ಕರಡಿ
ಹೊಸಪೇಟೆ (ವಿಜಯನಗರ): ನಗರದ ಹೃದಯ ಭಾಗದಲ್ಲಿರುವ ಶ್ರೀರಾಮುಲು ಉದ್ಯಾನದಲ್ಲಿ ಶುಕ್ರವಾರ ಬೆಳಿಗ್ಗೆಯೇ ಎರಡು ಕರಡಿಗಳು ಓಡಾಡಿಕೊಂಡಿದ್ದು, ಜನರು ಆತಂಕಗೊಂಡಿದ್ದಾರೆ. ಕರಡಿಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ಆರಂಭವಾಗಿದೆ.
ರಾಣಿಪೇಟೆಯ ಮನೆಯೊಂದರ ಅಂಗಳದಲ್ಲಿ ಒಂದು ತಾಯಿ ಮತ್ತು ಮರಿ ಕರಡಿಗಳು ಆಡುತ್ತಿರುವುದನ್ನು ಮಹಿಳೆಯೊಬ್ಬರು ನಸುಕಿನ 4.30ರ ವೇಳೆಗೆ ಕಂಡಿದ್ದರು. ಈ ಪೈಕಿ ಒಂದು ಕರಡಿ ಸಮೀಪದ ಶ್ರೀರಾಮುಲು ಉದ್ಯಾನದಲ್ಲಿ ತಿರುಗಾಡಿದೆ. ಕೆಲವರು ಅದರ ವಿಡಿಯೊ ಚಿತ್ರೀಕರಣ ಸಹ ಮಾಡಿದ್ದಾರೆ.
ಜನ ಗುಂಪುಗೂಡುತ್ತಿದ್ದಂತೆಯೇ ಆತಂಕಗೊಂಡ ಕರಡಿ ಉದ್ಯಾನ ಹಿಂಭಾಗದ, ತೋಟಗಾರಿಕೆ ಇಲಾಖೆಗೆ ಒಳಪಟ್ಟ ಸ್ಥಳದಲ್ಲಿನ ಪೊದೆಯಲ್ಲಿ ಅಡಗಿ ಕುಳಿತಿದೆ. ಇನ್ನೊಂದು ಮರಿ ಸಹ ಅಲ್ಲೇ ಇದೆಯೋ, ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.
ಅರಣ್ಯ ಇಲಾಖೆ ಸಿಬ್ಬಂದಿ ಬೆಳಿಗ್ಗೆ 5.30ರ ಸುಮಾರಿಗೆ ಸ್ಥಳಕ್ಕೆ ಧಾವಿಸಿದ್ದರು. ಆದರೆ ಕರಡಿ ಸೆರೆಹಿಡಿಯುವ ಪರಿಕರಗಳು ಇರಲಿಲ್ಲ. ಕಮಲಾಪುರದಿಂದ ಅವುಗಳನ್ನು ತರಿಸಿಕೊಳ್ಳುವ ಹೊತ್ತಿಗೆ ಬೆಳಿಗ್ಗೆ 7.30 ಕಳೆದಿತ್ತು.
ಬಲೆ, ಬೋನು, ಅರಿವಳಿಕೆ ಇಂಜೆಕ್ಷನ್ ನೀಡುವ ಗನ್ ಸಹಿತ ಬಂದಿರುವ ಸಿಬ್ಬಂದಿ ಇದೀಗ ಕರಡಿ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಎರಡನೇ ಘಟನೆ: ಎರಡು ವರ್ಷದ ಹಿಂದೆ ರಾಣಿಪೇಟೆ ಪ್ರದೇಶಕ್ಕೆ ಕರಡಿಯೊಂದು ಬಂದಿತ್ತು. ಮನೆಯ ತಾರಸಿ ಮೇಲೆ ಬಂದಿದ್ದ ಅದನ್ನು ಅರಿವಳಿಕೆ ಇಂಜೆಕ್ಷನ್ ನೀಡಿ ಬಳಿಕ ಸೆರೆ ಹಿಡಿಯಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.