ಮುಖ್ಯಮಂತ್ರಿ ಸಿದ್ದರಾಮಯ್ಯ
ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ಬಸವಣ್ಣ ನವರು ಅಂತರ್ಜಾತಿ ವಿವಾಹ ಉತ್ತೇಜಿಸಿದ್ದರು, ಆದೇ ರೀತಿ ಈಗ ನಾವೆಲ್ಲ ಅಂತಹ ವಿವಾಹ ಉತ್ತೇಜಿಸುವ ಅಗತ್ಯ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಲ್ಲಿ ಭಾನುವಾರ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಿರಾಜ್ ಶೇಖ್ ಅವರ ಮಗನ ಮದುವೆ ಜತೆಗೆ ಹಮ್ಮಿಕೊಂಡ ಸರ್ವಧರ್ಮ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಾತಿ ವ್ಯವಸ್ಥೆ ತೊಲಗಿ ಸಮ ಸಮಾಜ ನಿರ್ಮಾಣವಾಗಲು ಅಂತರ್ಜಾತಿ ವಿವಾಹ ಹೆಚ್ಚಬೇಕು ಎಂದರು.
ಲಂಬಾಣಿ ಸಮುದಾಯ ತಾಂಡಾ ಬಿಟ್ಟು ಹೊರಬಂದಿದ್ದನ್ನು ಕೊಂಡಾಡಿದ ಅವರು, ಇಂತಹ ಮದುವೆಗಳು ಹೆಚ್ಚು ಹೆಚ್ಚು ನಡೆಯಬೇಕು, ಶ್ರೀಮಂತರು ತಮ್ಮ ಸಂಪತ್ತನ್ನು ಇಂತಹ ಕಾರ್ಯಗಳಿಗೆ ಸ್ವಲ್ಪ ಬಳಸಬೇಕು ಎಂದರು.
ನಮ್ಮ ದೇಶದಲ್ಲಿ ಶ್ರೀಮಂತರು, ಬಡವರು ಇದ್ದಾರೆ. ಶ್ರೀಮಂತರು ಅದ್ದೂರಿಯಾಗಿ ಮದುವೆ ಮಾಡ್ತಾರೆ. ಬಡವರು ಮದುವೆ ಮಾಡಿಕೊಳ್ಳಲು ಕಷ್ಟ. ಇಂತಹ ಸಾಮೂಹಿಕ ಮದುವೆಯಲ್ಲಿ ಬಡವರ ಮದುವೆ ಮಾಡುವುದು ಉತ್ತಮ ಎಂದು ಮುಖ್ಯಮಂತ್ರಿ ಹೇಳಿದರು.
'ಮದುವೆ ಮಾಡಲು ಸಾಲ ಮಾಡ್ತಾರೆ. ಮನೆ ಆಸ್ತಿ ಒಡವೆ ಮಾರಾಟ ಮಾಡ್ತಾರೆ. ಪ್ರತಿಯೊಬ್ಬರು ಸರಳ ಮದುವೆ ಆಗಬೇಕು. ಪಕ್ಕದ ಮನೆಯವಳು ಓಲೆ ಹಾಕಿದ್ರೆ ಕಿವಿ ಕಿತ್ತುಕೊಳ್ಳಲು ಸಾಧ್ಯನಾ. ಬಡವರು ಬಡವರಾಗಿಯೇ ಸಾಯಬೇಕಾ? ಬಡವರು ಶ್ರೀಮಂತರು ಆಗಬಹುದು. ನಾವು ಯಾವ ಜಾತಿಯಲ್ಲಿಯೇ ಇದ್ದೀವಿ ಅದೇ ಜಾತಿಯಲ್ಲಿಯೇ ಇರಬೇಕು ಅಂತಾ ಏನಿಲ್ಲ' ಎಂದು ಅವರು ಪ್ರತಿಪಾದಿಸಿದರು.
ನಾವು ಜಾತ್ಯತೀತರಾಗಬೇಕು...
ಬಸವಣ್ಣನವರ ಆದರ್ಶಗಳನ್ನ ನಾವು ಪಾಲನೆ ಮಾಡಬೇಕು. ಬಸವಣ್ಣನವರು ಜನರಿಗೆ ಅರ್ಥವಾಗುವ ರೀತಿಯಲ್ಲಿ ಬೋಧನೆ ಮಾಡಿದ್ದಾರೆ. ಬಸವಣ್ಣನವರನ್ನು ನಮ್ಮ ಸರ್ಕಾರ ಸಾಂಸ್ಕೃತಿಕ ನಾಯಕ ಅಂತ ಮಾಡಿದೆ. ಕುವೆಂಪು ಹೇಳಿದಂತೆ ಹುಟ್ಟುವಾಗ ವಿಶ್ವಮಾನವರಾಗಿ ಇರುತ್ತಾರೆ. ಆದರೆ ಜಾತಿ ವ್ಯವಸ್ಥೆಯಿಂದಾಗಿ ನಾವು ಅಲ್ಪ ಮಾನವರಾಗುತ್ತೇವೆ' ಎಂದು ಮಾರ್ಮಿಕವಾಗಿ ನುಡಿದರು.
' ನಾವು ಇಂತಿಂಥ ಜಾತಿಯಲ್ಲಿ ಹುಟ್ಟುಬೇಕು ಅಂತಾ ಅರ್ಜಿ ಹಾಕಿದ್ದೀವಾ? ಒಂದು ಜಾತಿಯವರು ಇನ್ನೊಂದು ಜಾತಿಯನ್ನ ದ್ವೇಷಿಸಬಾರದು,ಪ್ರೀತಿಸಬೇಕು. ಆರ್ಥಿಕ ಸ್ವಾವಲಂಬನೆ ಆಗದಿದ್ರೆ ಜಾತಿ ವ್ಯವಸ್ಥೆ ಚಲನೆ ಆಗುವುದಿಲ್ಲ. ಜಾತಿ ವ್ಯವಸ್ಥೆ ಇನ್ನೂ ಹೋಗಿಲ್ಲ' ಎಂದರು.
ಖುಷಿ ವಿಚಾರ: ಒಬ್ಬ ಅಂಧ ಮಹಿಳೆಗೆ ಸಿರಾಜ್ ಶೇಖ್ ಮದುವೆ ಮಾಡಿಸಿದ್ದು ಖುಷಿಯ ವಿಚಾರ. ಇಬ್ರಾಹಿಂ ಮಸ್ತಾನ್ ಅಂಧ ಮಹಿಳೆ ಯಾಸ್ಮೀನ್ ಮದುವೆಯಾಗಿದ್ದಾರೆ. ನನ್ನ ಮೊದಲನೇ ಮಗ ಅಂತರ ಜಾತಿ ಮದುವೆಯಾಗಿದ್ದ, ಈಗ ಅವನು ಇಲ್ಲ. ನನ್ನ ಎರಡನೇ ಮಗ ಮದುವೆಯೇ ಆಗಿಲ್ಲ. ಎಂದರು.
'ನಾವು ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ತರುವ ಕೆಲ್ಸ ಮಾಡುತ್ತೇವೆ. ಶ್ರೀಮಂತರು ಸಾಮಾಜಿಕ ಒಳ್ಳೆಯ ಕೆಲಸ ಮಾಡಬೇಕು. ನಾವು ಸಮಾಜದಿಂದಲೇ ಸಿಎಂ ಆಗಿದ್ದೇವೆ. ನಾವು ಸಮಾಜಕ್ಕೆ ಖುಣ ತೀರಿಸುವ ಕೆಲ್ಸ ಮಾಡಬೇಕು. ಅಂಬೇಡ್ಕರ್ ಸಮಾನ ಹಕ್ಕು ಕೊಡದಿದ್ರೆ ನಾವು ಸಿಎಂ ಆಗುತ್ತಿರಲಿಲ್ಲ. ಸಂವಿಧಾನದ ಪೀಠಿಕೆಯನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು' ಎಂದು ಸಿಎಂ ಹೇಳಿದರು.
ಇಬ್ಬರು ಮಕ್ಕಳಷ್ಟೇ ಸಾಕು: ನಮ್ಮ ದೇಶದಲ್ಲಿ 140 ಕೋಟಿ ಜನಸಂಖ್ಯೆ ಇದೆ. ಚೀನಾ ದೇಶವನ್ನು ನಾವು ಹಿಂದಕ್ಕೆ ಹಾಕಿದ್ದೇವೆ. ಅರತಿಗೊಬ್ಬ ಕೀರ್ತಿಗೊಬ್ಬ ಮಕ್ಕಳು ಸಾಕು. ದೇಶದಲ್ಲಿ ಜನಸಂಖ್ಯೆ ನಿಯಂತ್ರಣ ಕೂಡ ಅವಶ್ಯಕ. ಅಧಿಕಾರ, ಸಂಪತ್ತು ಹಂಚಿಕೆಯಾಗಬೇಕು' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.