
ಹೊಸಪೇಟೆ: ಹೊಸಪೇಟೆ ನಗರ ಮತ್ತು ವಿಜಯನಗರ ಕ್ಷೇತ್ರ ವ್ಯಾಪ್ತಿಯಲ್ಲಿರುವ 43 ಮಸೀದಿಗಳ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ₹3 ಕೋಟಿ ಒದಗಿಸಲಾಗುವುದು, ಶೀಘ್ರ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಕಳುಹಿಸಿ ಅಂದಾಜು ಪಟ್ಟಿ ತಯಾರಿಸಲಾಗುವುದು ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.
ಕರ್ನಾಟಕ ರಾಜ್ಯ ನದಾಫ್/ ಪಿಂಜಾರ ಸಂಘ ಮತ್ತು ಖ್ವಾಜಾ ಗರೀಬ್ ನವಾಜ್ ಟ್ರಸ್ಟ್ ಹೊಸಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಇಲ್ಲಿ ನಡೆದ ಪಿಂಜಾರ ಮತ್ತು ಮುಸ್ಲಿಂ ಸಮುದಾಯದ ಹತ್ತು ಜೋಡಿಗಳ ಸಾಮಾಹಿಕ ಸರಳ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಈ ಭರವಸೆ ನೀಡಿದರು.
‘ನಾನು ಹಿಂದೂಗಳಂತೆ ಮುಸ್ಲಿಂ ಸಮುದಾಯವನ್ನು ಸಹ ಸಮಾನವಾಗಿ ಗೌರವಿಸುತ್ತೇನೆ. ಯಾರು ಕರೆದರೂ ಅಲ್ಲಿಗೆ ಹೋಗುತ್ತೇನೆ. ಹಿಂದೂಗಳಲ್ಲಿ ಸಹ ಇನ್ನೂ ಅನೇಕ ಸಣ್ಣ ಸಮುದಾಯಗಳು ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಮನವಿ ಸಲ್ಲಿಸಿದರೆ ಅದಕ್ಕೂ ಸ್ಪಂದಿಸುತ್ತೇನೆ’ ಎಂದು ಹೇಳಿದ ಶಾಸಕರು, ‘ಪಿಂಜಾರ ಸಮುದಾಯ ಭವನಕ್ಕಾಗಿ ರಿಯಾಯಿತಿ ದರದಲ್ಲಿ ಸಿಎ ಸೈಟ್ ದೊರಕಿಸಿಕೊಡಲು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಲಿದ್ದೇನೆ, ಅದು ಖಂಡಿತ ಈಡೇರುವ ವಿಶ್ವಾಸ ಇದೆ’ ಎಂದರು.
ಹಿರೇಹಾಳ್ ಇಬ್ರಾಹಿಂ ಸಾಹೇಬರು ತಮ್ಮ ಕುಟುಂಬದ ಜತೆಗೆ ನಿಕಟ ಸಂಪರ್ಕ ಹೊಂದಿದ್ದವರು ಎಂದು ಸ್ಮರಿಸಿದ ಅವರು, ಹಿರೇಹಾಳ್ ಅವರ ಹೆಸರನ್ನೇ ವೇದಿಕೆಗೆ ಇಟ್ಟಿದ್ದು ಇನ್ನಷ್ಟು ಅರ್ಥಪೂರ್ಣ ಎಂದರು.
ಸರ್ಕಾರದ ಯೋಜನೆ ಬಳಸಿಕೊಳ್ಳಿ: ದುಂದುವೆಚ್ಚದ ಮದುವೆ ಬದಲಿಗೆ ಸರಳ ಸಾಮೂಹಿಕ ವಿವಾಹದತ್ತ ಹೆಚ್ಚಿನ ಆಸಕ್ತಿ ತಳೆಯಬೇಕು ಮತ್ತು ಸರ್ಕಾರ ನೀಡುವ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದ ಶಾಸಕರು, ನೂತನ ವಧುವಿನ ಹೆಸರಲ್ಲಿ ಸರ್ಕಾರದಿಂದ ನೀಡಲಾದ ತಲಾ ₹50 ಸಾವಿರದ ಚೆಕ್‌ಗಳನ್ನು ವಿತರಿಸಿದರು.
ವಧುವರರಿಗೆ ಅಗತ್ಯವಾದ ಕಾಟ್, ಕಪಾಟು, ಅಡುಗೆಮನೆ ಸಾಮಗ್ರಿ ಸಹಿತ ಹಲವು ವಸ್ತುಗಳನ್ನು ಶಾದಿಮಹಲ್ ಸಮೀಪದಲ್ಲಿ ಇರಿಸಲಾಗಿತ್ತು. ಶಾಸಕರು ಇವುಗಳನ್ನು ಸಹ ಗಮನಿಸಿ, ಶುಭ ಹಾರೈಸಿದರು. ವಿಧಾನ ಮಂಡಲ ಅಧಿವೇಶದಲ್ಲಿ ಇದ್ದರೂ ಶಾಸಕರು ಈ ಮದುವೆಗಾಗಿಯೇ ವಿಮಾನದಲ್ಲಿ ಬಂದಿದ್ದರು.
ಇದೇ ಮೊದಲ ಬಾರಿಗೆ ಸಾಮೂಹಿಕ ವಿವಾಹ ಈಗಾಗಲೇ ಹಲವು ಸಣ್ಣ ಸಮುದಾಯಗಳಿಗೆ ನೆರವು ಮನವಿ ಸಲ್ಲಿಸಿದರೆ ಇನ್ನಷ್ಟು ನೆರವಿಗೆ ಸಿದ್ಧ ಎಂದ ಶಾಸಕ
ಸಾವಿರಾರು ಮಂದಿಗೆ ಬಿರಿಯಾನಿ ಸಾಮೂಹಿಕ ವಿವಾಹದಲ್ಲಿ ಮೂರು ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಎಲ್ಲರಿಗೂ ಬಿರಿಯಾನಿ ವ್ಯವಸ್ಥೆ ಮಾಡಲಾಗಿತ್ತು. ಸಂಜೆ 4ರವರೆಗೂ ಊಟ ನಡೆದೇ ಇತ್ತು. ಶಾಸಕ ಗವಿಯಪ್ಪ ಅವರು ಊಟಕ್ಕೆ ವೈಯಕ್ತಿಕವಾಗಿ ₹3 ಲಕ್ಷ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.