ADVERTISEMENT

ಹೊಸಪೇಟೆ ವಿಕಾಸ ಬ್ಯಾಂಕ್‌ಗೆ ಸ್ವಂತ ಕಟ್ಟಡದ ಭಾಗ್ಯ: ನವೆಂಬರ್ 1ಕ್ಕೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 9:28 IST
Last Updated 30 ಅಕ್ಟೋಬರ್ 2025, 9:28 IST
<div class="paragraphs"><p>ಹೊಸಪೇಟೆ ವಿಕಾಸ ಬ್ಯಾಂಕ್‌</p></div>

ಹೊಸಪೇಟೆ ವಿಕಾಸ ಬ್ಯಾಂಕ್‌

   

ಹೊಸಪೇಟೆ (ವಿಜಯನಗರ): ನಗರದಲ್ಲಿ ಕಳೆದ 30 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ವಿಕಾಸ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ ಸರ್ದಾರ್ ಪಟೇಲ್‌ ಮುಖ್ಯರಸ್ತೆಯಲ್ಲಿ ನಾಲ್ಕು ಮಹಡಿಗಳ ಸ್ವಂತ ಕಟ್ಟಡ ನಿರ್ಮಿಸಿಕೊಂಡಿದ್ದು, ನ.1ರಂದು ಈ ಕಟ್ಟಡದ ಉದ್ಘಾಟನೆ ಮತ್ತು ಹಾಲಿ ಸ್ಟೇಷನ್‌ ರಸ್ತೆಯಿಂದ ಇಲ್ಲಿಗೆ ಬ್ಯಾಂಕ್‌ನ ಸ್ಥಳಾಂತರ ನಡೆಯಲಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ವಿಶ್ವನಾಥ ಚ.ಹಿರೇಮಠ ಹೇಳಿದರು.

ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ದಿನದ 24 ಗಂಟೆಯೂ ಗ್ರಾಹಕರು ಸ್ವಯಂ ಆಗಿ ನಿರ್ವಹಿಸಬಲ್ಲ ದಕ್ಷಿಣ ಭಾರತದ ಪ್ರಥಮ ಡಿಜಿಟಲ್‌ ವಾಲ್ಟ್‌ (ಲಾಕರ್‌) ಸೌಲಭ್ಯ ಇಲ್ಲಿನ ತಳಮಹಡಿಯಲ್ಲಿ 10 ತಿಂಗಳೊಳಗೆ ಆರಂಭವಾಗಲಿದೆ ಎಂದರು.

ADVERTISEMENT

ಕಟ್ಟಡದ ನೆಲಮಹಡಿಯಲ್ಲಿ ಹೊಸಪೇಟೆ ಶಾಖೆ, ಎಟಿಎಂ, ಮೊದಲ ಮಹಡಿಯಲ್ಲಿ ಬ್ಯಾಂಕ್‌ನ ಪ್ರಧಾನ ಕಚೇರಿ, ಎರಡನೇ ಮಹಡಿಯಲ್ಲಿ ಅತಿಥಿಗೃಹ, ಸಾಮಾನ್ಯ ವಸತಿ ಸೌಲಭ್ಯ, ಮೂರನೇ ಮಹಡಿಯಲ್ಲಿ ಆಡಳಿತ ಮಂಡಳಿ ಸಭಾಂಗಣ, ಸಿಬ್ಬಂದಿ ತರಬೇತಿ ಕೇಂದ್ರ, ಟೆರೇಸ್‌ನಲ್ಲಿ ಕೆಫೆಟೇರಿಯಾ, ಸಿಬ್ಬಂದಿ ಮನರಂಜನಾ ಸೌಲಭ್ಯ ಇದೆ. ಸೌರ ಇಂಧನ ಉತ್ಪಾದನಾ ಘಟಕ, ಮಳೆ ನೀರು ಸಂಗ್ರಹ ಸೌಲಭ್ಯ ಸಹಿತ ಎಲ್ಲಾ ಬಗೆಯ ಸುರಕ್ಷತಾ ವ್ಯವಸ್ಥೆಗಳಿವೆ ಎಂದರು.

ನ.1ರಂದು ಬೆಳಿಗ್ಗೆ 9.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಕೊಟ್ಟೂರು ಬಸವಲಿಂಗ ಮಹಾಸ್ವಾಮೀಜಿ ಮತ್ತು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಅವರು ಸಾನಿಧ್ಯ ವಹಿಸುವರು. ವಿ ಸಾಫ್ಟ್‌ ಸಂಸ್ಥೆಯ ಮೂರ್ತಿ ವೀರಗಂಟಿ, ಗೋದ್ರೆಜ್ ಕಂಪನಿಯ ಉಪಾಧ್ಯಕ್ಷ ಪರ್ಸಿ ಮಾಸ್ಟರ್ ಬಹಾದ್ದೂರ್‌ ಇರಲಿದ್ದಾರೆ ಎಂದು ಹೇಳಿದರು.

ಬ್ಯಾಂಕ್‌ನ ಸಲಹೆಗಾರ ವಿ.ಜೆ.ಕುಲಕರ್ಣಿ, ಹಿರಿಯ ನಿರ್ದೇಶಕರಾದ ರಮೇಶ್ ಪುರೋಹಿತ್, ಛಾಯಾ ದಿವಾಕರ್‌, ನಿರ್ದೆಶಕರಾದ ಎಂ.ವೆಂಕಪ್ಪ, ವಿಕಾಸ, ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಹಿರೇಮಠ ಇದ್ದರು.

–––––

ಈ ವರ್ಷ ಹೊಸ ಶಾಖೆ ಇಲ್ಲ

ಕಳೆದ ವರ್ಷ 10 ಹೊಸ ಶಾಖೆಗಳನ್ನು ಆರಂಭಿಸಲಾಗಿತ್ತು. ಸದ್ಯ ಬ್ಯಾಂಕ್‌ನ 18 ಶಾಖೆಗಳು ಉತ್ತರ ಮತ್ತು ಮಧ್ಯ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿವೆ. ಈ ವರ್ಷ ಇನ್ನೂ ಒಂದು ಶಾಖೆ ಆರಂಭಿಸಲು ಅನುಮತಿ ಸಿಕ್ಕಿದೆ. ಆದರೆ ಆರಂಭಿಸುತ್ತಿಲ್ಲ. ಆಳಂದ ಮತ್ತು ದಾವಣಗೆರೆ ಸಿಟಿ ಕೋ ಆಪರೇಟಿವ್ ಬ್ಯಾಂಕ್‌ಗಳನ್ನು ವಿಲೀನಗೊಳಿಸಿಕೊಳ್ಳಲು ಆಡಳಿತಾತ್ಮಕ ಅನುಮತಿ ಸಿಕ್ಕಿದೆ, ಆರ್‌ಬಿಐನಿಂದ ಒಪ್ಪಿಗೆ ಪಡೆದ ನಂತರ ವಿಲೀನ ಪ್ರಕ್ರಿಯೆ ನಡೆಯಲಿದೆ ಎಂದು ಅಧ್ಯಕ್ಷರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.