ADVERTISEMENT

ಇನ್ನರ್‌ವೀಲ್; ಲಕ್ಷ ಬಾಲಕಿಯರಿಗೆ ಎಚ್‌ಪಿವಿ ಲಸಿಕೆ ಗುರಿ: ಜಯಶ್ರೀ ರಾಜಗೋಪಾಲ್

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 5:51 IST
Last Updated 13 ಜುಲೈ 2025, 5:51 IST
ಜಯಶ್ರೀ ರಾಜಗೋಪಾಲ್‌
ಜಯಶ್ರೀ ರಾಜಗೋಪಾಲ್‌   

ಹೊಸಪೇಟೆ (ವಿಜಯನಗರ): ಇನ್ನರ್‌ವೀಲ್‌ 316ರ ಜಿಲ್ಲಾಧ್ಯಕ್ಷರಾಗಿ ಇದೇ 16ರಂದು ಇಲ್ಲಿ ಪದಗ್ರಹಣ ಮಾಡಲಿರುವ ಜಯಶ್ರೀ ರಾಜಗೋಪಾಲ್‌, ತಮ್ಮ ವರ್ಷದ ಯೋಜನೆಯನ್ನು ರೂಪಿಸಿಕೊಂಡಿದ್ದು, ಒಂದು ಲಕ್ಷ ಬಾಲಕಿಯರಿಗೆ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವ ಎಚ್‌ಪಿವಿ ಲಸಿಕೆಯನ್ನು ಉಚಿತವಾಗಿ ಹಾಕಿಸುವ ಗುರಿ ಇದೆ ಎಂದಿದ್ದಾರೆ.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪೋಲಿಯೊ ನಿರ್ಮೂಲನೆಗೆ ರೋಟರಿ ಶ್ರಮಿಸಿದಂತೆ ಗರ್ಭಕಂಠ ಕ್ಯಾನ್ಸರ್ ನಿರ್ಮೂಲನೆಗೆ ಸಹ ಇನ್ನರ್‌ವೀಲ್‌ ಶ್ರಮಿಸಲಿದೆ. ₹1,200 ಬೆಲೆಯ ಲಸಿಕೆಯ ವೆಚ್ಚವನ್ನು ಸಂಸ್ಥೆಯೇ ಭರಿಸಲಿದೆ. ಕಂಪನಿಗಳ ಸಿಎಸ್‌ಆರ್ ನಿಧಿಯನ್ನು ಇದಕ್ಕೆ ಬಳಸಿಕೊಳ್ಳಲು ಪ್ರಯತ್ನಿಸಲಾಗುವುದು’ ಎಂದರು.

‘ಶಾಲೆಗಳಲ್ಲಿ ಸ್ವಚ್ಛತೆ, ಉತ್ತಮ, ಕೆಟ್ಟ ಸ್ಪರ್ಶದ ಅರಿವು ಮೂಡಿಸುವ ಮೂಡಿಸುವ ಜಾಗೃತಿ, ಪ್ಲಾಸ್ಟಿಕ್ ನಿರ್ಮೂಲನೆ, ಪರಿಸರ ಸಂರಕ್ಷಣೆ, ಯುವ ಸಮೂಹದ ಬೌದ್ಧಿಕ ಬೆಳವಣಿಗೆ, ಮಾರ್ಗದರ್ಶನ ಕಾರ್ಯಕ್ರಮಗಳ ಮೂಲಕ ಸಮಗ್ರ ಅಭಿವೃದ್ಧಿಗೆ ಇನ್ನರ್‌ವೀಲ್ ಶ್ರಮಿಸಲಿದೆ’ ಎಂದು ಹೇಳಿದರು.

ADVERTISEMENT

ಪದಗ್ರಹಣ: ‘ನಗರದ ಪ್ರಿಯದರ್ಶಿನಿ ಪ್ರೈಡ್‌ನಲ್ಲಿ ಜುಲೈ 16ರಂದು ನಡೆಯಲಿರುವ ಪದಗ್ರಹಣ ಸಮಾರಂಭದಲ್ಲಿ ರಾಷ್ಟ್ರೀಯ ಅಧ್ಯಕ್ಷೆ  ಜ್ಯೋತಿ ಮಹಿಪಾಲ್ (ಕೊಲ್ಕತ್ತಾ), ನಿಕಟಪೂರ್ವ ಜಿಲ್ಲಾಧ್ಯಕ್ಷೆ ಸುಷ್ಮಾ ಪತಂಗೆ ಪಾಲ್ಗೊಳ್ಳುವರು’ ಎಂದರು.

ನಾಳೆಯಿಂದ  ಫ್ಯಾಷನ್ ಮೇಳ: ‘ಜುಲೈ 14 ಮತ್ತು 15ರಂದು ರೋಟರಿ ಕ್ಲಬ್‌ ಸಭಾಂಗಣದಲ್ಲಿ ವಿಶೇಷ ಫ್ಯಾಷನ್ ಮೇಳ ಹಮ್ಮಿಕೊಳ್ಳಲಾಗಿದೆ. ಜುಲೈ 15ರಂದು ಭಾರತೀಯ ಪುರಾತತ್ವ ಇಲಾಖೆಯ ಸಿಬ್ಬಂದಿಗೆ ಕಮಲಾಪುರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ’ ಎಂದು ತಿಳಿಸಿದರು.

ಮೇಘನಾ ಹಿರೇಮಠ, ರಜನಿ ಮಾನೆ, ಕ್ಲಬ್ ಅಧ್ಯಕ್ಷೆ ನೈಮಿಷಾ, ಕಾರ್ಯದರ್ಶಿ ಆರತಿ ರಾಜಾಪುರ, ಸದಸ್ಯೆ ರೇಖಾ ಪ್ರಕಾಶ್ ಇದ್ದರು.

ದೇಶದಲ್ಲಿ 27 ಇನ್ನರ್‌ವೀಲ್‌ ಜಿಲ್ಲೆ

102 ವರ್ಷಗಳ ಇತಿಹಾಸ ಇರುವ ಇನ್ನರ್‌ವೀಲ್‌ ದೇಶದಲ್ಲಿ 27 ಜಿಲ್ಲೆಗಳನ್ನು ಒಳಗೊಂಡಿದೆ. ಈ ಪೈಕಿ ಜಿಲ್ಲೆ 316  ಕರ್ನಾಟಕ ಮತ್ತು ಆಂಧ್ರಪ್ರದೇಶಗಳ 41 ಜಿಲ್ಲಾ ಇನ್ನರ್‌ವೀಲ್‌ ಕ್ಲಬ್‌ಗಳನ್ನು ಒಳಗೊಂಡಿದೆ. ಇಂತಹ ಪ್ರತಿಷ್ಠಿತ ಜಿಲ್ಲೆಯ ಅಧ್ಯಕ್ಷರಾಗಿ ಜಯಶ್ರೀ ಒಂದು ವರ್ಷ ಕಾರ್ಯಭಾರ ನಡೆಸಲಿದ್ದು 52 ವರ್ಷಗಳ ಇತಿಹಾಸ ಹೊಂದಿರುವ ಹೊಸಪೇಟೆಯ ನಾಲ್ಕನೇ ಮಹಿಳೆ ಇಂತಹ ಪ್ರತಿಷ್ಠಿತ ಹುದ್ದೆಗೆ ಏರುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.