ಕೂಡ್ಲಿಗಿ: ಪಟ್ಟಣದ ಶ್ರೀಮತಿ ಅಂಗಡಿ ವೀರಮ್ಮ ತಿರುಕಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಪದವಿ ವಿದ್ಯಾರ್ಥಿನಿಯರಿಗಾಗಿ ನಿರ್ಮಾಣ ಮಾಡಿರುವ ವಸತಿ ನಿಲಯ ನಿರ್ಮಾಣವಾಗಿ ಹಲವು ವರ್ಷಗಳು ಕಳೆದರೂ ಬಳಕೆಯಾಗದೆ ಕಟ್ಟಡ ಪಾಳು ಬೀಳುವಂತಾಗಿದೆ.
2014-15ನೇ ಸಾಲಿನ ಎಸ್‍ಪಿಟಿ, ಟಿಎಸ್‍ಪಿ ಯೋಜನೆಯಲ್ಲಿ ₹99.42 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. 2014ರಲ್ಲಿಯೇ ನಿರ್ಮಾಣ ಕಾರ್ಯ ಆರಂಭವಾಗಿದ್ದರೂ ಕಾಮಗಾರಿ ಕುಂಟುತ್ತ ಸಾಗಿ, ಆನೇಕ ವರ್ಷಗಳ ಕಾಲ ಅರ್ಧಕ್ಕೆ ನಿಂತಿತ್ತು.
ಎನ್.ವೈ. ಗೋಪಾಲಕೃಷ್ಣ ಅವರು ಶಾಸಕರಾದ ನಂತರ ಕಾಮಗಾರಿ ಪುನರಾರಂಭವಾಗಿ, 2021ರ ಸೆಪ್ಟೆಂಬರ್ 8ರಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರಿಂದ ವಸತಿ ನಿಲಯದ ಕಟ್ಟಡ ಉದ್ಘಾಟನೆಗೊಂಡಿತ್ತು. ಆದರೆ, ಈವರೆಗೂ ವಸತಿ ನಿಲಯ ಆರಂಭಕ್ಕೆ ಮಾತ್ರ ಕಾಲ ಕೂಡಿಬಂದಿಲ್ಲ.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳ ಆವರಣದಲ್ಲಿ ನಿರ್ಮಾಣವಾಗಿರುವ ಏಕೈಕ ವಸತಿ ನಿಲಯ ಇದು. ಸ್ಥಳೀಯ ಕಾಲೇಜಿನಲ್ಲಿ 476 ವಿದ್ಯಾರ್ಥಿನಿಯರು ವ್ಯಾಸಾಂಗ ಮಾಡುತ್ತಿದ್ದು, ಅವರಲ್ಲಿ 103 ಪರಿಶಿಷ್ಟ ಜಾತಿ, 177 ಪರಿಶಿಷ್ಟ ಪಂಗಡ ವಿದ್ಯಾರ್ಥಿನಿಯರಿದ್ದಾರೆ. ವಸತಿ ನಿಲಯದ ಸೌಲಭ್ಯವಿಲ್ಲದೆ, ಪ್ರತಿದಿನ ದೂರದ ಊರುಗಳಿಂದ ಕಾಲೇಜಿಗೆ ಅಲೆದಾಡುತ್ತಿದ್ದಾರೆ.
ವಸತಿ ನಿಲಯ ಕಟ್ಟಡದ ಸುತ್ತಮುತ್ತ ಮುಳ್ಳಿನ ಕಂಟಿ, ಗಿಡಗಳು ಬೆಳೆದುನಿಂತಿವೆ. ಕಟ್ಟಡದ ಕಿಟಕಿಯ ಗಾಜುಗಳನ್ನು ದುಷ್ಕರ್ಮಿಗಳು ಒಡೆದುಹಾಕಿದ್ದಾರೆ. ಬಿಸಿ ನೀರಿಗಾಗಿ ಛಾವಣಿ ಮೇಲೆ ಅಳವಡಿಸಿರುವ ಸೋಲಾರ್ ಯಂತ್ರ ತುಕ್ಕು ಹಿಡಿದಿದೆ. ಆದಷ್ಟು ಬೇಗ ಇವುಗಳನ್ನು ದುರಸ್ತಿಗೊಳಿಸಿ, ವಸತಿ ನಿಲಯ ಆರಂಭಿಸಬೇಕು ಎಂದು ವಿದ್ಯಾರ್ಥಿನಿಯರು ಒತ್ತಾಯಿಸಿದ್ದಾರೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಲು ಕಟ್ಟಡ ನಿರ್ಮಿಸಲಾಗಿತ್ತು. ಆದರೆ, ಹಾಸ್ಟೆಲ್ ಆರಂಭಿಸದ ಕಾರಣ, ಇಲ್ಲಿ ಬಿಎಸ್ಸಿ ತರಗತಿ ನಡೆಸಲು ಅನುಮತಿ ಕೋರಿ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ
ಎನ್.ಕಲ್ಲಪ್ಪ, ಪ್ರಾಚಾರ್ಯರು, ಎಸ್‍ಎವಿಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೂಡ್ಲಿಗಿ
ಕೂಡ್ಲಿಗಿ ಪಟ್ಟಣದಲ್ಲಿ ₹99.42 ಲಕ್ಷ ವೆಚ್ಚದಲ್ಲಿ ವಸತಿ ನಿಲಯ ನಿರ್ಮಾಣ ಉದ್ಘಾಟನೆಯಾಗಿ 3 ವರ್ಷವಾದರೂ ಇಲ್ಲ ಆರಂಭ ವಸತಿ ನಿಲಯ ಆರಂಭಿಸಲು ವಿದ್ಯಾರ್ಥಿನಿಯರ ಒತ್ತಾಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.