ADVERTISEMENT

ವಿಜಯನಗರ | ಕಾರಾಗೃಹದಲ್ಲಿ ಜಾನಪದ ಗೀತ ಗಾಯನ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2022, 16:28 IST
Last Updated 4 ಸೆಪ್ಟೆಂಬರ್ 2022, 16:28 IST
ಹೊಸಪೇಟೆಯ ಉಪಕಾರಾಗೃಹದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷೆ ಅಂಜಲಿ ಬೆಳಗಲ್ ಮಾತನಾಡಿದರು
ಹೊಸಪೇಟೆಯ ಉಪಕಾರಾಗೃಹದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷೆ ಅಂಜಲಿ ಬೆಳಗಲ್ ಮಾತನಾಡಿದರು   

ಹೊಸಪೇಟೆ (ವಿಜಯನಗರ): ವಿಶ್ವ ರಂಗಭೂಮಿ ಹಾಗೂ ಜಾನಪದ ದಿನಾಚರಣೆ ಅಂಗವಾಗಿ ನಗರದ ಉಪಕಾರಾಗೃಹದಲ್ಲಿ ಭಾನುವಾರ ಜಾನಪದ ಗೀತ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕನ್ನಡ ಜಾನಪದ ಪರಿಷತ್ತು, ತಾಲ್ಲೂಕು ಉಪಕಾರಾಗೃಹದಿಂದ ಏರ್ಪಡಿಸಿದ್ದ ಕಾರ್ಯಕ್ರಮವನ್ನು ರಂಗಭೂಮಿ ಕಲಾವಿದ ಎಸ್‌.ಎಸ್‌. ಚಂದ್ರಶೇಕರ್‌ ಹಾಡುವುದರ ಮುಖೇನ ಉದ್ಘಾಟಿಸಿ, ಮನುಷ್ಯನಿಂದ ತಪ್ಪುಗಳು ಆಗುವುದು ಸಹಜ. ಅವುಗಳನ್ನು ತಿದ್ದಿಕೊಂಡು ಮನಃಪರಿವರ್ತನೆ ಮಾಡಿಕೊಂಡು ಬದುಕಬೇಕು. ಒಂದು ಕ್ಷಣದ ಕೋಪಕ್ಕೆ ಬಾಳೇ ಹಾಳಾಗುತ್ತದೆ. ಮನಸ್ಸು, ಬುದ್ಧಿ ಸಿಟ್ಟಿನ ಕೈಗೆ ಕೊಡಬಾರದು ಎಂದು ಹೇಳಿದರು.

ಉಪ ಕಾರಾಗೃಹ ಸೂಪರಿಟೆಂಡೆಂಟ್‌ ಎಂ.ಎಚ್. ಕಲಾದಗಿ ಮಾತನಾಡಿ, ಕೈದಿಗಳ ಮನಃಪರಿವರ್ತನೆಗಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದರಲ್ಲಿ ಜಾನಪದ ಗೀತೆ ಗಾಯನ ಕೂಡ ಒಂದು. ಭೂಮಿ ಮೇಲೆ ಯಾರೂ ಕೆಟ್ಟವರಾಗಿ ಬಂದಿರುವುದಿಲ್ಲ. ಪರಿಸ್ಥಿತಿಗಳು ಕೆಟ್ಟವರಾಗಿ ಮಾಡುತ್ತವೆ. ಆ ಪರಿಸ್ಥಿತಿಗೆ ಭಾವುಕರಾಗಿ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು ಎಂದರು.

ADVERTISEMENT

ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷೆ ಅಂಜಲಿ ಬೆಳಗಲ್ ಮಾತನಾಡಿ, ಕಲೆ, ಸಾಹಿತ್ಯ, ಶಿಕ್ಷಣ ಪರಿವರ್ತನೆಗೆ ದಾರಿ. ಅದರಿಂದ ಕೈದಿಗಳ ಬದುಕಿನಲ್ಲೂ ಬದಲಾವಣೆ ತರಲು ಸಾಧ್ಯ ಎಂದು ಹೇಳಿದರು.

ವಿಜಯನಗರ ಶಿಳ್ಳೆಕ್ಯಾತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿದ್ದು ಬೆಳಗಲ್, ಸಂಗೀತ ಕಲಾವಿದ ವಾಲ್ಯಾ ನಾಯ್ಕ, ರಾಜ್ಯ ಅಲೆಮಾರಿ, ಅರೆ ಅಲೆಮಾರಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಣ್ಣ ಮಾರೆಪ್ಪ, ಕಾರಾಗೃಹದ ಸಿಬ್ಬಂದಿ ಭೀಮೇಶ್, ಲಚ್ಚಣ್ಣ, ಮುಂಜುನಾಥ, ಭುವನೇಶ್ವರಿ, ರೂಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.