ADVERTISEMENT

ಹೊಸಪೇಟೆ | ಭರದಿಂದ ಸಾಗಿದ ಜಂಬುನಾಥ ದೇವಸ್ಥಾನದ ಸಂರಕ್ಷಣಾ ಕಾರ್ಯ

₹3.07 ಕೋಟಿ ಅಂದಾಜು ವೆಚ್ಚದಲ್ಲಿ ಕಲ್ಲು ಕಂಬಗಳು, ಚಾವಣಿಗಳ ಮರುಜೋಡಣೆ

ಎಂ.ಜಿ.ಬಾಲಕೃಷ್ಣ
Published 17 ಏಪ್ರಿಲ್ 2024, 5:18 IST
Last Updated 17 ಏಪ್ರಿಲ್ 2024, 5:18 IST
ಹೊಸಪೇಟೆ ಸಮೀಪದ ಜಂಬುನಾಥ ಗುಡ್ಡದಲ್ಲಿರುವ ಜಂಬುನಾಥ ದೇವಸ್ಥಾನದ ಈಗಿನ ಚಿತ್ರಣ  –ಪ್ರಜಾವಾಣಿ ಚಿತ್ರ
ಹೊಸಪೇಟೆ ಸಮೀಪದ ಜಂಬುನಾಥ ಗುಡ್ಡದಲ್ಲಿರುವ ಜಂಬುನಾಥ ದೇವಸ್ಥಾನದ ಈಗಿನ ಚಿತ್ರಣ  –ಪ್ರಜಾವಾಣಿ ಚಿತ್ರ   

ಹೊಸಪೇಟೆ: ಹಂಪಿ ವಿರೂಪಾಕ್ಷ ಬಿಟ್ಟರೆ ತಾಲ್ಲೂಕಿನ ಎರಡನೇ ಅತಿ ದೊಡ್ಡ ಶಿವ ದೇವಸ್ಥಾನವಾಗಿರುವ ಜಂಬುನಾಥ ದೇವಸ್ಥಾನದ ಕಲ್ಲಿನ ಕಂಬಗಳು ಮತ್ತು ಚಾವಣಿಗಳ ಸಂರಕ್ಷಣಾ ಕಾರ್ಯ ರಾಜ್ಯ ಪುರಾತತ್ವ ಇಲಾಖೆಯ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದ್ದು, ವರ್ಷದೊಳಗೆ ಮತ್ತೆ ಗತವೈಭವವನ್ನು ಮೈಗೂಡಿಸಿಕೊಂಡು ಭಕ್ತರನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸಲಿದೆ.

₹3.07 ಕೋಟಿ ವೆಚ್ಚದಲ್ಲಿ ಈ ಸಂರಕ್ಷಣಾ ಕಾರ್ಯ ಕಳೆದ ಆರು ತಿಂಗಳಿನಿಂದ ನಡೆಯುತ್ತಿದ್ದು, ಕಲ್ಲು ಕಂಬಗಳು, ಕೆತ್ತನೆ ಕೆಲಸಗಳು, ಪಂಚಾಂಗವನ್ನು ಆರು ಹಂತಗಳಲ್ಲಿ ಕ್ಯೂರಿಂಗ್ ಮಾಡಿ ಸಜ್ಜುಗೊಳಿಸುವ ಕೆಲಸ ನಡೆಯುತ್ತಿದೆ.

‘ಕೆಲವು ವರ್ಷಗಳ ಹಿಂದೆ ದೇವಸ್ಥಾನದ ಸಮೀಪದಲ್ಲೇ ನಡೆದಿದ್ದ ಗಣಿಗಾರಿಕೆಯಿಂದ ದೇವಸ್ಥಾನದ ಕೆಲವು ಕಲ್ಲು ಕಂಬಗಳು ಕುಸಿದಿದ್ದವು. ಕಲ್ಲಿನ ಚಾವಣಿಗಳಲ್ಲಿ ಬಿರುಕು ಕಾಣಿಸಿತ್ತು. ಹೀಗಾಗಿ ದೇವಸ್ಥಾನದ ಕಲ್ಲು ಮಂಟಪಗಳು, ಚಾವಣಿ ಮೂಲದಲ್ಲಿ ಹೇಗಿತ್ತೋ, ಅದೇ ರೀತಿ ಒಂದಿಷ್ಟೂ ಕುಂದುಂಟಾಗದ ರೀತಿಯಲ್ಲಿ ಸಂರಕ್ಷಣಾ ಕಾರ್ಯ ನಡೆಯುತ್ತಿದೆ. ಬಾಗಲಕೋಟೆಯ ಬಿ.ಎಸ್.ಶೆಟ್ಟರ್ ಅವರು ಟೆಂಡರ್‌ನಲ್ಲಿ ಗುತ್ತಿಗೆ ಪಡೆದಿದ್ದು, ಕಾರ್ಕಳ ಭಾಗದ ನುರಿತ ಕಲ್ಲು ಕೆತ್ತನೆಗಾರರಿಂದ ಕೆಲಸ ನಡೆಯುತ್ತಿದೆ’ ಎಂದು ರಾಜ್ಯ ಪುರಾತತ್ವ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕುಬೇರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಕೋರ್ಟ್‌ ಸೂಚನೆ: ಜಂಬುನಾಥ ದೇವಸ್ಥಾನವನ್ನು ವಿಜಯನಗರದ ಅರಸ ಪ್ರೌಢದೇವರಾಯ ನಿರ್ಮಿಸಿದ ಎಂದು ಹೇಳಲಾಗುತ್ತಿದೆ. ಕಲ್ಲಿನ ಕೆತ್ತನೆಗಳು ವಿಶಿಷ್ಟವಾಗಿದ್ದು, ಧಾರ್ಮಿಕ ಕೇಂದ್ರವಾಗಿರುವ ಈ ಕ್ಷೇತ್ರಕ್ಕೆ ಪ್ರವಾಸಿಗರನ್ನು ಸೆಳೆಯುತ್ತಿರುವುದು ಇಲ್ಲಿನ ಕಲ್ಲಿನ ಕೆತ್ತನೆಗಳೇ.  ಆದರೆ ಗಣಿಗಾರಿಕೆಯಿಂದ ದೇವಸ್ಥಾನಕ್ಕೆ ಧಕ್ಕೆ ಉಂಟಾದಾಗ ಸಾರ್ವಜನಿಕರಲ್ಲಿ ತೀವ್ರ ಆತಂಕ ಉಂಟಾಗಿತ್ತು. ವಿವಾದ ಸುಪ್ರೀಂ ಕೋರ್ಟ್‌ವರೆಗೂ ಹೋಗಿತ್ತು. ಕೊನೆಗೆ ಕೋರ್ಟ್ ಸೂಚನೆಯಂತೆ ದೇವಸ್ಥಾನದ ಸಂರಕ್ಷಣಾ ಕಾರ್ಯಗಳಿಗೆ ಪ್ರತ್ಯೇಕ  ಹಣ ತೆಗೆದಿರಿಸುವ ಕಾರ್ಯ ನಡೆಯಿತು. ಹೀಗೆ ಸಂಗ್ರಹವಾದ ದುಡ್ಡಿನಲ್ಲಿ ದೇವಸ್ಥಾನದ ಸಂರಕ್ಷಣಾ ಕಾರ್ಯ ನಡೆಯುತ್ತಿದೆ.

21ಕ್ಕೆ ಜಾತ್ರೆ: ಜಂಬುನಾಥನ ಜಾತ್ರೆ ಇದೇ 21ರಿಂದ ಆರಂಭವಾಗಲಿದ್ದು, ಅದಕ್ಕಾಗಿ ಸದ್ಯ ದೇವಸ್ಥಾನದ ಸಂರಕ್ಷಣಾ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಜಾತ್ರೆ ಕೊನೆಗೊಂಡ ಬಳಿಕ ಮತ್ತೆ ಕೆಲಸ ಆರಂಭವಾಗಲಿದೆ.

ಜಂಬುನಾಥ ದೇವಸ್ಥಾನದ ಆವರಣದಲ್ಲಿ ರಾಶಿಬಿದ್ದಿರುವ ಕಲ್ಲಿನ ಕಂಬಗಳು  –ಪ್ರಜಾವಾಣಿ ಚಿತ್ರ
ಜಂಬುನಾಥ

ಜಾಂಬವಂತ ಪೂಜಿಸಿದ ಶಿವ

ರಾಮಾಯಣದಲ್ಲಿ ಹಲವಾರು ಮಂದಿ ರಾಮನಿಗೆ ಸಹಾಯ ಮಾಡುತ್ತಾರೆ. ಅದರಲ್ಲಿ ಜಾಂಬವಂತ ಸಹ ಒಬ್ಬ. ರಾಮನ ಕೆಲಸಗಳು ನಿರ್ವಿಘ್ನವಾಗಿ ನಡೆಯಲೆಂದು ಜಾಂಬವಂತ ಶಿವನನ್ನು ಪ್ರಾರ್ಥಿಸುತ್ತಾನೆ. ಆತ ಪ್ರಾರ್ಥಿಸಿದ ಸ್ಥಳವೇ ಜಂಬುನಾಥ ಗುಡ್ಡ ಮತ್ತು ಈ ಶಿವನಿಗೆ ಅದೇ ಹೆಸರು ಬಂತು ಎಂದು ಹೇಳಲಾಗುತ್ತಿದೆ. ಜಂಬುನಾಥ ಗುಡ್ಡಕ್ಕೆ ಈಗ ಮೆಟ್ಟಿಲಿನ ವ್ಯವಸ್ಥೆ ಆಗಿದೆ ಡಾಂಬರು ಅಲ್ಲದಿದ್ದರೂ ಕಚ್ಚಾ ರಸ್ತೆ ಇದೆ. ಜನರಿಗೆ ಹೋಗಿ ಬರಲು ಸೌಲಭ್ಯ ಇದೆ. ಜಂಬುನಾಥನನ್ನು ಆರಾಧಿಸುವ ಸಾಕಷ್ಟು ಕುಟುಂಬಗಳು ಹೊಸಪೇಟೆ ಸುತ್ತಮತ್ತಲಲ್ಲಿ ಇವೆ. ಜಂಬುನಾಥ ಗುಡ್ಡಕ್ಕೆ ಹೋಗಲು ಸಾಧ್ಯವಾಗದವರಿಗಾಗಿ ವಡಕರಾಯ ದೇವಸ್ಥಾನದ ಆವರಣದಲ್ಲಿ ಜಂಬುನಾಥನನ್ನು ಪ್ರತಿಷ್ಠಾಪಿಸಿ ಪೂಜಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಕೊನೆಗೂ ಕಾಣಿಸಿದ ಆದಾಯ

ಜಂಬುನಾಥ ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆ 2021ರಲ್ಲಿ ತನ್ನ ಸ್ವಾಧೀನಕ್ಕೆ ಪಡೆದುಕೊಂಡಿತು. ಅದುವರೆಗೆ ದೇವಸ್ಥಾನಕ್ಕೆ ಎಷ್ಟು ಆದಾಯ ಬರುತ್ತಿತ್ತು ಎಂಬ ಮಾಹಿತಿಯೇ ಇರಲಿಲ್ಲ. ಮೊದಲ ವರ್ಷ ₹70 ಸಾವಿರ ಆದಾಯ ಗಳಿಸಿದ್ದ ದೇವಸ್ಥಾನದ 2023–24ನೇ ಸಾಲಿನ ಆದಾಯ ₹8.96 ಲಕ್ಷ. ಕಳೆದ ಸಾಲಿನಲ್ಲಿ ₹5.76 ಲಕ್ಷ ಆದಾಯ ಸಂಗ್ರಹವಾಗಿತ್ತು. ದೇವಸ್ಥಾನದ ಆಡಳಿತಾಧಿಕಾರಿ ಹನುಮಂತಪ್ಪ ಅವರು ವಿವಿಧ ಇಲಾಖೆಗಳ ಜತಗೆ ಸಮನ್ವಯ ಸಾಧಿಸಿ ಛಲಬಿಡದೆ ಬೆಂಬತ್ತಿದ್ದರಿಂದ ಹಾಗೂ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರ ವಿಶೇಷ ಕಾಳಜಿಯ ಕಾರಣ ದೇವಸ್ಥಾನದ ಸಂರಕ್ಷಣಾ ಕಾರ್ಯ ನಡೆಯುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.