ಹೊಸಪೇಟೆ (ವಿಜಯನಗರ): ಗಂಗಾವತಿಯ ಶಾಸಕರಾಗಿದ್ದ ಗಣಿ ಉದ್ಯಮಿ ಜನಾರ್ದನ ರೆಡ್ಡಿ ಅವರು ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದಲ್ಲಿ ಇದೀಗ ಮತ್ತೆ ಜೈಲುಪಾಲಾಗಿದ್ದರೂ, ವಿಜಯನಗರ ಜಿಲ್ಲೆಯಲ್ಲಿ ಬಿಜೆಪಿ ಈಗಲೂ ಅವರ ಮೇಲೆ ಬಹಳ ವಿಶ್ವಾಸ ಇಟ್ಟುಕೊಂಡಿದೆ. ರೆಡ್ಡಿ ಬೇಗ ಜಾಮೀನಿನ ಮೇಲೆ ಹೊರಬರುತ್ತಾರೆ ಎಂದು ಪಕ್ಷ ನಂಬಿದೆ.
‘ಜಿಲ್ಲೆಯಲ್ಲಿ ಜನಾರ್ದನ ರೆಡ್ಡಿ ಅವರ ಪ್ರಭಾವ ಈಗಲೂ ದಟ್ಟವಾಗಿಯೇ ಇದೆ. ಈ ಹಿಂದೆ ಅವರು ಇಲ್ಲದಿದ್ದಾಗ ಪಕ್ಷ ದೃಢವಾಗಿ ನಿಂತಿತ್ತು, ಪಕ್ಷದಲ್ಲಿ ನಾಯಕತ್ವ ಕೊರತೆ ಇಲ್ಲ. ಆದರೆ ರೆಡ್ಡಿ ಅವರು ಜಾಮೀನು ಪಡೆದು ಮತ್ತೆ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂಬ ಬಲವಾದ ವಿಶ್ವಾಸ ನಮಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಸಂಜೀವ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.
ಹೊಂದಾಣಿಕೆ ರಾಜಕಾರಣ
ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೊಂದಾಣಿಕೆ ರಾಜಕಾರಣ ಬಗ್ಗೆ ಕೆಂಡ ಉಗುಳುತ್ತಲೇ ಇದ್ದು, ತಮ್ಮ ಖಡಕ್ ಮಾತಿನಿಂದಾಗಿ ಪಕ್ಷದಿಂದ ಉಚ್ಛಾಟನೆಗೊಳ್ಳುವಂತಾಗಿದೆ. ಆದರೆ ಹೊಂದಾಣಿಕೆ ರಾಜಕಾರಣದ ಬೇರು ವಿಜಯನಗರ ಜಿಲ್ಲೆಯಲ್ಲೇ ಆಳವಾಗಿದೆ. ಹಾಗೆ ಮಾಡಿದವರು ಆರಾಮವಾಗಿದ್ದಾರೆ, ಹೊಂದಾಣಿಕೆ ಮಾಡದವರು ಜೈಲಿಗೆ ಹೋಗುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂಬ ಮಾತು ಜಿಲ್ಲೆಯಲ್ಲಿ ಕೇಳಿಬರುತ್ತಿದೆ.
‘ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಮಾಡಿ ಜೈಲಿಗೆ ಹೋಗಿ ಬಂದವರು, ಮತ್ತೆ ಜೈಲು ಸೇರಿದ್ದಾರೆ. ಅವರಂತೆಯೇ ಅಕ್ರಮ ಗಣಿಗಾರಿಕೆ ಮಾಡಿದವರು ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಎಷ್ಟು ಮಂದಿ ಇಲ್ಲ? ಅವರಿಗೆ ಏನೂ ಆಗಿಲ್ಲ ಏಕೆ ಎಂದರೆ ಅವರು ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ. ಜನಾರ್ದನ ರೆಡ್ಡಿ ಅವರಿಗೆ ಯಾರ ಮೇಲೆಯೂ ವಿಶ್ವಾಸ ಇಲ್ಲದಿದ್ದರೂ, ಅವರು ಹೊಂದಾಣಿಕೆ ಮಾಡುವವವರು ಅಲ್ಲ, ಇತರರು ಅವರಿಂದ ಪಕ್ಷ ನಿಷ್ಠೆ ಕಲಿಯಬೇಕು’ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಮುಖಂಡರೊಬ್ಬರು ತಿಳಿಸಿದರು.
ರಾಮುಲು ಸಿಟ್ಟು ಶಮನ?:
ಸಂಡೂರು ಉಪಚುನಾವಣೆಯಲ್ಲಿ ಬಂಗಾರು ಹನುಮಂತ ಅವರ ಪರವಾಗಿ ಜನಾರ್ದನ ರೆಡ್ಡಿ ಜತೆಗೆ ಸಂಘ ಪರಿವಾರ ಭಾರಿ ಕೆಲಸ ಮಾಡಿತ್ತು. ಹೀಗಾಗಿ ಅವರು ಗೆಲುವಿನ ಸಮೀಪಕ್ಕೆ ಬರುವುದು ಸಾಧ್ಯವಾಗಿತ್ತು. ಆದರೆ ರೆಡ್ಡಿ ಕೈಮೇಲಾಗಬಾರದು ಎಂಬ ಕಾರಣಕ್ಕೆ ಬಿಜೆಪಿಯಲ್ಲಿದ್ದವರೇ ಚಿತಾವಣೆ ನಡೆಸಿದ್ದರಿಂದ ಬಂಗಾರು ಅವರಿಗೆ ಕಡಿಮೆ ಅಂತರದಲ್ಲಿ ಸೋಲಾಗಬಹುದು ಎಂಬುದು ಚುನಾವಣೆಗೆ ಮೊದಲೇ ಅಂದಾಜಿಸಲಾಗಿತ್ತು. ಬಳಿಕ ಅದರಂತೆಯೇ ಆಯಿತು. ಸಂಡೂರಿನಲ್ಲಿ ರಾಮುಲು ಕೆಲಸ ಮಾಡಲಿಲ್ಲ ಎಂಬ ದೂರನ್ನು ಹೈಕಮಾಂಡಿಗೆ ಕೊಟ್ಟ ಬಳಿಕ ನಡೆದ ವಿದ್ಯಮಾನ ಇಡೀ ರಾಜ್ಯಕ್ಕೆ ತಿಳಿದ ಸಂಗತಿ. ರೆಡ್ಡಿ ಜೈಲು ಪಾಲಾಗಿದ್ದರಿಂದ ಬಿಜೆಪಿಯಲ್ಲಿರುವ ಹಲವರು ಒಳಗೊಳಗೇ ಖುಷಿಗೊಂಡಿದ್ದಾರೆ ಎಂದು ಪಕ್ಷದ ಮುಖಂಡರೊಬ್ಬರು ಹೇಳಿದರು.
‘ಜನಾರ್ದನ ರೆಡ್ಡಿ ಮತ್ತು ಜಿಲ್ಲೆಯ ಇತರ ಕೆಲವು ನಾಯಕರ ಪಕ್ಷ ನಿಷ್ಠೆ ಗಮನಿಸಿದರೆ ರೆಡ್ಡಿ ಎಂದಿಗೂ ಪಕ್ಷಕ್ಕೆ ದ್ರೋಹ ಬಗೆದವರಲ್ಲ, ಪಕ್ಷ ಬಿಟ್ಟು ಹೊಸ ಪಕ್ಷ ಕಟ್ಟಿದಾಗಲೂ ವಾಜಪೇಯಿ, ಯಡಿಯೂರಪ್ಪ, ಸುಷ್ಮಾ ಸ್ವರಾಜ್ ಅವರನ್ನು ಟೀಕಿಸಿದವರೇ ಅಲ್ಲ. ಆದರೆ ಹೊಸಪೇಟೆಯ ಬಿಜೆಪಿಯ ಪ್ರಭಾರಿ ನಾಯಕರೊಬ್ಬರು ತಮ್ಮ ರಾಜಕೀಯ, ಉದ್ಯಮ ವ್ಯವಹಾರಕ್ಕಾಗಿ ಹೇಗೆ ಹೊಂದಾಣಿಕೆ ರಾಜಕೀಯ ಮಾಡಿಕೊಂಡರು ಎಂಬುದು ಜಿಲ್ಲೆಯ ಜನತೆಗೆ ಗೊತ್ತಿದೆ. ಅವರಂತೆ ಅನೇಕರು ಭಾರಿ ಅಕ್ರಮ ಮಾಡಿಯೂ ಬಚಾವಾಗಿರುವುದರ ಗುಟ್ಟು ಇರುವುದೇ ಹೊಂದಾಣಿಕೆ ರಾಜಕಾರಣದಲ್ಲಿ’ ಎಂದು ಅವರು ತಿಳಿಸಿದರು.
ಅಖಂಡ ಬಳ್ಳಾರಿಗೆ ಜನಾರ್ದನ ರೆಡ್ಡಿ ದೊಡ್ಡ ಶಕ್ತಿ ಮೇಲ್ಮಟ್ಟದ ನ್ಯಾಯಾಲಯದಲ್ಲಿ ಅವರಿಗೆ ಜಾಮೀನು ದೊರೆತು ಬೇಗ ಬಿಡುಗಡೆಯಾಗುವ ವಿಶ್ವಾಸ ಇದೆಬಂಗಾರು ಹನುಮಂತ ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ
ಜಿಲ್ಲೆಯಲ್ಲಿ ನಾಯಕತ್ವ ಕೊರತೆ ಇಲ್ಲ ಆದರೆ ಜನಾರ್ದನ ರೆಡ್ಡಿ ಅವರು ಶೀಘ್ರ ಜೈಲಿನಿಂದ ಹೊರಬಂದು ಮತ್ತೆ ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗುತ್ತಾರೆ ಎಂಬ ಪೂರ್ಣ ಭರವಸೆ ಇದೆಎಸ್.ಸಂಜೀವ ರೆಡ್ಡಿ ಅಧ್ಯಕ್ಷ ಬಿಜೆಪಿ ಜಿಲ್ಲಾ ಘಟಕ
ಕಾಡಲಿದೆಯೇ ನಾಯಕತ್ವ ಕೊರತೆ?
ಕೆಲವೇ ತಿಂಗಳಲ್ಲಿ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದ್ದು ಜಾಮೀನು ದೊರೆತು ಜನಾರ್ದನ ರೆಡ್ಡಿ ಜೈಲಿನಿಂದ ಹೊರಬರದಿದ್ದರೆ ನಾಯಕತ್ವ ಕೊರತೆ ಕಾಡಬಹುದು ಎಂಬ ಆತಂಕ ಇದೆ. ಆದರೆ ಪಕ್ಷದ ನಾಯಕರು ಇದನ್ನು ಅಲ್ಲಗಳೆಯುತ್ತಿದ್ದಾರೆ. ‘ರೆಡ್ಡಿ ಒಬ್ಬ ಸಮರ್ಥ ನಾಯಕ ಎಂಬುದಂತೂ ಸತ್ಯ. ಆದರೆ ಅವರ ಅನುಪಸ್ಥಿತಿಯಲ್ಲೂ ಪಕ್ಷ ಸಮರ್ಥವಾಗಿ ಹಲವು ಚುನಾವಣೆಗಳನ್ನು ಎದುರಿಸಿದೆ ಬೂತು ಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸುವ ಕೆಲಸ ನಡೆದಿದೆ. ಹೀಗಾಗಿ ಪಕ್ಷಕ್ಕೆ ಅಂತಹ ಹಾನಿ ಇಲ್ಲ ಅವರಿದ್ದರೆ ಪಕ್ಷದ ಶಕ್ತಿಯ ಮಟ್ಟವೇ ಬೇರೆ’ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಸಂಜೀವ ರೆಡ್ಡಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.