ADVERTISEMENT

ಮಲ್ಲಿಗೆ ಬೆಲೆ ಕುಸಿತ; 2 ಕ್ವಿಂಟಾಲ್ ಮೊಗ್ಗು ಉಚಿತವಾಗಿ ಹಂಚಿದ ಬೆಳೆಗಾರರು

ಸಿ.ಶಿವಾನಂದ
Published 14 ಜುಲೈ 2024, 5:22 IST
Last Updated 14 ಜುಲೈ 2024, 5:22 IST
   

ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ಮಲ್ಲಿಗೆ ಮೊಗ್ಗು ದಿಢೀರ್ ಬೆಲೆ ಕುಸಿತ ಕಂಡ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಳೆಗಾರರು ಇರುವ ಪಿಂಜಾರ್ ಹೆಗ್ಡಾಳು ಗ್ರಾಮದಲ್ಲಿ ಮೊಗ್ಗನ್ನು ಉಚಿತವಾಗಿ ಹಂಚಿದರು.

ಪ್ರತಿ ವರ್ಷ ಮೊಹರಂ ಹಬ್ಬದ ಮುನ್ನ ರೈತರಿಗೆ ಕೈತುಂಬಾ ಲಾಭ ದೊರೆಯುತ್ತಿತ್ತು, ಈ ಬಾರಿ ಮಾರಾಟ ಮಾಡಿದರೆ ನಷ್ಟ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ. ಈ ಹಿನ್ನೆಲೆಯಲ್ಲಿ ಕಟಾವು ಮಾಡಿದ ಮಲ್ಲಿಗೆಯನ್ನು ಉಚಿತವಾಗಿ ಬಸ್ ಸೇರಿದಂತೆ ಈ ರಸ್ತೆಯಲ್ಲಿ ಸಂಚರಿಸಿದ ವಾಹನಗಳ ಪ್ರಯಾಣಿಕರಿಗೆ ಪ್ರತಿಯೊಬ್ಬರಿಗೂ ಅರ್ಧ ಕೆ.ಜಿಯಷ್ಟು ಹಂಚಿದರು. ಮೊಗ್ಗು ಕಿತ್ತ ಕೂಲಿ ಮೊತ್ತದ ನಷ್ಟವನ್ನು ಲೆಕ್ಕಿಸದೇ ಅವರು ಉಚಿತವಾಗಿ ಹಂಚಿದ್ದು, ಪ್ರಯಾಣಿಕರನ್ನು ಸಂತಸ ಪಡಿಸಿದರು.

ತಾಲ್ಲೂಕಿನ ಪಿಂಜಾರ್ ಹೆಗ್ಡಾಳು ಗ್ರಾಮದಲ್ಲಿ 162 ಜನ ರೈತರು 350 ಎಕರೆ ಪ್ರದೇಶದಲ್ಲಿ ಹಡಗಲಿ ಮಲ್ಲಿಗೆ (ಸುವಾಸನೆ ಮಲ್ಲಿಗೆ), ದುಂಡುಮಲ್ಲಿಗೆ ಬೆಳೆದಿದ್ದಾರೆ. ಪ್ರತಿ ವರ್ಷ ಮೊಹರಂ ಸಂದರ್ಭದಲ್ಲಿ ಪ್ರತಿ ಕೆ.ಜಿಗೆ ₹350 ರಿಂದ ₹400 ರ ವರೆಗೂ ಉತ್ತಮ ಬೆಲೆ ದೊರೆಯುತ್ತಿತ್ತು. ಈ ಬಾರಿ ಹೊಸಪೇಟೆ ಮತ್ತು ಶಿವಮೊಗ್ಗ ಮಾರುಕಟ್ಟೆಯಲ್ಲಿ ಬೆಳಿಗ್ಗೆ ಕೆ.ಜಿ. ಗೆ ₹100, ಸಂಜೆ ಕೇವಲ ₹60 ರಂತೆ ಮಾರಾಟವಾಗುತ್ತಿದೆ. ರೈತರು ಕೀಳುವ ಮೊಗ್ಗಿಗೆ ಪ್ರತಿ ಕೆ.ಜಿ. ₹100 ಕೂಲಿ ಕೊಡಬೇಕು, ಜತೆಗೆ ಸಾಗಣೆ ವೆಚ್ಚದ ಜತೆಗೆ ಖರೀದಿದಾರರಿಗೆ ಕಮಿಷನ್ ನೀಡಬೇಕು. ಈ ಸಂದರ್ಭದಲ್ಲಿ ಮಾರಾಟ ಮಾಡಿದ ರೈತರೆಲ್ಲಾ ಕೆ.ಜಿ.ಗೆ ₹ 60 ನಷ್ಟವನ್ನು ಭರಿಸಲೇಬೇಕು.

ADVERTISEMENT

ಇದರಿಂದಾಗಿ ಮಲ್ಲಿಗೆ ಬೆಳೆದ ಗ್ರಾಮದ ರೈತರು ನಷ್ಟ ಭರಿಸಲಾರದೇ ಪಿಂಜಾರ್ ಹೆಗ್ಡಾಳ್ ಮಾರ್ಗವಾಗಿ ಹೊಸಪೇಟೆ ಮತ್ತು ದಾವಣಗೆರೆ ಕಡೆಗೆ ತೆರಳುವ ಬಸ್ ಪ್ರಯಾಣಿಕರಿಗೆ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‍ಗಳಲ್ಲಿ 2 ಕ್ವಿಂಟಾಲ್‍ನಷ್ಟು ಮಲ್ಲಿಗೆ ಮೊಗ್ಗು ತುಂಬಿ ತುಂಬಿ ಕಳಿಸಿದರು. ಈ ತಿಂಗಳಲ್ಲಿ ನಷ್ಟವಾಗಿದ್ದರೂ ಮುಂದಿನ ತಿಂಗಳು ಶ್ರಾವಣದಲ್ಲಿ ಲಾಭದ ನಿರೀಕ್ಷೆ ಹೊಂದಿದ್ದಾರೆ. ಆದರೆ ಅಷ್ಟೊತ್ತಿಗೆ ಇಳುವರಿ ಕಡಿಮೆ ಆಗುವ ಆತಂಕವೂ ರೈತರಲ್ಲಿದೆ.

ಪ್ರತಿ ವರ್ಷ ಮೊಹರಂ ಸಂದರ್ಭದಲ್ಲಿ ಮಲ್ಲಿಗೆ ಕೈ ಹಿಡಿಯುತ್ತಿತ್ತು, ಈ ಬಾರಿ ಕಾಕಡಾ ಮಾರುಕಟ್ಟೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಹಡಗಲಿ ಮಲ್ಲಿಗೆಗೆ ಬೆಲೆ ಕುಸಿದಿದ್ದು, ರೈತರಿಗೆ ಅಪಾರ ನಷ್ಟವಾಗಿದೆ.
–ಜೆ.ಎಂ.ಪ್ರಜಾಸಿಂಹ ವೀರಸಂಗಯ್ಯ, ಮಲ್ಲಿಗೆ ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.