ADVERTISEMENT

ಜಿಲ್ಲಾ ಆಸ್ಪತ್ರೆಯ ಖಾಸಗೀಕರಣ ಪ್ರಸ್ತಾವಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 10:44 IST
Last Updated 16 ಜನವರಿ 2026, 10:44 IST
   

ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲಾ ಆಸ್ಪತ್ರೆ ಸಹಿತ ರಾಜ್ಯದ ಏಳು ಜಿಲ್ಲಾ ಆಸ್ಪತ್ರೆಗಳ ಖಾಸಗೀಕರಣ ಪ್ರಸ್ತಾವ ವಿರೋಧಿಸಿ ಫೆಬ್ರುವರಿ 2ರಿಂದ 17ರವರೆಗೆ ರಾಜ್ಯದಾದ್ಯಂತ ಆರೋಗ್ಯ ಹಕ್ಕಿನ ಜಾಥಾ ನಡೆಯಲಿದ್ದು, ಹೊಸಪೇಟೆಯಲ್ಲಿ ಫೆ.4ರಂದು ಈ ಪ್ರತಿಭಟನೆ ನಡೆಯಲಿದೆ ಎಂದು ಆರೋಗ್ಯ ಹಕ್ಕಿನ ಜಾಥಾ ತಂಡದ ಸದಸ್ಯೆ ವೈಶಾಲಿ ಹೇಳಿದರು.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ವಿಜಯನಗರ ಪ್ರಗತಿಪರ ಸಂಘಟನೆಗಳು, ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕಗಳ ಸಹಯೋಗದಲ್ಲಿ ಈ ಜಾಥಾ ನಡೆಯಲಿದೆ. ವಿಜಯಪುರದಲ್ಲಿ ಪಿಪಿಪಿ ಮಾದರಿಯನ್ನು ಕೈಬಿಟ್ಟ ರೀತಿಯಲ್ಲೇ ಇತರ ಜಿಲ್ಲೆಗಳಲ್ಲಿ ಸಹ ಖಾಸಗೀಕರಣ ಕೈಬಿಟ್ಟು ಸರ್ಕಾರವೇ ಆಸ್ಪತ್ರೆಗಳ ಸಂಪೂರ್ಣ ನಿರ್ವಹಣೆಯ ಹೊಣೆ ಹೊತ್ತುಕೊಂಡು ವ್ಯವಸ್ಥಿತವಾಗಿ ಆರೋಗ್ಯ ಸೇವೆ ಒದಗಿಸಬೇಕು ಎಂದರು.

ರಾಜಸ್ಥಾನದಲ್ಲಿ ಆರೋಗ್ಯ ಎಂಬುದು ಜನರ ಹಕ್ಕು ಎಂಬುದಾಗಿ ಕಾಯ್ದೆ ರೂಪಗೊಂಡಿದೆ. ಅದ ರೀತಿಯ ಕಾಯ್ದೆ ರಾಜ್ಯದಲ್ಲೂ ಜಾರಿಗೆ ಬರಬೇಕು, ಖಾಸಗಿ ವಲಯದಲ್ಲಿ ಆಸ್ಪತ್ರೆಗಳ ಶುಲ್ಕವನ್ನು ನಿಯಂತ್ರಿಸಬೇಕು, ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿಯೊಬ್ಬರಿಗೂ ಗುಣಮಟ್ಟದ ಔಷಧ ಉಚಿತವಾಗಿ ಲಭ್ಯವಾಗಬೇಕು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಗೊಳಿಸಬೇಕು ಎಂಬ ಹಕ್ಕೊತ್ತಾಯದೊಂದಿಗೆ ಈ ಜಾಥಾ ನಡೆಯಲಿದೆ ಎಂದು ಅವರು ವಿವರಿಸಿದರು.‌

ADVERTISEMENT

ವಿಜಯಪುರದಲ್ಲಿ ನಡೆದ ಹೋರಾಟದ ಬಳಿಕ ಸರ್ಕಾರ ಮೆತ್ತಗಾಗಿದೆ, ಇದೇ ರೀತಿಯ ಹೋರಾಟವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ರೂಪಿಸಿ ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸುವುದಕ್ಕೆ ಮತ್ತು ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ ಪ್ರಯತ್ನ ತಡೆಯಲು ಯತ್ನಿಸಲಾಗುವುದು ಎಂದರು.

ತಂಡದ ಸದಸ್ಯೆ ಸ್ವಾತಿ ಮಾತನಾಡಿ, ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕ (ಎಸ್‌ಎಎಕೆ) 12 ಜಿಲ್ಲೆಗಳಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ವ್ಯಕ್ತಿಗಳೂ ಔಷಧಗಳನ್ನು ಹೊರಗಿನಿಂದ ಖರೀದಿಸಲು ಭಾರಿ ದುಡ್ಡು ಖರ್ಚು ಮಾಡಬೇಕಾಗಿರುವುದು ಗೊತ್ತಾಗಿದೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯ ಆರೋಗ್ಯ ಸೇವೆಗಳು ಉಚಿತವಾಗಿಯೇ ಲಭಿಸಬೇಕು ಎಂದರು.

ವಿವಿಧ ಸಂಘಟನೆಗಳು ಮುಖಂಡರಾದ ಮಲ್ಲೇಶ್‌, ಬಿ.ಪೀರ್‌ಪಾಷಾ, ಫಾತಿಮಾ, ಜಗದೀಶ್, ಗೋವಿಂದರಾಜ್‌, ರವಿಕುಮಾರ್ ತಂಬ್ರಹಳ್ಳಿ, ರೇಣುಕಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.