ಹೂವಿನಹಡಗಲಿ: ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ಶಾಸಕ ಕೃಷ್ಣನಾಯ್ಕ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದವರ ವಿರುದ್ಧ ಕ್ರಮ ಕೈಗೊಳ್ಳದ ಸರ್ಕಾರ ಉಡುಪಿ, ದಕ್ಷಿಣ ಕನ್ನಡದಲ್ಲಿ ರಾಜಕೀಯ ದುರುದ್ದೇಶದಿಂದ ಬಿಜೆಪಿ, ಆರ್‌ಎಸ್ಎಸ್ ಮುಖಂಡರ ಮೇಲೆ ಕೇಸ್ ಹಾಕಿ ಹೆದರಿಸುತ್ತಿರುವುದು ಖಂಡನೀಯ’ ಎಂದರು.
‘ರಾಜ್ಯ ಸರ್ಕಾರದ ಎಲ್ಲ ಸಚಿವರು ಹಿಟ್ಲರ್ ಆಡಳಿತ ಶುರುವಿಟ್ಟುಕೊಂಡಿದ್ದಾರೆ. ವಿರೋಧ ಪಕ್ಷದ ನಾಯಕರ ಮೇಲೂ ದಬ್ಬಾಳಿಕೆ ನಡೆಸುತ್ತಿದ್ದಾರೆ. ಎರಡು ವರ್ಷವಾದರೂ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರ ಅನುದಾನ ನೀಡಿಲ್ಲ. ಇವರ ದುರಾಡಳಿತದಿಂದ ರಾಜ್ಯದ ಅಭಿವೃದ್ಧಿ 10 ವರ್ಷ ಹಿಂದೆ ಬಿದ್ದಿದೆ’ ಎಂದು ಟೀಕಿಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಸಂಜೀವರೆಡ್ಡಿ ಮಾತನಾಡಿ, ‘ಸಮುದಾಯವೊಂದರ ಓಲೈಕೆಗಾಗಿ ಸರ್ಕಾರ ಆಡಳಿತ ಯಂತ್ರ ದುರ್ಬಳಕೆ ಮಾಡಿಕೊಂಡು ಆರ್ ಎಸ್ಎಸ್, ಸಂಘ ಪರಿವಾರದ ಮುಖಂಡರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ’ ಎಂದರು.
‘ನಟ ಕಮಲ್ ಹಾಸನ್ ಕನ್ನಡದ ಅಸ್ಮಿತೆಗೆ ಧಕ್ಕೆ ತರುವ ಹೇಳಿಕೆ ನೀಡಿದ್ದರೂ ಅವರು ಮಿತ್ರ ಪಕ್ಷದವರು ಎಂಬ ಕಾರಣಕ್ಕೆ ಸಿಎಂ, ಡಿಸಿಎಂ ತುಟಿ ಬಿಚ್ಚಲಿಲ್ಲ. ಕನ್ನಡಕ್ಕಿಂತ ನಿಮಗೆ ಪಕ್ಷದ ತತ್ವ ಸಿದ್ದಾಂತ ಮುಖ್ಯವೇ ಎಂಬುದನ್ನು ಸ್ಪಷ್ಟಪಡಿಸಿ’ ಎಂದು ಹರಿಹಾಯ್ದರು.
ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಮುಖಂಡರಾದ ಈಟಿ ಲಿಂಗರಾಜ, ಮಲ್ಲಿಕಾರ್ಜುನ ಪೂಜಾರ್, ಬೀರಬ್ಬಿ ಬಸವರಾಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.