ಹೊಸಪೇಟೆ: ಜಿಲ್ಲೆಯಲ್ಲಿ ಏಪ್ರಿಲ್‌ನಿಂದ ಜುಲೈವರೆಗೆ 26,293 ಟನ್ ಯೂರಿಯಾ ರಸಗೊಬ್ಬರದ ಬೇಡಿಕೆಯಿದ್ದು, ಇಲ್ಲಿಯವರೆಗೆ 30,059 ಟನ್ ಸರಬರಾಜಾಗಿರುತ್ತದೆ, ಹೀಗಾಗಿ ಜಿಲ್ಲೆಯಲ್ಲಿ ಯೂರಿಯಾದ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದ್ದಾರೆ.
ಈ ಬಗ್ಗೆ ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೇ ಬೇಡಿಕೆಗಿಂತ ಹೆಚ್ಚು ಅಂದರೆ 4,000 ಟನ್‌ಗಳಷ್ಟು ಯೂರಿಯಾ ಸರಬರಾಜಾಗಿರುತ್ತದೆ. ಆದ್ದರಿಂದ ರೈತರು ಯಾವುದೇ ಉಹಾಪೋಹಾಗಳಿಗೆ ಕಿವಿ ಕೊಡಬಾರದೆಂದು ಮನವಿ ಮಾಡಿದ್ದಾರೆ.
ಹೆಚ್ಚಿನ ದರದಲ್ಲಿ ಮಾರಾಟಗಾರರು ಮಾರಾಟ ಮಾಡಿದಲ್ಲಿ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಕ್ಕೆ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ದೂರು ನೀಡಬಹುದು. ರೈತರು ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿ.ಎ.ಪಿ ರಸಗೊಬ್ಬರಗಳನ್ನು ಸಹ ಮೆಕ್ಕೆಜೋಳದ ಬೆಳೆಗೆ ಬಳಸಬಹುದು ಎಂದು ಅವರು ಸಲಹೆ ನೀಡಿದ್ದಾರೆ.
ಉತ್ತಮ ಮಳೆ: ಜಿಲ್ಲೆಯ 18 ಹೋಬಳಿಗಳಲ್ಲಿ ಉತ್ತಮ ಮಳೆಯಾಗಿದ್ದು, 15 ಹೋಬಳಿಗಳಲ್ಲಿ ಪ್ರಮುಖವಾಗಿ ಮೆಕ್ಕೆಜೋಳ ಬಿತ್ತನೆಯಾಗಿದೆ. ಪ್ರತಿ ವರ್ಷ 1.98 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗುತ್ತಿದ್ದು, ಈ ವರ್ಷ ಮುಂಗಾರಿನಲ್ಲಿ 2.18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಹಾಲಿ ಮೆಕ್ಕೆಜೋಳ ಬೆಳೆಯಲ್ಲಿ ಯೂರಿಯಾ ರಸಗೊಬ್ಬರವನ್ನು ಮೇಲುಗೊಬ್ಬರವಾಗಿ ನೀಡಲಾಗುತ್ತಿದ್ದು, ಹೆಚ್ಚಿನ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯ ಬಿತ್ತನೆಯಾಗಿರುವುದರಿಂದ ಯೂರಿಯಾ ರಸಗೊಬ್ಬರದ ಹೆಚ್ಚಿನ ಬೇಡಿಕೆ ಇದೆ. ಅದಕ್ಕೆ ತಕ್ಕಂತೆ ಪೂರೈಕೆಯೂ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮುಂದಿನ 12 ದಿನಗಳೊಳಗೆ 2500 ಟನ್‌ಗಳಷ್ಟು ಯೂರಿಯಾ ವಿವಿಧ ಸರಬರಾಜು ಕಂಪನಿಗಳಿಂದ ಪೂರೈಕೆಯಾಗಲಿದೆ
-ಎಂ.ಎಸ್.ದಿವಾಕರ್ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.