಂತಿಭೇದಿಗೆ ಕಾರಣ ಎಂದು ಹೇಳಲಾಗಿದ್ದು, ನೀರನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.

ನೀರು ಶುದ್ಧೀಕರಣ ಘಟಕದಲ್ಲಿ ಕ್ಲೋರಿನ್ ಗ್ಯಾಸ್ ಖಾಲಿಯಾಗಿ 15 ದಿನ ಕಳೆದಿತ್ತು, ಬ್ಲೀಚಿಂಗ್ ಪೌಡರ್ ಸಹ ಇಲ್ಲ ಎಂಬ ಮಾಹಿತಿಯನ್ನು ನಗರಸಭೆ ಅಧಿಕಾರಿಗಳು ವಾಂತಿಭೇದಿಯಿಂದ ಜನ ಅಸ್ವಸ್ಥರಾದ ಬಳಿಕ ಶನಿವಾರ ಬಹಿರಂಗಪಡಿಸಿದ್ದರು. ಇದರಿಂದ ಸಿಟ್ಟಾದ ಜಿಲ್ಲಾಧಿಕಾರಿ ಅವರು, ಈ ಮೂವರು ಅಧಿಕಾರಿಗಳಿಗೆ ಭಾನುವಾರ ಷೋಕಾಸ್ ನೋಟಿಸ್ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.