ADVERTISEMENT

ಹೊಸಪೇಟೆ | ಬಿಡುವು ನೀಡಿದ ಮಳೆ: ಸಮರ್ಪಣಾ ಸಂಕಲ್ಪ ಸಮಾವೇಶಕ್ಕೆ ಹಬ್ಬದ ಕಳೆ

​ಪ್ರಜಾವಾಣಿ ವಾರ್ತೆ
Published 20 ಮೇ 2025, 3:34 IST
Last Updated 20 ಮೇ 2025, 3:34 IST
   

ಹೊಸಪೇಟೆ: ರಾಜ್ಯದ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸಿರುವ ಪ್ರಯುಕ್ತ ಇಲ್ಲಿನ ಪುನೀತ್‌ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಸಮಪರ್ಣಾ ಸಂಕಲ್ಪ ಸಮಾವೇಶಕ್ಕೆ ರಾಜ್ಯದ ವಿವಿಧೆಡೆಗಳಿಂದ ಜನರು ಬರತೊಡಗಿದ್ದು, ಮಳೆ ಬಿಡುವು ನೀಡಿದ ಕಾರಣ ಸಮಾವೇಶಕ್ಕೆ ಹಬ್ಬದ ಕಳೆ ಬಂದಿದೆ.

ಸೋಮವಾರ ಸಂಜೆ ಮೋಡದ ವಾತಾವರಣ ಇತ್ತು, ರಾತ್ರಿ ಮಿಂಚುತ್ತಿತ್ತು ಮತ್ತು ಮಳೆ ಬರುವ ಲಕ್ಷಣ ಕಾಣಿಸಿತ್ತು. ಆದರೆ ಮಳೆ ಸುರಿಯಲಿಲ್ಲ. ಹೀಗಾಗಿ ಮೈದಾನದ ಸುತ್ತಮುತ್ತಲೆಲ್ಲ ಅಳವಡಿಸಿರುವ ಬ್ಯಾನರ್‌ಗಳು, ಬಂಟಿಂಗ್ಸ್‌, ಕಟೌಟ್‌ಗಳೆಲ್ಲ ರಾರಾಜಿಸುತ್ತಿವೆ. ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಸೋಮವಾರ ಹಲವು ಬ್ಯಾನರ್‌ಗಳು, ಕಟೌಟ್‌ಗಳು ನೆಲಕಚ್ಚಿದ್ದವು.

ಭದ್ರತೆಗಾಗಿ ರಾಜ್ಯದ ನಾನಾ ಭಾಗಗಳಿಂದ ಬಂದಿರುವ ಪೊಲೀಸರಿಗೆ ವಿವಿಧ ಹಾಸ್ಟೆಲ್‌ಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಂಗಳವಾರ ಬೆಳಿಗ್ಗೆಯೇ ಅವರು ಕರ್ತವ್ಯಕ್ಕೆ ಹಾಜರಾಗಲು ಬೇರೆ ಬೇರೆ ಕಡೆಗಳಿಗೆ ತೆರಳಿದರು. ಪ್ರವಾಸಿ ಮಂದಿರ ಸಮೀಪದ ಪಂಪ ಸಭಾಂಗಣದಲ್ಲಿ ಪೊಲೀಸರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

ADVERTISEMENT

ಮಳೆ ಸುರಿದರೂ ಸಭಾಂಗಣ ಸುಭದ್ರ: ಕ್ರೀಡಾಂಗಣದ ಸುಮಾರು ಶೇ 75ರಷ್ಟು ಭಾಗದಲ್ಲಿ ಜರ್ಮನ್‌ ಟೆಂಟ್‌ನಿಂದ ಕೂಡಿದ ಪೆಂಡಾಲ್‌ಗಳನ್ನು ಹಾಕಲಾಗಿದೆ. ಮಳೆ ಸುರಿದರೂ ಸಭಾಂಗಣದೊಳಗೆ ನೀರು ಬರದಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗಿದ್ದರೂ ಮಳೆ ಸುರಿಯದ ಕಾರಣ ಜಿಲ್ಲಾಢಳಿತದ ಹಲವು ತಲೆನೋವುಗಳು ನಿವಾರಣೆಯಾದವು. ಸದ್ಯ ಮೋಡದ ವಾತಾವರಣ ಇದ್ದರೂ ಮಳೆ ಸುರಿಯುವ ಲಕ್ಷಣ ಇಲ್ಲ. ಹೀಗಾಗಿ ಅಧಿಕಾರಿಗಳು, ಕಾಂಗ್ರೆಸ್ ಕಾರ್ಯಕರ್ತರಲ್ಲಿ ನಿರಾಳ ಭಾವ ಮೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.