ADVERTISEMENT

ಕೂಡ್ಲಿಗಿ: ಕಲ್ಯಾಣ ಚಾಲುಕ್ಯರ ಕಾಲದ ಶಾಸನ ಪತ್ತೆ 

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2025, 14:06 IST
Last Updated 4 ಫೆಬ್ರುವರಿ 2025, 14:06 IST
ಕೂಡ್ಲಿಗಿ ತಾಲ್ಲೂಕಿನ ಹಿರೇಕುಂಬಳಗುಂಟೆ ಗ್ರಾಮದಲ್ಲಿ ಪತ್ತೆಯಾಗಿರುವ ಕಲ್ಯಾಣ ಚಾಲುಕ್ಯರ ಕಾಲದ ಶಾಸನ
ಕೂಡ್ಲಿಗಿ ತಾಲ್ಲೂಕಿನ ಹಿರೇಕುಂಬಳಗುಂಟೆ ಗ್ರಾಮದಲ್ಲಿ ಪತ್ತೆಯಾಗಿರುವ ಕಲ್ಯಾಣ ಚಾಲುಕ್ಯರ ಕಾಲದ ಶಾಸನ   

ಕೂಡ್ಲಿಗಿ (ವಿಜಯನಗರ ಜಿಲ್ಲೆ): ‘ತಾಲ್ಲೂಕಿನ ಹಿರೇಕುಂಬಳಗುಂಟೆ ಗ್ರಾಮದಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಶಾಸನ ಪತ್ತೆಯಾಗಿದೆ’ ಎಂದು ಹೊಸಪೇಟೆಯ ಎಸ್‌ಎಸ್‌ಎಜಿಎಫ್‍ಜಿ ಕಾಲೇಜಿನ ಇತಿಹಾಸ ಉಪನ್ಯಾಸಕ ಎಚ್.ಎಂ. ತಿಪ್ಪೇಶ್ ತಿಳಿಸಿದ್ದಾರೆ.

ತಾಲ್ಲೂಕಿನ ಗ್ರಾಮವಾರು ‘ಅರಕ್ಷಿತ ಸ್ಮಾರಕಗಳ ದಾಖಲೀಕರಣ’ ಎಂಬ ಯೋಜನೆಯಲ್ಲಿ ಗ್ರಾಮವಾರು ಕ್ಷೇತ್ರ ಕಾರ್ಯ ಮಾಡುವಾಗ ಶೋಧನೆಯಾಗಿರುವ ಈ ಶಾಸನವು ಕಣ ಶಿಲೆಯಲ್ಲಿದ್ದು, ಕನ್ನಡ ಲಿಪಿಯ ಏಳು ಸಾಲುಗಳನ್ನು ಒಳಗೊಂಡಿದೆ.

ಶಾಸನದ ಮೇಲ್ಭಾಗದಲ್ಲಿ ಶೈವ ಧರ್ಮ ಸಂಕೇತಗಳಾದ ಸೂರ್ಯ, ಚಂದ್ರರ ಮಧ್ಯ ಶಿವಲಿಂಗವಿದೆ. ಸ್ವಾಸ್ತಿಶ್ರೀ ಮನಮಗಾಮಂಡಲೇಶ್ವರ ನಾಚಿದೇವರಸ ರಾಜ್ಯದಲ್ಲಿ ತಾರಣ ಸಂವತ್ಸರದಂದು ಕುಂಬಳಕುಂಟೆಯ ಹಸುಗಳನ್ನು ಮೇಹಿಸಲು ಬಮ್ಮಗೌಡ ಮಕ್ಕಳು ಭೂದಾನ ಕೊಟ್ಟ ಬಗ್ಗೆ ಶಾಸನ ತಿಳಿಸುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಶಾಸನದ ಉಳಿದ ಭಾಗ ತುಂಡಾಗಿರುವುದರಿಂದ ಹೆಚ್ಚಿನ ಮಾಹಿತಿ ಲಭ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.

ADVERTISEMENT

ಈ ಗ್ರಾಮವನ್ನು ಕಲ್ಯಾಣದ ಚಾಲುಕ್ಯರ ಕಾಲದಲ್ಲಿ ಕುಂಬಳ ಕುಂಟೆ ಎಂದೇ ಕರೆಯಾಗುತ್ತಿತ್ತು, ಅದು ಕಾಲಕ್ರಮೇಣ ಕುಂಬಳ ಕುಂಟೆ, ಕುಂಬಳಗುಂಟೆಯಾಗಿ ಪರಿವರ್ತನೆಯಾಗಿರುವುದು ಸ್ಪಷ್ಟವಾಗುತ್ತದೆ. ಶಾಸನದಲ್ಲಿ ಉಲ್ಲೇಖವಾಗಿರುವ ನಾಚಿದೇವರಸನು ಕಲ್ಯಾಣಿ ಚಾಲುಕ್ಯರ ಜಗದೇಕಮಲ್ಲನ ಕಾಲಾವಧಿಯಲ್ಲಿ ಮಹಾಮಂಡಳೇಶ್ವರನಾಗಿ ಆಡಳಿತ ನಡೆಸುತ್ತಿದ್ದು, ಕುಂಬಳಗುಂಟೆ ಗ್ರಾಮವು ಸಹ ಮಹಾಮಂಡಲೇಶ್ವರ ನಾಚಿದೇವರಸನ ಆಳ್ವಿಕೆಗೆ ಒಳಪಟ್ಟಿತ್ತೆಂಬ ಐತಿಹಾಸಿಕ ಸಂಗತಿ ಈ ಶಾಸನ ಶೋಧದಿಂದ ತಿಳಿದು ಬಂದಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.